ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿಲ್ಲ- ಸಚಿವ ಆರ್.ಅಶೋಕ್.

ಬೆಂಗಳೂರು: ಇಂದಿರಾ ಕ್ಯಾಂಟಿನ್ ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವಂತೆ ಮಾಜಿ ಸಚಿವ ಸಿಟಿ ರವಿ ಆಗ್ರಹಿಸಿದ ಬೆನ್ನಲ್ಲೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ನವರಿಗೆ ವಾಜಪೇಯಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದು ಬಿಜೆಪಿ ಸರ್ಕಾರ ಯಾವುದೇ ಸರ್ಕಾರ ಬಂದರೂ ವ್ಯಕ್ತಿಯ ಹೆಸರಿಡುವ ಪದ್ಧತಿಯನ್ನು ಬಿಟ್ಟು ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಯೋಜನೆ ಅಂತ ಹೆಸರಿಟ್ಟರೆ ಯಾವುದೇ ಸರ್ಕಾರ ಸಿಎಂ ಬಂದರೂ ಅದು ಮುಂದುವರೆಯುತ್ತದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

.ಸಾಲು ಸಾಲು ಹಬ್ಬಗಳು ಬರುತ್ತಿವೆ. ಅಮೆರಿಕಾದಲ್ಲಿ ಕೊವಿಡ್ 3 ನೇ ಅಲೆಯಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅನೇಕ ಕಟ್ಟು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ. ಅದು ರಾಜ್ಯದಲ್ಲಿ ಕಾಣಿಸದಂತೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆ ತೆರೆಯಲು ಸೂಚನೆ ನೀಡಿದ್ದೇನೆ. ಐದಾರು ದಿನಗಳಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಎಂದರು.

ಸಿಎಂ ನಾಳೆ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಬೆಡ್ ಗಳನ್ನು ವಾಪಸ್ ನೀಡಲಾಗಿದೆ. ಅಗತ್ಯ ಬಿದ್ದರೆ ಬೆಡ್ ಗಳನ್ನು ವಾಪಸ್ ಪಡೆಯುತ್ತೇವೆ. ನಮ್ಮ ಆದೇಶದಲ್ಲಿಯೇ ಅದನ್ನು ತಿಳಿಸಿದ್ದೇವೆ ಎಂದು ಅಶೋಕ್ ಹೇಳಿದರು.

ಸಚಿವರುಗಳು ಕೂಡ ಕೋವಿಡ್ ನಿಯಮ ಪಾಲಿಸಬೇಕು. ಕೋವಿಡ್ ಎಲ್ಲರಿಗೂ ಒಂದೇ. ಯಾರೂ ನಿಯಮ ಮೀರಬಾರದು ಎಂದ ಅವರು ಸ್ವಾಂತಂತ್ರ್ಯ ದಿನಾಚರಣೆಯನ್ನು ಕೋವಿಡ್ ನಿಯಮದಂತೆ ಆಚರಿಸಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

key words: Indira Canteen -name- change – Minister- R. Ashok