ಮೈಸೂರು, ನವೆಂಬರ್ 25,2025 (www.justkannada.in): ಮೈಸೂರಿನಲ್ಲಿ ಸುಸಜ್ಜಿತವಾದ ಕರ್ನಾಟಕ ಪೊಲೀಸ್ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರು ಜಿಲ್ಲಾ ಪ್ರವಾಸದ ವೇಳೆ ಕೆಎಸ್‌ಆರ್‌ಪಿ ಆಶ್ವಾರೋಹಿ ದಳ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಆರಕ್ಷಕ ಅಶ್ವದಳದ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ನಜರ್‌ಬಾದ್ ಪೊಲೀಸ್ ