ತ್ಯಾಜ್ಯ ವಿಂಗಡಿಸದಿದ್ದರೆ ಸಾವಿರ ರೂ. ದಂಡ!

ಬೆಂಗಳೂರು: ಜುಲೈ-5: ಸಾರ್ವಜನಿಕರೇ ಎಚ್ಚರ!ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೂಪಿಸಿರುವ ಹೊಸ ಟೆಂಡರ್‌ ಪ್ರಕ್ರಿಯೆ, ಸೆ.1ರಿಂದ ಜಾರಿಗೆ ಬರಲಿದ್ದು, ಹಸಿ ಮತ್ತು ಒಣ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡದೆ ಹಾಗೇ ನೀಡಿದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌, ಸಿಲಿಕಾನ್‌ಸಿಟಿ ಬೆಂಗಳೂರನ್ನು ಕಸ ಮುಕ್ತ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಪಣ ತೊಟ್ಟಿದ್ದು, ಆ ಹಿನ್ನೆಲೆಯಲ್ಲಿ ಸೆ.1ರಿಂದ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೇ ಹಾಗೆಯೇ ನೀಡುವ ಸಾರ್ವಜನಿಕರಿಗೆ 1 ಸಾವಿರ ರೂ.ವರೆಗೂ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.

1 ಸಾವಿರ ಕೋಟಿ ರೂ. ವೆಚ್ಚ: ಪ್ರತಿ ವರ್ಷ ಕಸ ವಿಲೇವಾರಿಗೆ ಪಾಲಿಕೆ ಸುಮಾರು ಒಂದು ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೂ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ವಿಲೇವಾರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಹೊಸ ಟೆಂಡರ್‌ ಜಾರಿಗೆ ತರಲಾಗುತ್ತಿದೆ. ಸೆ.1ರಿಂದ ಪ್ರತಿಯೊಬ್ಬರೂ ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಿ ಎಂದು ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಾರದ ಏಳು ದಿನ ಹಸಿಕಸ ಪಡೆಯಲು ಪೌರ ಕಾರ್ಮಿಕರು ಪ್ರತಿ ಮನೆಗೆ ತೆರಳಲಿದ್ದಾರೆ. ಹಾಗೇ ವಾರದಲ್ಲಿ ಎರಡು ದಿನ ಒಣ ಕಸ ಪಡೆಯಲು ಚಿಂದಿ ಆಯುವವರು ಮನೆ ಮನೆಗೆ ಬರಲಿದ್ದಾರೆ. ಈ ವೇಳೆ ಪೌರಕಾರ್ಮಿಕರು ಹಸಿಕಸ ಮಾತ್ರ ಪಡೆಯಲಿದ್ದಾರೆ. ಒಂದು ವೇಳೆ ಮಿಶ್ರಕಸ ನೀಡಿದರೂ, ಕೂಡ ಅವರು ಪಡೆಯುವುದಿಲ್ಲ. ಈ ಕಾರ್ಯದಲ್ಲಿ ಶೇ.100ರಷ್ಟು ಸಾಧನೆ ಸಾಧಿಸಿದರೆ, ಪೌರಕಾರ್ಮಿಕರಿಗೆ ಶೇ.5 ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸ್ಫ,rಪಡಿಸಿದರು.

ಸಾವಿರ ರೂ.ವರೆಗೆ ದಂಡ: ಬೆಂಗಳೂರು ನಗರವನ್ನು ಸ್ವಚ್ಛ ಇಡುವ ನಿಟ್ಟಿನಲ್ಲಿ ಪಾಲಿಕೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದು ಇದರಲ್ಲಿ ಹೊಸ ಟೆಂಡರ್‌ ಪ್ರಕ್ರಿಯೆ ಕೂಡ ಸೇರಿದೆ. ಒಣ ಮತ್ತು ಹಸಿ ಕಸ ಬೇರ್ಪಡಿಸದ ವಸತಿ ಪ್ರದೇಶದ ಮನೆಗಳಿಗೆ ಮೊದಲ ಬಾರಿಗೆ 200 ರೂ., ಆ ನಂತರ 1 ಸಾವಿರ ರೂ. ದಂಡ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಹಾಗೇ ರಸ್ತೆ ಬದಿ ಕಸ ಎಸೆದರೆ ಮೊದಲು 100 ರೂ. ಆ ನಂತರ 500 ರೂ. ದಂಡ ವಿಧಿಸಲಾಗುತ್ತದೆ. ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಮೊದಲ ಸಲ 200 ರೂ. ನಂತರ 1 ಸಾವಿರ ರೂ. ದಂಡ ಹಾಕಲಾಗುತ್ತದೆ ಎಂದು ತಿಳಿಸಿದರು.

ಕಟ್ಟಡ ತ್ಯಾಜ್ಯ ಸುರಿದರೆ 25 ಸಾವಿರ ರೂ. ದಂಡ: ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದ್ದು, ಕಟ್ಟಡ ತ್ಯಾಜ್ಯ ಸುರಿದರೆ ಮೊದಲ ಬಾರಿಗೆ 5 ಸಾವಿರ ರೂ. ನಂತರ 25 ಸಾವಿರ ರೂ. ದಂಡ ವಿಸಲು ತೀರ್ಮಾನಿಸಲಾಗಿದೆ. ಜತೆಗೆ ವಾಣಿಜ್ಯ ಕಟ್ಟಡದವರಿಗೆ ಮೊದಲ ಬಾರಿಗೆ 1 ಸಾವಿರ ರೂ., ನಂತರ 5 ಸಾವಿರ ರೂ. ದಂಡ ಹಾಕಲಾಗುವುದು.

