ತಾರೆಗಳ ದಾಟುವೆವು ಚಂದಿರನ ಮೀಟುವೆವು!

ಇಸ್ರೋ:ಜುಲೈ-14: ಚಂದ್ರನಲ್ಲಿಗೆ ಈಗಾಗಲೇ ಒಮ್ಮೆ ಪಯಣ ಕೈಗೊಂಡು ಯಶಸ್ವಿಯಾಗಿರುವ ಭಾರತ, ಇದೀಗ 2ನೇ ಹಂತದ ಚಂದ್ರಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಚಂದ್ರನ ಮೇಲೆ ಮನುಷ್ಯ ಕಾಲಿಟ್ಟು ಐವತ್ತು ವರ್ಷ ಸಂದಿರುವ ಸಂದರ್ಭದಲ್ಲೇ ಮತ್ತೊಮ್ಮೆ ಚಂದ್ರಯಾನಕ್ಕೆ ಹೊರಟಿರುವುದು ಕಾಕತಾಳೀಯವಾದರೂ ಭಾರತದ ಮಟ್ಟಿಗೆ ಇದೊಂದು ಬಹು ಮಹತ್ವದ ಮೈಲುಗಲ್ಲು.

ಚಂದ್ರನಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧ. ಎಳೆಮಕ್ಕಳಿದ್ದಾಗಲೇ ಶುರುವಾಗಿಬಿಡುತ್ತದೆ ಚಂದಮಾಮನ ಸೆಳೆತ. ಯೌವನದಲ್ಲಿ ಪ್ರೀತಿಪ್ರೇಮಕ್ಕೂ ಚಂದ್ರನ ನಂಟು. ಮದುವೆಯಾದೊಡನೆ ಮಧು‘ಚಂದ್ರ’ದ ಆಕರ್ಷಣೆ. ಕಥೆ, ಕಾವ್ಯ, ಕಲೆ, ಸಂಸ್ಕೃತಿ, ಆಧ್ಯಾತ್ಮ… ಹೀಗೆ ಎಲ್ಲ ರಂಗದವರನ್ನೂ ಬಿಡದೇ ಕಾಡಿರುವ ಚಂದ್ರ, ವಿಜ್ಞಾನಿಗಳನ್ನು ಬಿಟ್ಟಾನೆಯೇ? ತಣ್ಣನೆಯ ಬೆಳದಿಂಗಳನ್ನು ಚೆಲ್ಲುವ ಚಂದ್ರ ತನ್ನೊಳಗೆ ಏನೇನು ಹುದುಗಿಸಿ ಇಟ್ಟುಕೊಂಡಿದ್ದಾನೆ ಎಂಬ ಕುತೂಹಲ ಇಂದು ನಿನ್ನೆಯದಲ್ಲ. ಬೆಳ್ಳಗೆ ಹೊಳೆಯುವ ಅವನ ಮೈಮೇಲೆ ಕಲೆಗಳು ಯಾಕೆ ಮೂಡಿವೆ? ಭೂಮಿಯ ಮೇಲಿರುವಂತೆ ಅವನಲ್ಲಿಯೂ ನೆಲ, ನೀರು, ಗಾಳಿ ಇರಬಹುದೆ? ನಾವೆಲ್ಲ ಅಲ್ಲಿಗೆ ಹೋಗಿಬರಬಹುದೆ? ಅಥವಾ ಅಲ್ಲಿಯೇ ಇದ್ದುಬಿಡಬಹುದೇ? ಹೀಗೆ ಕಾಡುವ ಪ್ರಶ್ನೆಗಳು ಸಾವಿರಾರು. ಅವುಗಳಿಗೆ ಉತ್ತರ ಹುಡುಕುತ್ತ ಹೊರಟ ವಿಜ್ಞಾನಿಗಳು ಕೈಹಾಕಿದ್ದು ‘ಚಂದ್ರಯಾನ’ದಂತಹ ಸಾಹಸಕ್ಕೆ.

ಸುವರ್ಣ ಸಂಭ್ರಮ: ಮೊತ್ತಮೊದಲು ಚಂದ್ರನಲ್ಲಿಗೆ ಮಾನವ ಸಹಿತ ಪ್ರಯಾಣ ಕೈಗೊಂಡವರು ಅಮೆರಿಕದವರು. ಚಂದ್ರನ ಮೇಲೆ ಗಗನಯಾತ್ರಿ ನೀಲ್ ಆಮರ್್​ಸ್ಟ್ರಾಂಗ್ ಕಾಲಿಟ್ಟಿದ್ದು 1969ರ ಜುಲೈ 20ರಂದು. ಈ ತಿಂಗಳ ಇಪ್ಪತ್ತಕ್ಕೆ ಸರಿಯಾಗಿ ಐವತ್ತು ವರ್ಷ.

