ಅಕ್ರಮ ಜಾನುವಾರುಗಳ ಸಾಗಾಟ: ಸಿನಿಮೀಯ ರೀತಿ ಪೊಲೀಸರಿಂದ ಚೇಸ್, 20 ದನಕರುಗಳ ರಕ್ಷಣೆ

ಮೈಸೂರು,ಅಕ್ಟೋಬರ್,21,2025 (www.justkannada.in): ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸಿನಿಮೀಯ ರೀತಿ ಬೊಲೆರೋ ಚೇಸ್ ಮಾಡಿ 20 ದನಕರುಗಳನ್ನ ರಕ್ಷಣೆ ಮಾಡಿದ್ದಾರೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಖದೀಮರು ಎಸ್ಕೇಪ್ ಆಗಿದ್ದು ಬೊಲೆರೋ ವಾಹನವನ್ನ ಪೊಲೀಸರು  ಸೀಜ್ ಮಾಡಿ ವಾಹನದಲ್ಲಿ ತುಂಬಿದ್ದ 20 ಕರುಗಳನ್ನ ರಕ್ಷಣೆ ಮಾಡಿದ್ದಾರೆ.

ಅಕ್ರಮವಾಗಿ ಜಾನುವಾರುಗಳನ್ನ ಸಾಗಿಸುತ್ತಿರುವ ಬಗ್ಗೆ ಜಯಪುರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪಿಎಸ್ ಐ ಹೇಮಾವತಿ ವಾಹನವನ್ನ ಸಿನಿಮೀಯ ರೀತಿ ಚೇಸ್ ಮಾಡಿದ್ದಾರೆ. ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಖದೀಮರು ಹುಲ್ಲಹಳ್ಳಿ ರಸ್ತೆ ಕಡೆಗೆ ತಿರುಗಿದ್ದಾರೆ. ತಕ್ಷಣ ಹೇಮಾವತಿ ಹುಲ್ಲಹಳ್ಳಿ ಪಿಎಸ್ ಐ ಚೇತನ್ ಕುಮಾರ್‌ ಗೆ ಮಾಹಿತಿ ನೀಡಿದ್ದಾರೆ. ನಂತರ ಚೇತನ್ ಕುಮಾರ್ ಸಿಬ್ಬಂದಿ ಸಮೇತ ಜಾನುವಾರುಗಳನ್ನ ಸಾಗಿಸುತ್ತಿದ್ದ ವಾಹನ ಹಿಡಿಯಲು ಮುಂದಾಗಿದ್ದಾರೆ.

ಈ ವೇಳೆ ಅಹಲ್ಯಾ ಗ್ರಾಮದ ಬಳಿ ಜಾನುವಾರುಗಳನ್ನ ತುಂಬಿದ್ದ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ವ್ಯಕ್ತಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಬಂದಾಗ ಕರುಗಳು ಸಹ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತಕ್ಷಣ ಸ್ಥಳೀಯರ ಸಹಾಯದಿಂದ 20 ಕರುಗಳನ್ನ ರಕ್ಷಿಸಿದ್ದು, ದನಕರುಗಳನ್ನ ಮೈಸೂರಿನ ಪಿಂಜರಾಪೋಲ್‌ ಗೆ ರವಾನಿಸಿದ್ದಾರೆ. ಈ ಕುರಿತು ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Illegal, cattle, smuggling, Police, chase, Mysore