ಇರಾನ್, ಇಸ್ರೇಲ್ ಸಂಘರ್ಷ: ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಸರ್ಕಾರ

ಬೆಂಗಳೂರು, ಮಾರ್ಚ್​, 2,2026 (www.justkannada.in) : ಇರಾನ್​ ಮೇಲೆ  ಇಸ್ರೇಲ್ ಮತ್ತು ಅಮೇರಿಕಾ ಜಂಟಿ ದಾಳಿ ಮುಂದುವರೆಸಿದ್ದು,  ಸಂಘರ್ಷದಿಂದ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕನ್ನಡಿಗರು ಸಿಲುಕಿದ್ದು ಇವರ ರಕ್ಷಣೆಗಾಗಿ ರಾಜ್ಯ ಸರ್ಕಾರ ನೆರವಿಗೆ ಧಾವಿಸಿದೆ.

ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಇಲ್ಲಿಯವರೆಗೆ ಸುಮಾರು 200 ಜನರನ್ನು ಸಂಪರ್ಕಿಸಿರುವುದಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್​, ಇರಾನ್​, ಇಸ್ರೇಲ್ ಯುದ್ಧ ಹಿನ್ನೆಲೆ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ರಾಜ್ಯದ ಜನರನ್ನು ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಸದ್ಯ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ವಿವರಗಳನ್ನು ಸಂಗ್ರಹಿಸಿ, ಅವರ ಸ್ಥಿತಿಗತಿ ಕುರಿತು ಸಚಿವಾಲಯದಿಂದ ಮಾಹಿತಿ ಪಡೆಯಲು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 200 ಜನರು  ಸಂಪರ್ಕಿಸಿದ್ದೇವೆಂದು ಮಾಹಿತಿ ನೀಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಾವು ಸಂಪರ್ಕದಲ್ಲಿದ್ದು, ಸದ್ಯ ಲಭ್ಯವಾದ ಮಾಹಿತಿ ಪ್ರಕಾರ  ಎಲ್ಲರೂ ಸುರಕ್ಷಿತರಾಗಿದ್ದಾರೆ. ವಿಮಾನ ಹಾರಾಟ ವ್ಯವಸ್ಥೆ ಆರಂಭಗೊಳ್ಳುತ್ತಿದ್ದಂತೆ ಅವರನ್ನು ಸ್ಥಳಾಂತರಿಸಲು  ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

Key words: Iran-Israel, conflict, Government , Kannadigas, Middle East