ಇಂತಹ ಸಂಭ್ರಮದ ಸಮಯದಲ್ಲೇ ಭಾರತ ತನ್ನ ಎರಡನೇ ಚಂದ್ರಯಾನಕ್ಕೆ ಚಾಲನೆ ನೀಡುತ್ತಿದೆ. ಜುಲೈ 15ರ ಬೆಳಗಿನ ಜಾವ 2.51ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ವಾಹಕ ಜಿಎಸ್​ಎಲ್​ವಿ-3ರಲ್ಲಿ ಪ್ರಯಾಣ ಆರಂಭವಾಗಲಿದೆ. ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅಂದು ಭಾರತ ಪಾತ್ರವಾಗಲಿದೆ. ಇಲ್ಲಿವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಚಂದ್ರಯಾನದಲ್ಲಿ ಆರ್ಬಿಟರ್, ಲ್ಯಾಂಡರ್ (ವಿಕ್ರಮ್ ಮತ್ತು ರೋವರ್ (ಪ್ರಜ್ಞಾನ್) ಎಂಬ ಮೂರು ಘಟಕಗಳಿರುತ್ತವೆ. ಭೂಮಿಯಿಂದ ಉಡಾವಣೆಯಾದ ನಂತರ 53 ದಿನಗಳ ಕಾಲ ಬಾಹ್ಯಾಕಾಶದ ಹಾದಿಯನ್ನು ಇವು ಕ್ರಮಿಸುತ್ತವೆ. ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಇಳಿಯುತ್ತವೆ. ಇಳಿದ ಕೂಡಲೇ ಅಲ್ಲಿ ಅಶೋಕಚಕ್ರ ಹಾಗೂ ಇಸ್ರೊ ಲಾಂಛನದ ಗುರುತನ್ನು ಪ್ರಜ್ಞಾನ್ ರೋವರ್ ಮೂಡಿಸುತ್ತದೆ. ಜತೆಗೆ ವಿಕ್ರಮ್ ಲ್ಯಾಂಡರ್ ಮೇಲೆ ಭಾರತದ ತ್ರಿವರ್ಣ ಧ್ವಜ ಅರಳುತ್ತದೆ.

ಇದೇ ಮೊದಲಲ್ಲ: 2008ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮೊದಲ ಬಾರಿ ಚಂದ್ರಯಾನ ಕೈಗೊಂಡಿತ್ತು. ಆ ವರ್ಷ ಅಕ್ಟೋಬರ್ 22ರಂದು ಯಶಸ್ವಿಯಾಗಿ ಉಡಾವಣೆಗೊಂಡ ಉಪಗ್ರಹ, ಚಂದ್ರನಿಗೆ 3600 ಸುತ್ತುಹಾಕಿ 2009ರ ಆಗಸ್ಟ್ 29ರಂದು ತನ್ನ ಕಾರ್ಯ ಪೂರ್ಣಗೊಳಿಸಿತು. ಎರಡನೇ ಬಾರಿ ಚಂದ್ರಯಾನ ಕೈಗೊಳ್ಳಲು ಆಗಲೇ ಭಾರತ ನಿರ್ಧರಿಸಿತ್ತು. ಇದಕ್ಕಾಗಿ ರಷ್ಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ (ರೋಸ್​ಕಾಸ್ಮೋಸ್) ಜತೆ ಒಪ್ಪಂದಕ್ಕೆ ಇಸ್ರೋ ಸಹಿ ಹಾಕಿತ್ತು.

ಚಂದ್ರನ ಸುತ್ತ 100 ಕಿ.ಮೀ. ದೂರದಲ್ಲಿ ಸುತ್ತುತ್ತ ಭೂಮಿಗೆ ಸಂದೇಶ ರವಾನಿಸುವ ಆರ್ಬಿಟರ್ ಹಾಗೂ ಚಂದ್ರನ ಮೇಲೆ ಚಲಿಸುತ್ತ ಅನೇಕ ಪ್ರಯೋಗ ನಡೆಸುವ ರೋವರ್ ಉಪಕರಣಗಳನ್ನು ಭಾರತ ನಿರ್ವಿುಸುವುದು, ಚಂದ್ರನ ಮೇಲೆ ರೋವರ್ ಅನ್ನು ಇಳಿಸುವ ಜತೆಗೆ ಸ್ವತಂತ್ರವಾಗಿ ಅನೇಕ ಪ್ರಯೋಗ ನಡೆಸುವ ಲ್ಯಾಂಡರ್ ಅನ್ನು ರೋಸ್​ಕಾಸ್ಮೋಸ್ ನಿರ್ವಿುಸಿಕೊಡುವುದು ಎಂದು ಒಪ್ಪಂದವಾಗಿತ್ತು.

