ಮೈಸೂರು,ಡಿಸೆಂಬರ್,23,2025 (www.justkannada.in): ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿಯನ್ನು ಜಾರಿಗೊಳಿಸುವಂತೆ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ ಮಲ್ಲೇಶ್ವ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ರಾಜ್ಯ ಸರ್ಕಾರಿ ನೌಕರರ ಪೈಕಿ 2006 ರಿಂದೀಚೆಗೆ ನೇಮಕಗೊಂಡ ನೌಕರರಿಗೂ ಸರ್ಕಾರದ ಸವಲತ್ತು ಸಮಾನವಾಗಿ ನೀಡುವ ಮೂಲಕ ಸಮಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ.
ಬಡ ಹಾಗೂ ಮಧ್ಯಮ ವರ್ಗದ ಪರ ದನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುವ ಮುಖೇನ ನೊಂದ ನೌಕರರ ಬಾಳಿಗೆ ನೆಮ್ಮದಿ ಹರಿಸಬೇಕಿದೆ. ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿಯನ್ನು ಜಾರಿಗೊಳಿಸುವ ಮೂಲಕ ನೌಕರರ ಅಂತ್ಯ ಕಾಲದ ಬದುಕಿಗೆ ಭದ್ರತೆ ಒದಗಿಸಬೇಕಿದೆ.
ಛತ್ತೀಸಗಡ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಪಂಜಾಬ್, ಆಂಧ್ರಪ್ರದೇಶ ರಾಜ್ಯಗಳು ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಿವೆ. ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳು ಹಳೆ ಪಿಂಚಣಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿವೆ. ಕೇಂದ್ರ ಸರ್ಕಾರವು ಯುಪಿಎಸ್ ಅಥವಾ ಎನ್‌ಪಿಎಸ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ನೌಕರರಿಗೆ ಅವಕಾಶ ನೀಡಿದೆ. ರಾಜ್ಯದಲ್ಲೂ ಇದೇ ರೀತಿ ಅವಕಾಶ ನೀಡುವ ಮೂಲಕ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುನ್ನುಡಿ ಬರೆಯಬೇಕಿದೆ ಎಂದು ತಿಳಿಸಿದ್ದಾರೆ.
31- 3- 2006ರ ಹಿಂದೆ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಗೊಂಡು ವೇತನಾನುದಾನಕ್ಕೆ ಒಳಪಟ್ಟಿದ್ದರೆ ಇವರೀರ್ವರಿಗೂ ಸಮಾನವಾಗಿ ನಿವೃತ್ತಿಯ ಪಿಂಚಣಿ ಸೌಲಭ್ಯಗಳು ಸರಿಸಮಾನವಾಗಿ ಸಿಗುತ್ತಿದ್ದವು. ಆದರೆ, 01-04-2006ರ ನಂತರ ನೇಮಕಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ರಾಷ್ಟ್ರೀಯ ಪಿಂಚಣಿ ಯೋಜನೆ ನಿವೃತ್ತಿಯ ನಂತರ ದೊರಕುತ್ತದೆ. 1-4-2006 ಪೂರ್ವ ಮತ್ತು ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೊಂಡು, ಈ ಅವಧಿಯ ನಂತರ ವೇತನಾನುದಾನಕ್ಕೆ ಒಳಪಟ್ಟ ಸಿಬ್ಬಂದಿಗೆ ರಾಜ್ಯ ಸರ್ಕಾರ ವೇತನವನ್ನು ನೀಡುತ್ತಿದೆ. ಆದರೆ, ನಿವೃತ್ತಿಯ ನಂತರ ಪಿಂಚಣಿಯನ್ನು ಅಯಾ ಆಡಳಿತ ಮಂಡಳಿಯವರೇ ನೀಡಬೇಕು ಎಂದು ಆದೇಶವನ್ನು (ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಸಂಪುಟ) ಮಾಡಿದೆ. ಇದು ನೌಕರರ ಪಾಲಿಕೆ ಕರಾಳ ಶಾಸನವಾಗಿರುವುದರಿಂದ ಸದರಿ ಆದೇಶಕ್ಕೆ ತಿದ್ದುಪಡಿ ತಂದು ನೌಕರರ ಕಷ್ಟಕ್ಕೆ ರಾಜ್ಯ ಸರ್ಕಾರ ಹೆಗಲಾಗಬೇಕಿದೆ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
2023ರ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಪಿಂಚಣಿ ವಂಚಿತ ನೌಕರರು – ನಿವೃತ್ತರೆಲ್ಲ ಸೇರಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 141 ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಿದರೂ, ಬೇಡಿಕೆ ಈಡೇರದೇ ಇದ್ದಾಗ ಬಾದಾಮಿಯ ಪಟ್ಟದಕಲ್ಲು ನಿವಾಸಿ, ನಿವೃತ್ತ ನೌಕರ ಸಿದ್ದಯ್ಯ ಹಿರೇಮಠ ಅವರು ವಿಷ ಸೇವಿಸಿ ಪ್ರಾಣ ಕಳೆದುಕೊಂಡರು. ಈಗಿನ ಸಿಎಂ ಸಿದ್ದರಾಮಯ್ಯ ಅವರು ಮೃತರಾದ ಸಿದ್ದಯ್ಯ ಹಿರೇಮಠ ಅವರ ಮನೆಗೆ ಹೋಗಿ ಕುಟುಂಬದವರಿಗೆ 2 ಲಕ್ಷ ರೂಪಾಯಿ ನೀಡಿ, ಸಾಂತ್ವನ ಹೇಳಿ, ಅನುದಾನಿತ ನೌಕರರಿಗೆ ಪಿಂಚಣಿಯನ್ನು ಜಾರಿಗೊಳಿಸಿ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಹೋರಾಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಸಿದ್ದಯ್ಯ ಹಿರೇಮಠ ವಿಷ ಸೇವಿಸಿ ಪ್ರಾಣ ಕಳೆದುಕೊಂಡಾಗ, ಧರಣಿಯಲ್ಲಿದ್ದವರು ಬಹಳ ಆತಂಕಕ್ಕೆ ಒಳಗಾದ ನಮಗೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಇಂದಿನ ಡಿಸಿಎಂ ಡಿ.ಕೆ. ಶಿವಕುಮಾರ್ ವೇದಿಕೆಯಲ್ಲಿ ಧರಣಿ ವಾಪಸ್ಸು ಪಡೆಯುವ ಸೂಚನೆ ಮತ್ತು ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಹಳೆಯ ನಿಶ್ಚಿತ ಪಿಂಚಣಿಯನ್ನು ಜಾರಿಗೊಳಿಸಲಾಗುವ ಭರವಸೆ ನೀಡಿದ್ದರು. ಇದೀಗ ಅದು ಅನುಷ್ಠಾನಕ್ಕೆ ಬರಬೇಕಿದೆ ಎಂದು ಕೆ.ವಿ.ಮಲ್ಲೇಶ್ ಮನವಿ ಮಾಡಿದ್ದಾರೆ.
Key words: Implement, OPS, government, aided employees, K.V. Mallesh