ಆಸ್ಪತ್ರೆ ತ್ಯಾಜ್ಯ ಸರಿಯಾಗಿ ಬೇರ್ಪಡಿಸದೇ ನೀಡಿದರೆ ಮೊದಲು 1 ಸಾವಿರ ರೂ. ನಂತರ 5 ಸಾವಿರ ರೂ. ದಂಡ ಹಾಕುವ ನಿರ್ಣಯವನ್ನು ಪಾಲಿಕೆ ತೆಗೆದುಕೊಂಡಿದೆ.

ಸುದ್ದಿಗೋಷ್ಟಿಯಲ್ಲಿ ಆಡಳಿತ ಪಕ್ಷದ ನಾಯಕ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾನಾರಾಯಣ, ಸದಸ್ಯ ಗುಣಶೇಖರ, ಪಾಲಿಕೆ ವಿಶೇಷ ಆಯುಕ್ತ ರಂದೀಪ್‌ ಇದ್ದರು.

230 ಮಾರ್ಷಲ್ಗಳ ನೇಮಕ: ಬೆಂಗಳೂರನ್ನು ಸ್ವಚ್ಛ ನಗರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪಾಲಿಕೆ ಈ ಕ್ರಮ ತೆಗೆದುಕೊಂಡಿದ್ದು ಸುಮಾರು 230 ಮಾರ್ಷಲ್ಗಳ ನೇಮಕಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ. ಇವರು ರಾತ್ರಿ 8 ರಿಂದ ಬೆಳಗ್ಗೆ 10 ರವರೆಗೆ ಹಾಗೂ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ ಎಲ್ಲೆಂದರಲ್ಲಿ ಕಸ ಸುರಿಯುವವರ ಮೇಲೆ ನಿಗಾ ಇಡಲಿದ್ದಾರೆ. ಜೊತೆಗೆ ಕಸ ಬೇರ್ಪಡಿಸದೆ ಹಾಗೇ ನೀಡುವವರ ವಿರುದ್ಧ ಮತ್ತು ಪ್ಲಾಸ್ಟಿಕ್‌ ಬಳಕೆದಾರರಿಗೂ ದಂಡ ವಿಧಿಸಲಿದ್ದಾರೆ.

ಹೈಕೋರ್ಟ್‌ ಸೂಚನೆ ಪಾಲನೆ: ಸಮರ್ಪಕವಾಗಿ ಕಸ ವಿಲೇವಾರಿ ಆಗಬೇಕೆಂಬ ಉದ್ದೇಶದಿಂದ ಹಾಗೂ ಹೈಕೋರ್ಟ್‌ ಸೂಚನೆ ಮೇರೆಗೆ ಒಬ್ಬ ಗುತ್ತಿಗೆದಾರನಿಗೆ 5 ವಾರ್ಡ್‌ಗಳನ್ನು ಮಾತ್ರ ಗುತ್ತಿಗೆ ನೀಡಲಾಡಲು ನಿರ್ಧರಿಸಲಾಗಿದೆ. 198 ವಾರ್ಡ್‌ಗಳಲ್ಲಿ 168 ವಾರ್ಡ್‌ ಗಳಿಗೆ ಹೊಸ ಟೆಂಡರ್‌ ಜಾರಿಯಾಗಲಿದೆ. ಉಳಿದ 30 ವಾರ್ಡ್‌ಗಳಿಗೆ ಸಂಬಂಧಿಸಿ ಟೆಂಡರ್‌ ಕೂಡ ಆಗಿದ್ದು, ಕೋರ್ಟ್‌ ಆದೇಶ ಪಡೆದು ಪಾಲಿಕೆ ಮುಂದುವರಿಯಲಿದೆ.

ಗುತ್ತಿಗೆದಾರರಿಗೆ ನಿಯಮಗಳು:

● ಆಟೋ ಚಾಲಕ, ಸಹಾಯಕನಿಗೂ ಬಯೋಮೆಟ್ರಿಕ್‌ ಕಡ್ಡಾಯ

● ಆಟೋ, ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್‌ ಕಡ್ಡಾಯ ಮಾಡಬೇಕು

● ಸ್ಮಾರ್ಟ್‌ ಕಂಟ್ರೋಲ್ ರೂಮ್‌ಗೆ ಪ್ರತಿ ದಿನದ ಮಾಹಿತಿ ನೀಡಬೇಕು

● ಶೇ.100ರಷ್ಟು ಮನೆ-ಮನೆ ಕಸ ಸಂಗ್ರಹಣೆ ಮಾಡಬೇಕು

● ವಾರ್ಡ್‌ ವ್ಯಾಪ್ತಿಯ ಎಲ್ಲೇ ಕಸ ಬಿದ್ದಿದ್ದರೂ ಅದನ್ನು ತೆರವುಗೊಳಿಸಬೇಕು

● ಹಸಿ, ಒಣ ಕಸ ಬೇರ್ಪಡಿಸದೇ ನೀಡಿದ ತ್ಯಾಜ್ಯ ಪಡೆಯುವಂತಿಲ್ಲ

● ಮಿಶ್ರ ಕಸ ನೀಡುವವರು ಮತ್ತು ಪಡೆದವರಿಗೆ ದಂಡ ಹಾಕಲಾಗುವುದು

ಇನ್ನೂ ವಿವಾಹವಾಗಿಲ್ಲವೇ? ಇಂದೇ ಕನ್ನಡ ಮ್ಯಾಟ್ರಿಮನಿಯಲ್ಲಿ ನೋಂದಾಯಿಸಿ – ನೋಂದಣಿ ಉಚಿತ!
ಕೃಪೆ:ಉದಯವಾಣಿ

ತ್ಯಾಜ್ಯ ವಿಂಗಡಿಸದಿದ್ದರೆ ಸಾವಿರ ರೂ. ದಂಡ!

if-the-waste-is-not-sorted-a-thousand-rupees-fine