‘ಬಲಗಾಲಿಟ್ಟು ಒಳಗೆ ಬಾ’ : ನಾಮಪತ್ರ ಸಲ್ಲಿಕೆ ವೇಳೆಯೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ನೀತಿ ಬೋಧನೆ…

ಮೈಸೂರು,ನ,16,2019(www.justkannada.in): ಜೋತಿಷ್ಯ ಶಾಸ್ತ್ರ, ಪೂಜೆ ಪುನಸ್ಕಾರದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಈ ಬಗ್ಗೆ ಇತರರಿಗೆ ತಿಳುವಳಿಕೆ ಹೇಳುತ್ತಾರೆ. ಜತೆಗೆ ಸಭೆ ಸಮಾರಂಭಗಳಲ್ಲಿ ಅಥವಾ ವಿಧಾನಸೌಧ ಪ್ರವೇಶಿಸಲೀ, ಇನ್ನು ರಾಜಕೀಯ ಚಟುವಟಿಕೆಗಳೇ ಇರಲಿ, ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ.

ಅಂತೆಯೇ ಇಂದು ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ತೆರಳಿದ್ದ ವೇಳೆ ಎಡಗಾಲು ಇಟ್ಟು ಎಸಿ ಕಚೇರಿ ಪ್ರವೇಶಿಸಿದ ವಕೀಲ ಮತ್ತು ಮುಖಂಡರೊಬ್ಬರಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ನೀತಿ ಪಾಠ ಹೇಳಿ ಮತ್ತೆ ಬಲಗಾಲಿಟ್ಟು ಒಳಗೆ ಬರುವಂತೆ ತಿಳಿಸಿದ ಪ್ರಸಂಗ ನಡೆಯಿತು.

ಹೌದು, ಇಂದು ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮಶೇಖರ್ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಮಯದಲ್ಲಿ ಸೋಮಶೇಖರ್ ಜೊತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಸಹ ತೆರಳಿದ್ದರು. ಇದೇ ವೇಳೆ ಎಡಗಾಲು ಇಟ್ಟು ತಹಸೀಲ್ದಾರ್ ಕಚೇರಿ ಪ್ರವೇಶಿಸಿದ ವಕೀಲ, ಮುಖಂಡರನ್ನ ಹೊರಗೆ ಕರೆಸಿದ ಹೆಚ್.ಡಿ ರೇವಣ್ಣ ಮತ್ತೆ ಬಲಗಾಲು ಇಟ್ಟು ಒಳಗೆ ಹೋಗಬೇಕು ಎಂದು ಬುದ್ಧಿ ಹೇಳಿ ಮತ್ತೆ ತಹಶೀಲ್ದಾರ್ ಕಚೇರಿ ಒಳಕ್ಕೆ ಕಳುಹಿಸಿದರು. ಈ ಮೂಲಕ ವಕೀಲ ಮತ್ತು ಮುಖಂಡರಿಗೆ ಹೆಚ್.ಡಿ ರೇವಣ್ಣ ನೀತಿ ಬೋಧನೆ ಮಾಡಿದರು.

Key words: hunsur- by-election-Former minister-hd revanna- Astrology