ಅಡುಗೆ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆ: ಆಹಾರ ಪದಾರ್ಥಗಳ ಬೆಲೆಗಳೂ ಏರಿಕೆಯತ್ತ..!

ನವದೆಹಲಿ, ಮಾರ್ಚ್, 5, 2022 (www.justkannada.in): ಅಡುಗೆ ತೈಲ, ಆಹಾರ ತಯಾರಿಸಲು ಬೇಕಾಗಿರುವ ಒಂದು ಪ್ರಮುಖ ಸಾಮಗ್ರಿ. ಈಗಾಗಲೇ ಅಡುಗೆ ತೈಲಗಳ ಬೆಲೆಗಳು ದುಬಾರಿಯಾಗಿವೆ. ಸದ್ಯದಲ್ಲೇ ಇದರ ಬೆಲೆ ಮುಗಿಲುಮುಟ್ಟಲಿದ್ದು, ಇದರಿಂದಾಗಿ ಪ್ರತಿಯೊಂದು ಆಹಾರ ಪದಾರ್ಥದ ಬೆಲೆಯೂ ಏರಲಿದೆ ಎನ್ನಲಾಗಿದೆ.

ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ ಯುದ್ಧದಿಂದಾಗಿ ಯುಎಸ್ ಹಾಗೂ ಯೂರೋಪ್ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ. ಇದರಿಂದಾಗಿ ಕಚ್ಚಾ ತೈಲದಿಂದ ಹಿಡಿದು ಧಾನ್ಯಗಳು ಮತ್ತು ಅಡುಗೆ ತೈಲಗಳು, ಇತರೆ ಅಗತ್ಯ ವಸ್ತುಗಳ ಬೆಲೆಗಳು ಮುಗಿಲು ಮುಟ್ಟುತ್ತಿವೆ. ಉಕ್ರೇನ್‌ ನ ಬಂದರುಗಳನ್ನು ಮುಚ್ಚಲಾಗಿದ್ದು, ಸಾರಿಗೆ ಮತ್ತು ಇತರೆ ವ್ಯವಸ್ಥೆಗಳು ಸಂಪೂರ್ಣವಾಗಿ ಕಡಿತಗೊಂಡಿದೆ. ಕಪ್ಪು ಸಮುದ್ರದ ಮೂಲಕ ಸರಕನ್ನು ಪಡೆಯಲು ಹೆಚ್ಚಿನ ವಿಮೆ ಹಾಗೂ ಸರಕು ಸಾಗಣೆ ದರಗಳನ್ನು ಭರಿಸಲು ವರ್ತಕತರು ತಯಾರಿಲ್ಲ.

ಉಕ್ರೇನ್ ಹಾಗೂ ರಷ್ಯಾ ರಾಷ್ಟ್ರಗಳು, ವಿಶ್ವದ ಒಟ್ಟು ಗೋಧಿ, ಜೋಳ ಹಾಗೂ ಬಾರ್ಲಿ ಸರಬರಾಜಿನಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಅಷ್ಟೇ ಅಲ್ಲದೆ, ವಿಶ್ವದಾದ್ಯಂತ ಅತೀ ಹೆಚ್ಚು ಬಳಸಲಾಗುವ ನಾಲ್ಕು ಪ್ರಮುಖ ಅಡುಗೆ ತೈಲಗಳ ಪೈಕಿ ಒಂದಾಗಿರುವ ಸೂರ್ಯಕಾಂತಿ ಎಣ್ಣೆಯ ಶೇ.೭೫ ರಷ್ಟು ಸರಬರಾಜು ಪಾಲನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಈಗ ನಡೆಯುತ್ತಿರುವ ಯುದ್ಧದಿಂದಾಗಿ, ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗುವ ತಾಳೆ ಹಾಗೂ ಸೋಯಾಬೀನ್ ತೈಲಗಳ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿವೆ.

ಮುಂಬೈ ಮೂಲದ ಅಡುಗೆ ತೈಲಗಳ ಏಜೆಂಟ್ ಹಾಗೂ ಸಲಹಾಗಾರರಾದ ಸನ್ವಿನ್ ಗ್ರೂಪ್‌ ನ ಸಂಶೋಧನಾ ವಿಭಾಗದ ಮುಖ್ಯಸ್ಥ ಅನಿಲ್‌ಕುಮಾರ್ ಬಗಾನಿ ಅವರು, “ಕಪ್ಪು ಸಮುದ್ರದಿಂದ ರಫ್ತಾಗುವ ಸೂರ್ಯಕಾಂತಿ ಎಣ್ಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಉಕ್ರೇನ್‌ ನಲ್ಲಿ ಇದರ ವಹಿವಾಟು ಸಂಪೂರ್ಣವಾಗಿ ನಿಂತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ತರಕಾರಿ ಮೂಲದ ತೈಲಗಳ ಸರಬರಾಜಿನ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ,” ಎಂದಿದ್ದಾರೆ.

