ಮೈಸೂರಿನಲ್ಲಿ ಇಂಡಿಯನ್ ಫೈಟೋಪೆಥಾಲಜಿಕಲ್ ಸೊಸೈಟಿ ಅಮೃತ ಮಹೋತ್ಸವ ಸಮ್ಮೇಳನ

ಮೈಸೂರು, ಫೆಬ್ರವರಿ 02, 2023 (www.justkannada.in): ಮೈಸೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ  ಮುಕ್ತ ವಿಶ್ವವಿದ್ಯಾಲಯದ ಸಹಯೋಗದಿಂದಿಗೆ ವಿ, ಜ್ಞಾನ ಭವನದಲ್ಲಿ ಗುರುವಾರ ಇಂಡಿಯನ್ ಫೈಟೋಪೆಥಾಲಜಿಕಲ್ ಸೊಸೈಟಿ ಅಮೃತ ಮಹೋತ್ಸವ ಸಮ್ಮೇಳನ ನಡೆಯಿತು.

‘ಸಸ್ಯ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ: ಸಮಸ್ಯೆಗಳು ಹಾಗೂ ಸಂಶೋಧನೆಗಳು’ ವಿಷಯ ಕುರಿತ ಸಮ್ಮೇಳನವನ್ನು ಭಾರತ ಸರಕಾರದ ಸೈನ್ಸ್ ಆ್ಯಂಡ್ ಟೆಕ್ನಾಲಜಿ  ಇಲಾಖೆಯ ಕಾರ್ಯದರ್ಶಿ ಡಾ.ಶ್ರೀವರಿ ಚಂದ್ರಶೇಖರ್ ಅವರು ಆನ್ ಲೈನ್ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಮಾತನಾಡಿದ ಡಾ.ಶ್ರೀವರಿ ಚಂದ್ರಶೇಖರ್ ಅವರು, ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆ ಕೃಷಿ ಕ್ಷೇತ್ರದ ಮಹತ್ವವನ್ನು ತಿಳಿಸುತ್ತಿದೆ. ಬದಲಾಗುತ್ತಿರುವ ಕಾಲಘಟದಲ್ಲಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯನ್ನು ಕೃಷಿ ಕ್ಷೇತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ಪಾದನೆಯಲ್ಲಿ ಆಮೂಲಾಗ್ರ ಬದಲಾವಣೆ ಕಾಣಲಾಗಿದೆ. ಇದು ಮತ್ತಷ್ಟು ಸುಧಾರಿಸಬೇಕಾಗ ಅಗತ್ಯವಿದೆ ಎಂದರು.

ಭಾರತದಲ್ಲಿರುವ ಕೃಷಿ ಭೂಮಿ ಚೀನಾಗೆ ಹೋಲಿಸಿದರೆ ಸಾಕಷ್ಟು ಹೆಚ್ಚಿದೆ. ಆದರೆ ಕೃಷಿ ಉತ್ಪಾದನೆಯಲ್ಲಿ ಚೀನಾಕ್ಕೆ ಹೋಲಿಸಿದರೆ ಭಾರತದ ಸಾಧನೆ ಕಡಿಮೆ. ಜತೆಗೆ ರಸಗೊ‍ಬ್ಬರ, ಔಷಧ ಬಳಕೆಯಲ್ಲಿಯೂ ಭಾರತದ ಪಾಲು ಕಡಿಮೆ. ತಂತ್ರಜ್ಞಾನ ಬಳಸಿಕೊಂಡು ಕೃಷಿ ಹಾಗೂ ರೈತರ ಜೀವನ ಮಟ್ಟ ಸುಧಾರಣೆ ಮಾಡಬೇಕಿದೆ. ಇದರಿಂದ ರೈತರ ಆದಾಯವೂ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಕೂಡ ಚಿಂತನೆ ಮಾಡುತ್ತಿದ್ದಾರೆ ಎಂದರು.

ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಪಾಲು ಕಡಿಮೆ ಇದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಿದೆ. ಕಡಿಮೆ ಪ್ರಮಾಣದ ರಸಗೊಬ್ಬರ ಹಾಗೂ ಔಷಧ ಬಳಕೆ ಮಾಡಿ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಪಡೆಯುವ ನೀಟ್ಟಿನಲ್ಲಿ ಉತ್ತಮ ಬಿತ್ತನೆ ಬೀಜಗಳನ್ನು ಆವಿಷ್ಕರಿಸಬೇಕಿದೆ. ಜತೆಗೆ ಮಣ್ಣಿನ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸರ ನಾಶವಾಗುತ್ತಿದೆ. ಜತೆಗೆ ವಿಶ್ವದಲ್ಲಿ ಜೀವವೈವಿದ್ಯತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಅಧ್ಯಯನ ವರದಿಗಳ ಪ್ರಕಾರ, ಶೇ.40ಕ್ಕೂ ಹೆಚ್ಚಿನ ಪ್ರಮಾಣದ ಕೀಟಗಳು ಅವನತಿಯ ಹಾದಿ ಹಿಡಿದಿವೆ. ಹವಾಮಾನ ಬದಲಾವಣೆ, ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳು ನಾನಾ ದುಷ್ಪರಿಣಾಮಗಳನ್ನು ಎದುರಿಸುವಂತೆ ಮಾಡಿವೆ ಎಂದು ತಿಳಿಸಿದರು.

ಇಂಡಿಯನ್ ಫೈಟೋಪೆಥಾಲಜಿಕಲ್ ಸೊಸೈಟಿಯ ಕಾರ್ಯದರ್ಶಿ ಡಾ.ರಾಬೀನ್ ಗೊಗಾಯ್ ಸ್ವಾಗತ ಭಾಷಣ ಮಾಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಎಚ್.ರಾಜಶೇಖರ್, ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಬಾಗಲಕೋಟೆಯ ತೋಟಗಾರಿಕಾ ವಿವಿ ಕುಲಪತಿ ಪ್ರೊ.ಕೆ.ಎಂ.ಇಂದಿರೇಶ್, ಆರ್ಗನೈಜಿಂಗ್ ಸೆಕ್ರೆಟರಿ ಡಾ.ಎಸ್.ಚಂದ್ರನಾಯಕ, ಡಾ.ಎಸ್.ನಿರಂಜನ್ ರಾಜ್ ಇತರರು ಉಪಸ್ಥಿತಿದ್ದರು.