ಐಟಿ- ಬಿಟಿ ಸ್ಟಾರ್ಟ್‌ಅಪ್‌ ಇನ್‌ಕ್ಯೂಬೇಷನ್ ಕೇಂದ್ರ ಲೋಕಾರ್ಪಣೆ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ..

ಬೆಂಗಳೂರು,ಜು,31,2020(www.justkannada.in):  ರಾಜ್ಯದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸುಮಾರು 34 ಕೋಟಿ ರೂ. ವೆಚ್ಚದಲ್ಲಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಐಟಿ-ಬಿಟಿ ಸ್ಟಾರ್ಟ್‌ಅಪ್ ಮತ್ತು ಇನ್‌ಕ್ಯೂಬೇಷನ್ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 75,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರವನ್ನು ತೆರೆಯಲಾಗಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ಇದನ್ನು ಅಭಿವೃದ್ಧಿಪಡಿಸಿದೆ. ಇದರಿಂದ ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳನ್ನು ಉತ್ತೇಜಿಸುವ ನಮ್ಮ ಗುರಿಗೆ ಮತ್ತಷ್ಟು ವೇಗ ಬರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.it-bt-startup-incubation-center-cm-bs-yeddyurappa

ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ರಾಜ್ಯ ಯಶಸ್ವಿಯಾಗಿ ಮುಂದೆ ಹೋಗುತ್ತಿದೆ. ನಮ್ಮಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕವೂ ಎಲ್ಲ ಕ್ಷೇತ್ರಗಳಲ್ಲಿಯೂ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ನುಡಿದರು.

ಇದೇ ವೇಳೆ ಈ ಕೇಂದ್ರದ ಪಕ್ಕ ಇರುವ ಬಿಡಿಎ ಜಾಗವನ್ನು ಕಿಯೋನಿಕ್ಸ್‌ ಗೆ ನೀಡಬೇಕೆಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಮುಂದಿಟ್ಟ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಡಿಜಿಟಲ್ ಎಕಾನಮಿ ಮಿಷನ್ :

ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ʼನವೋದ್ಯಮಿಗಳ ವೇಗ ವೃದ್ಧಿ ಮತ್ತು ಅವು ದೇಶ-ವಿದೇಶದ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಡಿಜಿಟಲ್‌ ಎಕಾನಮಿ ಮಿಷನ್‌ ಸ್ಥಾಪಿಸಲಾಗುತ್ತಿದೆʼ ಎಂದು ಹೇಳಿದರು.

ಈ ಸಂಸ್ಥೆಯನ್ನು ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಇದರಲ್ಲಿ ಉದ್ಯಮ ಕ್ಷೇತ್ರದಿಂದ ಶೇ ೫೧ರಷ್ಟು ಹಾಗೂ ಸರ್ಕಾರದಿಂದ ಶೇ ೪೯ರಷ್ಟು ಸಹಭಾಗಿತ್ವ ಇರುತ್ತದೆ. ಎಲ್ಲ ರೀತಿಯ ನಾವಿನ್ಯತಾ ಚಟುವಟಿಕೆಗಳನ್ನು ಕ್ರೋಡೀಕರಿಸಿ ಸಂಯೋಜಿಸಲು ಮತ್ತು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಈ ಸಂಸ್ಥೆ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ಇನ್ವೆಸ್ಟ್ ಕರ್ನಾಟಕದ ಕಚೇರಿ ಕೂಡ ಇದೇ ಕಿಯೋನಿಕ್ಸ್‌ ಕಟ್ಟಡದಲ್ಲಿ ತೆರೆಯಲಾಗುವುದು ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಮೂರನೇ ಒಂದರಷ್ಟು ಮಾರುಕಟ್ಟೆ ಪಾಲು ಕರ್ನಾಟಕದ್ದು ಇದೆ. ರಫ್ತು ವಹಿವಾಟು ಸದ್ಯಕ್ಕೆ 52 ಬಿಲಿಯನ್ ಡಾಲರ್ ನಷ್ಟಿದ್ದು, ಇನ್ನು ಐದು ವರ್ಷಗಳಲ್ಲಿ ಇದರ ಪ್ರಮಾನ 150 ರಿಂದ 200 ಬಿಲಿಯನ್ ಡಾಲರ್ ಗೆ ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.it-bt-startup-incubation-center-cm-bs-yeddyurappa

ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹಾಗೂ ಕಿಯೋನಿಕ್ಸ್ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಇದೇ ದಿನ ಸೇವೆಯಿಂದ ನಿವೃತ್ತರಾದ ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ಸುರೇಶ್ ಅವರನ್ನು ಮುಖ್ಯಮಂತ್ರಿಗಳು ಸತ್ಕರಿಸಿ ಗೌರವಿಸಿದರು.

Key words: IT- BT- Startup -Incubation Center-CM BS Yeddyurappa ..