ಬೆಂಗಳೂರು, ಮಾರ್ಚ್,4,2026 (www.justkannada.in): ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೆ ಅಕ್ರಮ ಆರೋಪ ಕೇಳಿಬಂದಿದ್ದು ಕೆಎಎಸ್ ಮುಖ್ಯಪರೀಕ್ಷೆ ಫಲಿತಾಂಶದಲ್ಲಿ ಒಂದೇ ಕುಟುಂಬದವರು ಆಯ್ಕೆಯಾಗಿದ್ದಾರೆ ಎಂಬ ಅಪಸ್ವರ ಎದ್ದಿದೆ.
ಈ ಮೂಲಕ ಕೆಪಿಎಸ್ ಸಿಯಲ್ಲಿ ಮತ್ತೆ ಹಗರಣದ ವಾಸನೆ ಕೇಳಿ ಬರುತ್ತಿದ್ದು ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಮತ್ತೊಂದು ಅಕ್ರಮದ ಸುದ್ದಿ ಹೊರಬಿದ್ದಿರುವುದು ಕೇವಲ ಆತಂಕಕಾರಿಯಷ್ಟೇ ಅಲ್ಲ, ಇದು ನಮ್ಮ ಆಡಳಿತ ವ್ಯವಸ್ಥೆಯ ನೈತಿಕ ಅಧಃಪತನದ ಸಂಕೇತ. ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಅರ್ಹತೆ ಮತ್ತು ಪ್ರತಿಭೆಯನ್ನು ಒರೆಗೆ ಹಚ್ಚುವ ಪವಿತ್ರ ಪ್ರಕ್ರಿಯೆಯಾಗಬೇಕು. ಆದರೆ, ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿನ ಅಕ್ರಮಗಳು ಮತ್ತು ನೇಮಕಾತಿ ಭ್ರಷ್ಟಾಚಾರಗಳು, ವ್ಯವಸ್ಥೆಯ ಮೇಲಿನ ಯುವಜನತೆಯ ನಂಬಿಕೆಯನ್ನು ಬುಡಮೇಲು ಮಾಡುತ್ತಿವೆ. ಇದು ಕೇವಲ ಒಂದು ಹುದ್ದೆಯ ಕಳ್ಳತನವಲ್ಲ, ಬದಲಾಗಿ ನಾಡಿನ ಭವಿಷ್ಯದ ಆಡಳಿತ ಯಂತ್ರದ ಮೇಲೆ ನಡೆಯುತ್ತಿರುವ ಪ್ರಹಾರವಾಗಿದೆ ಎಂದು ಟೀಕಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಯಾಗಿರುವ ಕೆಪಿಎಸ್ಸಿ, ತನ್ನ ಪಾವಿತ್ರ್ಯತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿರುವಂತೆ ಗೋಚರಿಸುತ್ತಿದೆ. ಈ ಸಾಲು ಸಾಲು ಅಕ್ರಮಗಳಿಗೆ ಕೇವಲ ಕೆಪಿಎಸ್ಸಿ ಮಾತ್ರವಲ್ಲ, ಆಡಳಿತ ಯಂತ್ರವನ್ನು ನಿಯಂತ್ರಿಸುವ ಸರ್ಕಾರಗಳ ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಹೊಸ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಮತ್ತು ಭ್ರಷ್ಟರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಪರೋಕ್ಷವಾಗಿ ಇಂತಹ ಅಕ್ರಮ ಜಾಲಗಳಿಗೆ ರಕ್ಷಣಾ ಕವಚವನ್ನು ಒದಗಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದು ಪರಸ್ಪರ ಕೆಸರೆರಚಾಟದ ಸಮಯವಲ್ಲ, ಬದಲಾಗಿ ಸಂಪೂರ್ಣ ನೇಮಕಾತಿ ವ್ಯವಸ್ಥೆಯನ್ನು ರಚನಾತ್ಮಕ ಸುಧಾರಣೆಗೆ ಒಳಪಡಿಸುವ ತುರ್ತು ಅಗತ್ಯವಿದೆ. ಸರ್ಕಾರ ಕೇವಲ ತನಿಖೆಯ ಭರವಸೆ ನೀಡದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಒಂದು ನಿದರ್ಶನವನ್ನು ಸೃಷ್ಟಿಸಬೇಕು ಎಂದು ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ.
Key words: Illegal, KPSC, Bhaskar Rao, deeply, concerned