ಇತರೆ ತೈಲಬೀಜಗಳು ಹಾಗೂ ಅಡುಗೆ ತೈಲ ಸರಬರಾಜುದಾರರು ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವಂತಿಲ್ಲ. ಕೆನಡಾ ದೇಶದಲ್ಲಿ ಕಳೆದ ವರ್ಷ ಬರದಿಂದಾಗಿ ಅಪಾರ ಪ್ರಮಾಣದಲ್ಲಿ ಕ್ಯಾನೊಲಾ ಬೆಳೆ ನಷ್ಟವಾಯಿತು. ಬ್ರೆಜಿಲ್ ಹಾಗೂ ಅರ್ಜೆಂಟಿನಾ ರಾಷ್ಟ್ರಗಳಲ್ಲಿ ಸೋಯಾಬೀನ್ ಬೆಳೆಗಳ ಇಳುವರಿ ಕಡಿಮೆಯಾಗಿವೆ. ಮಲೇಷ್ಯಾ ದೇಶ ಕೃಷಿ ಕಾರ್ಮಿಕರ ದೊಡ್ಡ ಕೊರತೆಯನ್ನು ಎದುರಿಸುತ್ತಿದ್ದು, ಇಂಡೋನೇಷ್ಯಾ ತನ್ನ ಸ್ವಂತ ಬಳಕೆಯನ್ನು ಖಾತ್ರಿಪಡಿಸುವ ಸಲುವಾಗಿ ತಾಳೆ ಎಣ್ಣೆ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿವೆ. ಈ ಎಲ್ಲಾ ಕಾರಣಗಳಿಂದಾಗಿ ನಾಲ್ಕು ಪ್ರಮುಖ ಅಡುಗೆ ತೈಲಗಳಾದ ತಾಳೆ, ಸೋಯಾಬೀನ್, ರ್ಯಾ ಪ್ಸೀಡ್ ಹಾಗೂ ಸೂರ್ಯಕಾಂತಿ ಈ ನಾಲ್ಕು ತೈಳಗಳ ಬೆಲೆಗಳು ಏರಿಕೆಯಾಗಿದ್ದು, ಚಾಕೋಲೇಟ್‌ನಿಂದ ಹಿಡಿದು ಶ್ಯಾಂಪುವರೆಗೆ ಮಾರುಕಟ್ಟೆಗಳಲ್ಲಿ ಎಲ್ಲದರ ಬೆಲೆಗಳೂ ಸಹ ಏರಿಕೆ ಕಾಣಲಿವೆ.

ಉಕ್ರ್ ಆಗ್ರೊಕನ್ಸಲ್ಟ್ ಪ್ರಕಾರ, ತಾಳೆ ಎಣ್ಣೆಯ ಬೆಲೆ ಕಳೆದ ವರ್ಷ ಜೂನ್ ತಿಂಗಳಿಂದ ಎರಡುಪಟ್ಟಿಗಿಂತ ಹೆಚ್ಚಾಗಿದೆ. ಸೋಯಾಬಿನ್ ತೈಲದ ಬೆಲೆ ಶೇ.೫೦ರಷ್ಟು ಹೆಚ್ಚಾಗಿದೆ. ಉಕ್ರೇನ್‌ನಿಂದ ಸರಬರಾಜಾಗುವ ಸೂರ್ಯಕಾಂತಿ ಎಣ್ಣೆಯ ಬೆಲೆಗಳೂ ಸಹ ಫೆಬ್ರವರಿ 24, ಉಕ್ರೇನ್‌ನ ಮೇಲೆ ರಷ್ಯಾದ ದಾಳಿಯಾದಾಗಿನಿಂದ ಶೇ.50ರಷ್ಟು ಹೆಚ್ಚಾಗಿದೆ. ರ್ಯಾ ಪ್ಸೀಡ್ ತೈಲದ ಬೆಲೆಯೂ ಇದೇ ರೀತಿಯಾಗಿದೆ.

