ಜೂ.21 ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ

ಮೈಸೂರು, ಜೂನ್,8,2026 (www.justkannada.in): ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು  ಮೈಸೂರು ಅರಮನೆ ಆವರಣದಲ್ಲಿ 12 ನೇ ಅಂತರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಅವರು ತಿಳಿಸಿದರು‌.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್, ಜನರು ಯೋಗವನ್ನು ಯೋಗದಿನಕ್ಕೆ ಮಾತ್ರ ಮೀಸಲಿಡದೆ  ಯೋಗಾಭ್ಯಾಸವನ್ನು  ಪ್ರತಿದಿನ ಅಳವಡಿಸಿಕೊಳ್ಳಬೇಕು. ಯೋಗದ ವಿವಿಧ ಆಸನಗಳಿಂದ ದೇಹದ ಎಲ್ಲಾ ಸ್ನಾಯು ಹಾಗೂ ನರಗಳಿಗೆ ವ್ಯಾಯಾಮ ನೀಡಿ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.

ಜೂನ್ 21 ರಂದು ಬೆಳಿಗ್ಗೆ 6 ರಿಂದ 8ರವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸಲಾಗುವುದು. ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಾರ್ಯಕ್ರದಲ್ಲಿ ಯಾವುದಾದರೂ ಹೊಸತನವನ್ನು ತರಬಯಿಸಿದರೆ, ಈ ಕುರಿತು ಮುಕ್ತವಾಗಿ ಚರ್ಚಿಸುವಂತೆ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅರಮನೆ ಆವರಣದ ಸ್ವಚ್ಛತೆ, ಕುಡಿಯುವ ನೀರು, ಅರಮನೆ ಮಂಡಳಿ ವತಿಯಿಂದ ವೇದಿಕೆ, ಧ್ವನಿವರ್ಧಕ, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್  ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾ ದೇವಿ ಅವರು ಮಾತನಾಡಿ ಈಗಾಗಲೇ ಯೋಗದಿನವನ್ನು ಪ್ರತಿದಿನ ಅಭ್ಯಾಸ ಮಾಡಲು ದಿನನಿತ್ಯ ಯೋಗ ಯೋಜನೆಯಡಿ ಜೂನ್ 22 ರಿಂದ ಒಂದು ವರ್ಷ 365 ದಿನ  ಜನರಿಗೆ ಆನ್ ಲೈನ್ ಮೂಲಕ ಲಿಂಕ್ ಒದಗಿಸಲಾಗುವುದು ಎಂದರು.

ಯೋಗ ಫೆಡರೇಷನ್ ಮುಖ್ಯಸ್ಥ ಶ್ರೀಹರಿ ಅವರು ಮಾತನಾಡಿ, ಮೈಸೂರನ್ನು ಯೋಗ ಹಬ್ ಮಾಡಲು ಜೂನ್  21 ರಂದು 120 ಸ್ಥಳಗಳಲ್ಲಿ ಯೋಗ ಪ್ರದರ್ಶನ ನೀಡಲು ಯೋಜಿಸಲಾಗಿದೆ. 1200 ತರಬೇತುದಾರರೊಂದಿಗೆ  1,20, 000 ಜ‌ನರು ಭಾಗವಹಿಸುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದರು. ಇದೇ ಸಂರ್ಭದಲ್ಲಿ ಯೋಗದಿನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ  ಸಹಾಯಕ ಪೊಲೀಸ್ ಆಯುಕ್ತ ರಾಘವೇಂದ್ರ, ಪ್ರವಾಸೋದ್ಯಮ‌ ಇಲಾಖೆ ಸಹಾಯಕ ನಿರ್ದೇಶಕ ಪ್ರಭು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Key words: International Yoga Day, June 21, Mysore, ADC