ತುಮಕೂರು, ಮೇ,3,2025 (www.justkannada.in): ಶೀಬಿ ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದು ಪಡಿಸಲು ಮತ್ತು ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಂಡು, ಅಮೂಲ್ಯವಾದ ಅರಣ್ಯ ಭೂಮಿಯನ್ನು ಸಂರಕ್ಷಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಹೋಬಳಿ ಶೀಬಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಸಚಿವ ಈಶ್ವರ್ ಖಂಡ್ರೆ, ಬೆಂಗಳೂರು-ಪುಣೆ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಅರಣ್ಯಭೂಮಿಗೆ ಭಾರೀ ಮೌಲ್ಯವಿದ್ದು, ಕೆಲವರು ಇದನ್ನು ಕಬಳಿಸಲು ಮತ್ತು ಒತ್ತುವರಿ ಮಾಡಲು ಯತ್ನಿಸುತ್ತಿದ್ದಾರೆ ಹೀಗಾಗಿ ಅರಣ್ಯ ಸಿಬ್ಬಂದಿ ಕಟ್ಟೆಚ್ಚರದಿಂದ ಇರಬೇಕು ಎಂದರು.
ಕೆಲವರು ನ್ಯಾಯಾಲಯದಲ್ಲಿ ಭೂಮಿಯ ಮಾಲೀಕತ್ವದ ಹೋರಾಟ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ಡಿನೋಟಿಫಿಕೇಷನ್ ಆಗದ ಹೊರತು, ಅರಣ್ಯ ಭೂಮಿ ಅರಣ್ಯವಾಗಿಯೇ ಉಳಿಯುತ್ತದೆ ಎಂದು ಹೇಳಿದ್ದು, ಡಿನೋಟಿಫಿಕೇಷನ್ ಆಗದ ಈ ಅರಣ್ಯದಲ್ಲಿನ ಅಕ್ರಮ ಮಂಜೂರಾತಿ ರದ್ದುಪಡಿಸುವಂತೆ ಎ.ಸಿ. ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಸೂಚಿಸಿದರು.
ಭೂ ಮಾಫಿಯಾದವರು ಬಡವರನ್ನು ಮುಂದಿಟ್ಟುಕೊಂಡು ಬೆಲೆಬಾಳುವ ಭೂಮಿ ಕಬಳಿಸಲು ಯತ್ನಿಸುತ್ತಾರೆ. ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸುವವರ ವಿರುದ್ಧ ಹಾಗೂ ಅದಕ್ಕೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಿ ಎಂದು ಸೂಚಿಸಿದರು.
ಪ್ರಕೃತಿ, ಪರಿಸರ, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನಮ್ಮ ಸಂವಿಧಾನ ಸಾರುತ್ತದೆ, ಸರ್ವೋನ್ನತ ನ್ಯಾಯಾಲಯ ಕೂಡ ಹಲವು ಪ್ರಕರಣಗಳಲ್ಲಿ ಇದನ್ನೇ ಪುನರುಚ್ಚರಿಸಿದೆ. ಹೀಗಾಗಿ ಅರಣ್ಯ ಸಂರಕ್ಷಣೆಯ ಹೊಣೆ ಹೊತ್ತು ಅಧಿಕಾರಿಗಳು ಅರಣ್ಯ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಟಿ.ಬಿ. ಜಯಚಂದ್ರ ಅವರು ಕೂಡ ಈ ಅರಣ್ಯ ಸಂರಕ್ಷಿಸಲು ಬೇಲಿ ಹಾಕುವ ಪ್ರಸ್ತಾವನೆ ನೀಡಿದ್ದು, ಅರಣ್ಯ ಸಚಿವರಾಗಿ ಈ ಅರಣ್ಯವು ಭೂ ಮಾಫಿಯಾ ಪಾಲಾಗದಂತೆ ಉಳಿಸಲು ಎಲ್ಲ ಸಾಧ್ಯ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಕೀಲರಾದ ಸೂರ್ಯ ಮುಕುಂದರಾಜ್ ಮತ್ತಿತರರು ಹಾಜರಿದ್ದರು.
Key words: Minister, Ishwar Khandre, protect, Sheebi, forest land, land grabbers