ಕರ್ನಾಟಕದಾದ್ಯಂತ ಪೆಟ್ರೋಲ್ ಬಂಕ್‌ ಗಳಲ್ಲಿ ಹೆಚ್ಚುತ್ತಿದೆ ವಂಚನೆ.

ಬೆಂಗಳೂರು, ಜೂನ್,3, 2022 (www.justkannada.in): ರಾಜ್ಯದಾದ್ಯಂತ ಪೆಟ್ರೊಲ್ ಬಂಕ್‌ಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಪೆಟ್ರೋಲ್ ತುಂಬುವಲ್ಲಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಬೆಂಗಳೂರು ನಗರವೂ ಇದರಿಂದ ಹೊರತಾಗಿಲ್ಲ.

ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್‌ ಗಳಿಗೆ ಹೋಗುವ ಗ್ರಾಹಕರಿಗೆ ಬಹುಪಾಲು ತಾವು ನೀಡುವ ಹಣಕ್ಕಿಂತ ಕಡಿಮೆ ಪ್ರಮಾಣದಲ್ಲೇ ಇಂಧನ ಲಭಿಸುತ್ತಿದೆ. ಗ್ರಾಹಕರ ಗಮನವನ್ನು ಬೇರೆಡೆಗೆ ಸೆಳೆದು ಕಡಿಮೆ ಪೆಟ್ರೋಲ್ ಹಾಕುವುದು, ಮೀಟರ್‌ ಗಳಲ್ಲಿ ಲೋಪಗಳು ಈ ರೀತಿಯ ವಂಚನೆಗಳಲ್ಲಿ ಪ್ರಮುಖವಾಗಿವೆ.

ಕಾನೂನು ಮಾಪನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ ಸಾಂಕ್ರಾಮಿಕದ ವರ್ಷಗಳಲ್ಲಿ ಇಲಾಖೆ ವತಿಯಿಂದ ಕೆಲವು ತಪಾಸಣೆಗಳನ್ನು ನಡೆಸಲಾಗಿತ್ತಂತೆ. ಈಗ ಪುನಃ ತಪಾಸಣೆಯನ್ನು ಆರಂಭಿಸಲಾಗಿದೆ. “ನಾವು ಸಾಮಾನ್ಯವಾಗಿ ಐದು ಲೀಟರ್‌ ಗಳ ಪೆಟ್ರೋಲ್ ಅನ್ನು ತಪಾಸಣೆ ಮಾಡುತ್ತೇವೆ. ಅದರಲ್ಲಿ ೨೫ ಎಂಎಲ್ ನಷ್ಟು ಹೆಚ್ಚು ಕಡಿಮೆ ಆದರೆ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಯಾವುದಾದರೂ ಬಂಕ್‌ ನಲ್ಲಿ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲೋಪ ಎಸಗಲಾಗುತ್ತಿದ್ದರೆ ಪ್ರಕರಣವನ್ನು ದಾಖಲಿಸುತ್ತೇವೆ,” ಎಂದು ವಿವರಿಸಿದರು.

ಪೆಟ್ರೋಲ್ ಬಂಕ್‌ ಗಳಲ್ಲಿ ಸಿಬ್ಬಂದಿಗಳು ವಂಚಿಸುವ ಒಂದು ರೀತಿ ಎಂದರೆ, ಇಂಧನ ತುಂಬುವಾಗ ಮಧ್ಯದಲ್ಲೇ ನಿಲ್ಲಿಸುವುದು. “ಒಬ್ಬ ಗ್ರಾಹಕರು ರೂ.೧,೦೦೦ ಮೊತ್ತದ ಇಂಧನ ತುಂಬಲು ಹೇಳಿದರೆ, ಸಿಬ್ಬಂದಿ ರೂ.೪೦೦ರಷ್ಟು ಪೆಟ್ರೋಲ್ ತುಂಬಿದ ನಂತರ ಪವರ್ ಕಟ್ ಅಥವಾ ಮತ್ಯಾವುದಾದರೂ ಕಾರಣ ನೀಡಿ ಇಂಧನ ತುಂಬಿಸುವುದನ್ನು ನಿಲ್ಲಿಸುತ್ತಾರೆ. ನಂತರ ಪುನಃ ‘ಝೀರೊ’ದಿಂದ ಆರಂಭಿಸುವ ಬದಲು ಇಂಧನದ ರೀಡಿಂಗ್ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಪುನಃ ಆರಂಭಿಸುತ್ತಾರೆ, ಪುನಃ ರೂ.೬೦೦ರ ನಂತರ ನಿಲ್ಲಿಸುತ್ತಾರೆ. ಆಗ ಗ್ರಾಹಕರು ತಾವು ರೂ.೧,೦೦೦ ಮೌಲ್ಯದ ಇಂಧನ ತುಂಬಿದ್ದಾರೆ ಎಂದು ಪರಿಗಣಿಸುತ್ತಾರೆ. ಆದರೆ ಅವರಿಗೆ ಕೇವಲ ರೂ.೬೦೦ ಮೊತ್ತದ ಇಂಧನ ಮಾತ್ರ ದೊರೆತಿರುತ್ತದೆ. ಬಂಕ್‌ ನ ಸಿಬ್ಬಂದಿ ಉಳಿದ ರೂ.೪೦೦ ಅನ್ನು ತನ್ನ ಜೇಬಿಗೆ ಇಳಿಸುತ್ತಾರೆ,” ಎಂದು ವಿವರಿಸಿದರು.

