ಮೊದಲು ನಿಮ್ಮ ಮಗನನ್ನ ಹತ್ಯೆ ಮಾಡಿ ನಂತರ ಕ್ಷಮೆಯಾಚಿಸಿ- ಮೃತ ವಿದ್ಯಾರ್ಥಿನಿ ನೇಹಾ ತಂದೆ ಆಕ್ರೋಶ.

ಹುಬ್ಬಳ್ಳಿ, ಏಪ್ರಿಲ್ 20, 2024 (www.justkannada.in): ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಆರೋಪಿ ಫಯಾಜ್ ತಾಯಿ  ಕ್ಷಮೆ ಕೇಳಿದ್ದು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೃತ ವಿದ್ಯಾರ್ಥಿನಿ ನೇಹಾ ತಂದೆ ನಿರಂಜನ್ ಹಿರೇಮಠ ಅವರು, ಮೊದಲು ನಿಮ್ಮ ಮಗನನ್ನ ಹತ್ಯೆ ಮಾಡಿ ನಂತರ ಕ್ಷಮೆಯಾಚಿಸಿ. ಹತ್ಯೆಯಾಗಿರುವ ನನ್ನ ಮಗಳ ಆತ್ಮಕ್ಕೆ ಶಾಂತಿಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಯಾಜ್ ಬಳಿ ನೇಹಾನೇ ಮೊದಲು ಪ್ರಪೋಸ್ ಮಾಡಿದ್ದು. ಇಬ್ಬರು ಲವ್ ಮಾಡುತ್ತಿದ್ದರು. ಘಟನೆ ಬಗ್ಗೆ ರಾಜ್ಯದ ಜನತೆ ಮುಂದೆ ಕ್ಷಮೆಯಾಚಿಸುತ್ತೇನೆ. ಆರೋಪಿ ಪುತ್ರ ಫಯಾಜ್ ಗೆ ಕಠಿಣ ಶಿಕ್ಷೆ ಕೊಡಿ ಎಂದು ಫಯಾಜ್ ತಾಯಿ ಮುಮ್ತಾಜ್ ಹೇಳಿಕೆ ನೀಡಿದ್ದರು.

ಈ ಕುರಿತು ಮಾತನಾಡಿರುವ ನೇಹಾ ತಂದೆ ನಿರಂಜನ್,  ಫಯಾಜ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆತನ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ್ದ ಎಂಬುದು ತಿಳಿದುಬಂದಿದೆ. ಈ ವಿಚಾರ ಹಾಗೂ ನೇಹಾಳನ್ನು ಪ್ರೀತಿಸುತ್ತಿದ್ದ ವಿಚಾರ ಮೊದಲೇ ತಿಳಿಸಬಹುದಿತ್ತಲ್ಲವೇ? ಒಂದು ವೇಳೆ ಮೊದಲೇ ಈ ವಿಷಯ ತಿಳಿಸಿದ್ದರೆ ನಾವು ಎಚ್ಚೆತ್ತುಕೊಂಡು ಮಗಳ ರಕ್ಷಣೆ ಮಾಡುತ್ತಿದ್ದೆವಲ್ಲವೇ? ಅದರ ಬದಲು ಈಗ ಕ್ಷಮೆ ಕೇಳುತ್ತಿದ್ದೇನೆ ಎಂದರೆ ಏನು ಪ್ರಯೋಜನ ಎಂದು  ಕಿಡಿಕಾರಿದ್ದಾರೆ.

ಹಾಗೆಯೇ ಕೇವಲ ಕ್ಷಮೆ ಕೇಳುವುದರಿಂದ ಏನೂ ಉಪಯೋಗವಿಲ್ಲ. ಫಯಾಜ್ ಅನ್ನು ಜಾಮೀನು ಕೊಡಿಸಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ. ಇಲ್ಲವಾದಲ್ಲಿ ನೇಣಿಗೇರಿಸಿ. ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ನಿರಂಜನ್ ಅವರು ಹೇಳಿದ್ದಾರೆ.

Key words: hubli, Neha, murder, Case, Father, Niranjan