ಊಟಕ್ಕೆ ಸೇರಿ ರಾಜಕೀಯ ಮಾತನಾಡಿದ್ರೆ ಅದರಲ್ಲಿ ತಪ್ಪೇನಿದೆ. ನಾವೆಲ್ಲ ರಾಜಕಾರಣಿಗಳಲ್ಲವೇ? ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಡಿಸೆಂಬರ್,6,2025 (www.justkannada.in):  ಕೆಲವು ಸಂದರ್ಭಗಳಲ್ಲಿ ರಾಜಕೀಯ ಮಾತನಾಡಲು ಹೋಗಿರುತ್ತೇವೆ. ಊಟಕ್ಕೆ ಸೇರಿ ರಾಜಕೀಯ ಮಾತನಾಡಿದ್ರೆ ಅದರಲ್ಲಿ ತಪ್ಪೇನಿದೆ. ನಾವೆಲ್ಲ ರಾಜಕಾರಣಿಗಳಲ್ಲವೇ? ಎಂದು ಸತೀಶ್ ಜಾರಕಿಹೊಳಿ ಭೇಟಿ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ರೀತಿ ಪ್ರತಿಕ್ರಿಯಿಸಿದರು.

ಸತೀಶ್‌ ಜಾರಕಿಹೊಳಿ ಅವರನ್ನ ಭೇಟಿ ಮಾಡಿ ಚರ್ಚಿಸಿದ ವಿಚಾರ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ನಮ್ಮ ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಕೆಲಸಗಳಾಗಬೇಕು. ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಿದ್ದಾರೆ. ಬಹಳ ಮುಖ್ಯವಾದ ಖಾತೆ. ಹೀಗಾಗಿ ಭೇಟಿ ಮಾಡಲು ಹೋಗಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ಮಾತನಾಡಲು ಹೋಗಿರುತ್ತೇವೆ. ಇದರಲ್ಲಿ ಮುಚ್ಚುಮರೆ ಏನಿದೆ ಎಂದರು.

ಐದು ಜನ ಸೇರಿ ಎರಡು ಸಲ ಊಟಕ್ಕೆ ಸೇರಿ ರಾಜಕೀಯ ಮಾತನಾಡಿದ್ದೆವು. ಇದರಲ್ಲಿ ತಪ್ಪೇನಿದೆ. ನಾವೆಲ್ಲ ರಾಜಕಾರಣಿಗಳಲ್ಲವೇ? ನಾವು ಮಾಡುತ್ತಿರುವುದೇ ರಾಜಕಾರಣ. ಪಕ್ಷದ ಸಿದ್ಧಾಂತಗಳೇನು, ಸರ್ಕಾರದಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆಯೇ, ಇಲ್ಲವೇ? ಎಂಬುದು ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿರುತ್ತೇವೆ.ಅದರಲ್ಲಿ ನಿಮಗೆ ಆಶ್ಚರ್ಯ ತರುವಂತದ್ದು ಏನು ಇಲ್ಲ ಎಂದರು.

ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದಲ್ಲಿ  ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ  ಪರಮೇಶ್ವರ್, ಈ ಬಗ್ಗೆ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ. ಯಾವ ಕಾರಣದಿಂದ ಹತ್ಯೆಯಾಗಿದೆ ಎಂಬುದರ ಬಗ್ಗೆ ತನಿಖೆಯ ವರದಿ ಬಂದರೆ ಗೊತ್ತಾಗುತ್ತದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

Key  words: politics, dinner, Home Minister, Parameshwar