ಆದರೆ ಪೆಟ್ರೋಲ್ ವ್ಯಾಪಾರಿಗಳು ಹೇಳುವ ಪ್ರಕಾರ ತುಂಬಾ ಸಣ್ಣ ಪ್ರಮಾಣದ ವ್ಯತ್ಯಾಸಗಳು ಉಂಟಾದರೂ ಸಹ ದಂಡ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ. ಅಖಿಲ ಕರ್ನಾಟಕ ಪೆಟ್ರೋಲಿಯಂ ವರ್ತಕರ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ ಅವರು ಹೇಳುವಂತೆ ಎಲೆಕ್ಟ್ರಾನಿಕ್ ಮೀಟರ್‌ ಗಳು ವಂಚಿಸುವ ಪ್ರಕರಣಗಳಿಗೆ ಸಾಕಷ್ಟು ಕಡಿವಾಣ ಹಾಕಿದೆ. “೨೫ ಎಂಎಲ್‌ನಷ್ಟು ಹೆಚ್ಚು ಕಡಿಮೆ ಆಗಬಹುದು. ಆದರೆ ೧೦ ಎಂಎಲ್‌ ನಷ್ಟು ಕಡಿಮೆ ತುಂಬಿದರೂ ಅಧಿಕಾರಿಗಳೂ ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಾರೆ,” ಎಂದು ವಿವರಿಸಿದರು.

ಕಳೆದ ವರ್ಷ ವರ್ತಕರು ಪ್ರತಿಭಟನೆಯನ್ನು ನಡೆಸಿದರು. “ಅಧಿಕಾರಿಗಳು ‘ಝೀರೊ ಟಾಲರೆನ್ಸ್’ ಕುರಿತು ಮಾತನಾಡುತ್ತಾರೆ, ಆದರೆ ಇಡೀ ಜಗತ್ತಿನಲ್ಲೇ ಎಲ್ಲಿಯೂ ಆ ರೀತಿಯ ಪರಿಕಲ್ಪನೆಯೇ ಇಲ್ಲ,” ಎನ್ನುತ್ತಾರೆ ಗೌಡ.

ದಂಡ.

ಕಡಿಮೆ ಪೆಟ್ರೋಲ್ ತುಂಬುವುದು ಕಂಡು ಬಂದರೆ ಅದಕ್ಕೆ ಸ್ಥಳದಲ್ಲೇ ರೂ.೧,೦೦೦ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಪೆಟ್ರೋಲ್ ತುಂಬುವ ಯಂತ್ರದಲ್ಲೇನಾದರೂ ಲೋಪ ಕಂಡು ಬಂದರೆ ಆ ಸ್ಥಳವ್ಯಾಪ್ತಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

“ಪದೇ ಪದೇ ಅದೇ ಅಪರಾಧ ಮರುಕಳಿಸಿದರೆ ಅಂತಹ ಬಂಕ್ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದರು. ವಂಚನೆಯ ಪ್ರಮಾಣವನ್ನು ಆಧರಿಸಿ ನ್ಯಾಯಾಲಯಗಳು ರೂ.೨,೦೦೦ ದಿಂದ ರೂ. ೧ ಲಕ್ಷದವರೆಗೂ ದಂಡ ವಿಧಿಸಬಹುದು.

ವಂಚನೆಯ ಪ್ರಕರಣದ ಕುರಿತು ಗ್ರಾಹಕರು ದೂರು ದಾಖಲಿಸಬೇಕಾದರೆ ಕಾನೂನು ಮಾಪನ ಇಲಾಖೆಯ ಸಂಬಂಧಪಟ್ಟ ಅಧಿಕಾರಿಯವರಿಗೆ ದೂರು ಸಲ್ಲಿಸಬಹುದು. ಅಧಿಕಾರಿಯ ಸಂಖ್ಯೆ ಮತ್ತು ಹೆಸರುಗಳನ್ನು ಆಯಾ ಪೆಟ್ರೋಲ್ ಬಂಕ್‌ ಗಳಲ್ಲಿ ಪ್ರದರ್ಶಿಸಲಾಗಿರುತ್ತದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Increasing-fraud -petrol bunkers – Karnataka