ಸ್ವಾವಲಂಬನೆಯ ದ್ಯೋತಕ: ಈ ಮಧ್ಯೆ, ರೋಸ್​ಕಾಸ್ಮೋಸ್ ತನ್ನ ಮತ್ತೊಂದು ಯೋಜನೆಯಲ್ಲಿ ಸಮಸ್ಯೆಗೆ ಸಿಲುಕಿಕೊಂಡಿತು. ಮಂಗಳ ಗ್ರಹದ ನೈಸರ್ಗಿಕ ಉಪಗ್ರಹ ಫೋಬೋಸ್​ಗೆ ರೋಸ್​ಕಾಸ್ಮೋಸ್ 2011ರಲ್ಲಿ ಕಳಿಸಿದ ರಾಕೆಟ್, ಕೆಳ ಭೂಕಕ್ಷೆಯಲ್ಲೇ ಸಿಲುಕಿಕೊಂಡಿತು. ಅದನ್ನು ಮುಂದಕ್ಕೆ ಕಳಿಸುವ ಪ್ರಯತ್ನಗಳು ವಿಫಲವಾದವು. ಅಂತಿಮವಾಗಿ ಅದು ಚಿಲಿ ಬಳಿ ಸಮುದ್ರಕ್ಕೆ ಬಿತ್ತು. ಅದೇ ತಾಂತ್ರಿಕತೆಯನ್ನೇ ರೋಸ್​ಕಾಸ್ಮೋಸ್, ಭಾರತದ ಚಂದ್ರಯಾನ-2ಕ್ಕೆ ನೀಡುವುದಿತ್ತು. ವೈಫಲ್ಯದಿಂದ ಆತಂಕ ಸೃಷ್ಟಿಯಾಗಿ, ಇಸ್ರೊ ಮತ್ತು ರೋಸ್​ಕಾಸ್ಮೋಸ್ ನಡುವಿನ ಒಪ್ಪಂದ ರದ್ದಾಯಿತು. ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಭಾರತೀಯ ವಿಜ್ಞಾನಿಗಳು ತಾವೇ ಲ್ಯಾಂಡರ್ ರೂಪಿಸಿ ಚಂದ್ರಯಾನ-2 ಯಶಸ್ವಿಗೊಳಿಸುವುದಾಗಿ ಸಂಕಲ್ಪ ಮಾಡಿದರು. ಚಂದ್ರನಿಂದ ಭೂಮಿಗೆ ಇರುವ ಅಂತರವನ್ನು ಅಳೆಯುವ ನಾಸಾದ ಉಪಕರಣವೊಂದನ್ನು ಹೊರತುಪಡಿಸಿ ಇಡೀ ಚಂದ್ರಯಾನ-2ರ ಎಲ್ಲ ಭಾಗಗಳನ್ನೂ ಭಾರತೀಯ ವಿಜ್ಞಾನಿಗಳೇ ನಿರ್ವಿುಸಿದ್ದಾರೆ. ಹೀಗಾಗಿ ಇದು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಪ್ರತೀಕ.

ಸಾಫ್ಟ್ ಲ್ಯಾಂಡಿಂಗ್: ಚಂದ್ರನ ಮೇಲೆ ಈಗಾಗಲೇ ಮೂರು ದೇಶಗಳು ಪದಾರ್ಪಣೆ ಮಾಡಿವೆ. ಉಪಗ್ರಹಕ್ಕೆ ಯಾವುದೇ ಧಕ್ಕೆ ಆಗದಂತೆ ಚಂದ್ರನ ಮೇಲ್ಮೈನಲ್ಲಿ ನಿಧಾನವಾಗಿ ಇಳಿದು ಅಲ್ಲಿ ಮತ್ತಷ್ಟು ಸಂಶೋಧನಾ ಕಾರ್ಯ ಕೈಗೊಳ್ಳುವುದನ್ನು ‘ಸಾಫ್ಟ್ ಲ್ಯಾಂಡಿಂಗ್’ ಎನ್ನುತ್ತಾರೆ. ಇದನ್ನು ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಸಾಧಿಸಿವೆ. ವಿಕ್ರಮ್ ಲ್ಯಾಂಡರ್ ಕೂಡ ಈ ರೀತಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದರೆ ಅಂತಹ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ದಕ್ಷಿಣ ಧ್ರುವದಲ್ಲಿ ಸಂಶೋಧನೆ: ಜಪಾನ್ ಸೇರಿದಂತೆ ಅನೇಕ ದೇಶಗಳು ಚಂದ್ರನ ಒಳಹೊರಗನ್ನು ಅರಿಯುವ ಪ್ರಯತ್ನ ನಡೆಸಿವೆಯಾದರೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದತ್ತ ಗಮನ ಹರಿಸಿಲ್ಲ. ಅಲ್ಲಿರಬಹುದಾದ ಖನಿಜ, ರಾಸಾಯನಿಕ, ವಾತಾವರಣದ ಸಂಶೋಧನೆ ಈವರೆಗೂ ನಡೆದೇ ಇಲ್ಲ. ಚಂದ್ರಯಾನ-2 ಯೋಜನೆ ಆ ಭಾಗದಲ್ಲಿಯೇ ಸಂಶೋಧನೆ ನಡೆಸಲಿದೆ. ಅದು ಯಶಸ್ವಿಯಾದರೆ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಶೋಧನೆ ಕೈಗೊಂಡ ಮೊದಲ ದೇಶವಾಗುತ್ತದೆ.

ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೂ ಕಾರಣಗಳಿವೆ. ಚಂದ್ರನ ದಕ್ಷಿಣ ಭಾಗದಲ್ಲಿ ಸೂರ್ಯನ ಬೆಳಕು ಜಾಸ್ತಿ ಇರುತ್ತದೆ. ಹಾಗಾಗಿ ಸಂಶೋಧನೆ ನಡೆಸಲು ಅನುಕೂಲವಾಗುತ್ತದೆ. ಅಲ್ಲದೆ ಆ ಜಾಗದಲ್ಲಿ ಇಳಿಜಾರು, ಹಳ್ಳಗಳು, ಕಲ್ಲು ಬಂಡೆಗಳು ಕಡಿಮೆ ಇವೆ. ಸುಲಭವಾಗಿ ಲ್ಯಾಂಡರ್ ಇಳಿಯಲು, ರೋವರ್ ಸಂಚರಿಸಲು ಸಾಧ್ಯವಾಗುತ್ತದೆ. ಅದಲ್ಲದೆ ಈ ಭಾಗದಲ್ಲಿ ಯಾವುದೇ ದೇಶ ಸಂಶೋಧನೆ ನಡೆಸಿಲ್ಲದ ಕಾರಣ ಹೆಚ್ಚಿನ ಮಾಹಿತಿ ಲಭಿಸುತ್ತದೆ.

ಮಹಿಳಾ ಸಾರಥ್ಯ

ಭಾರತದ ಬಾಹ್ಯಾಕಾಶ ಯೋಜನೆ ಯೊಂದರ ನೇತೃತ್ವವನ್ನು ಇದೇ ಮೊದಲ ಬಾರಿಗೆ ಮಹಿಳೆಯರಿಬ್ಬರು ವಹಿಸಿದ್ದಾರೆ. ಯೋಜನಾ ನಿರ್ದೇಶಕಿಯಾಗಿ ಎಂ. ವನಿತಾ, ಮಿಷನ್ ಡೈರೆಕ್ಟರ್ ಆಗಿ ರಿತು ಕರಿದಾಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಶೋಕ ಚಕ್ರದ ಮುದ್ರೆ

ಚಂದ್ರಯಾನ-1ರಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಚಂದ್ರನ ಮೇಲೆ ಹಾರಿಸಿದ್ದ ಇಸ್ರೊ ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗಲಿದೆ. ಪ್ರಜ್ಞಾನ್ ರೋವರ್​ನ ಎರಡೂ ಬದಿಯಲ್ಲಿ ಚಕ್ರಗಳಿರುತ್ತವೆ. ಒಂದು ಬದಿಯ ಚಕ್ರದಲ್ಲಿ ತ್ರಿವರ್ಣ ಧ್ವಜದಲ್ಲಿರುವ ಅಶೋಕ ಚಕ್ರ, ಮತ್ತೊಂದರಲ್ಲಿ ಇಸ್ರೊ ಲಾಂಛನ ಇರುತ್ತದೆ. ಚಂದ್ರನ ಮೇಲೆ ಪ್ರತಿ ಸೆಕೆಂಡ್​ಗೆ 1 ಸೆಂಟಿಮೀಟರ್​ನಂತೆ ಒಟ್ಟು 500 ಮೀಟರ್ ಸಂಚರಿಸುವಾಗ ಚಂದ್ರನ ಮೇಲ್ಮೈನಲ್ಲಿ ಭಾರತದ ಈ ಎರಡೂ ಚಿಹ್ನೆಗಳು ಶಾಶ್ವತವಾಗಿ ಅಚ್ಚೊತ್ತಲಿವೆ. ನೂರಾರು ವರ್ಷ ಉಳಿಯಲಿವೆ. ಜತೆಗೆ ಲ್ಯಾಂಡರ್​ನಲ್ಲಿ ತ್ರಿವರ್ಣ ಧ್ವಜ ಇರುತ್ತದೆ.
ಕೃಪೆ:ವಿಜಯವಾಣಿ
isro-is-all-set-to-launch-chandrayaan-2