ಉಕ್ರೇನ್-ರಷ್ಯಾ ರಾಷ್ಟ್ರಗಳ ನಡುವಿನ ಯುದ್ಧ ಸದ್ಯಕ್ಕೆ ಅಂತ್ಯವಾಗುವಂತೆ ತೋರುತ್ತಿಲ್ಲ. ವರ್ತಕರು ದಾಸ್ತಾನಿಗಾಗಿ ಪರದಾಡುತ್ತಿದ್ದಾರೆ. ಚೀನಾ ಸರಕು ಭದ್ರತೆಗೆ ಆದ್ಯತೆಯನ್ನು ನೀಡುವಂತೆ ಸೂಚಿಸಿದ್ದು, ಕಚ್ಚಾ ವಸ್ತುಗಳಿಗಾಗಿ ಮಾರುಕಟ್ಟೆಗಳನ್ನು ಜಾಲಾಡುವಂತೆ ಸರ್ಕಾರಿ ಸ್ವಾಮ್ಯದ ಖರೀದಿದಾರರಿಗೆ ತಿಳಿಸಿದೆ. ಜೊತೆಗೆ, ಸ್ಥಳೀಯ ಅಡುಗೆ ತೈಲಗಳ ಬೆಲೆಯನ್ನು ಹತೋಟಿಯಲ್ಲಿಡುವ ಸಲುವಾಗಿ ತನ್ನಲ್ಲಿರುವ ಅಡುಗೆ ತೈಲ ಹಾಗೂ ಸೋಯಾಬೀನ್ ದಾಸ್ತಾನನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದೆ.

ಭಾರತ ಅಡುಗೆ ತೈಲವನ್ನು ಬಹುಪಾಲು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹತ್ತಿರದಲ್ಲೇ ಇದೆ. ಇದರಿಂದಾಗಿ ಭಾರತ ಹಾಗೂ ಮಧ್ಯಪೂರ್ವ ರಾಷ್ಟ್ರಗಳು ಹೆಚ್ಚು ಸಂಕಷ್ಟದಲ್ಲಿವೆ ಎನ್ನಲಾಗಿದೆ. ಭಾರತ ಶೇ.೬೦ರಷ್ಟು ಅಡುಗೆ ತೈಲವನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಕಳೆದ ೧೪ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಅತೀ ವೇಗವಾಗಿ ಏರಿಕೆಯಾಗಿವೆ.

ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಮರು ಬೆಳಗಿನ ಹೊತ್ತು ಉಪವಾಸವಿದ್ದು, ಸಂಜೆಯ ನಂತರ ಆಹಾರ ಸೇವಿಸುವ ಪದ್ಧತಿಯನ್ನು ಅನುಸರಿಸುತ್ತಾರೆ. ರಂಜಾನ್ ಮಾಸ ಏಪ್ರಿಲ್ ತಿಂಗಳಲ್ಲಿ ಆರಂಭವಾಗಿ ಮೇ ತಿಂಗಳಲ್ಲಿ ಈದ್-ಉಲ್-ಫಿತ್ರೆ ಆಚರಿಸುತ್ತಾರೆ. ವಿಶ್ವದಾದ್ಯಂತ ಇರುವ ಎಲ್ಲಾ ಮುಸ್ಲೀಮರು ಇದನ್ನು ಆಚರಿಸುತ್ತಾರೆ. ಬಿರಿಯಾನಿ ಹಾಗೂ ಇತರೆ ಸಿಹಿ ತಿನಿಸುಗಳನ್ನು ತಯಾರಿಸಲು ಮುಖ್ಯವಾಗಿ ತಾಳೆ ಎಣ್ಣೆ ಹಾಗೂ ಇತರೆ ತರಕಾರಿ ಮೂಲದ ತೈಲಗಳನ್ನೇ ಬಳಸಲಾಗುತ್ತದೆ. ಇದರಿಂದಾಗಿ ಸ್ವಾಭಾವಿಕವಾಗಿಯೇ ಅಡುಗೆ ತೈಲದ ಬೇಡಿಕೆ ತೀವ್ರವಾಗಿ ಹೆಚ್ಚಾಗಲಿದೆ.

ಅಡುಗೆ ತೈಲವನ್ನು ಹೆಚ್ಚು ಉತ್ಪಾದಿಸುವ ರಾಷ್ಟ್ರಗಳು ಸ್ವಾಭಾವಿಕವಾಗಿಯೇ ತನ್ನ ಸ್ವಂತ ಬಳಕೆಗಾಗಿ ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ರಫ್ತನ್ನು ಸೀಮಿತಗೊಳಿಸಲಿವೆ.

“ಗ್ರಾಹಕರು ಅಡುಗೆ ತೈಲಕ್ಕೆ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ, ಜೊತೆಗೆ ಕೊರತೆಯನ್ನೂ ಎದುರಿಸಬೇಕಾಗಬಹುದು,” ಎನ್ನುತ್ತಾರೆ ಸೆಗಿ ಎನಂ ಅಡ್ವೆರ್ಸ್  ಎಂಬ ಹೆಸರಿನ ಸಲಹಾ ಸಂಸ್ಥೆಯ ಪ್ರಾದೇಶಿಕ ಆರ್ಥಿಕತಜ್ಞ ಖೋರ್ ಯೂ ಲೆಂಗ್.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Increasing –cooking- oil- prices.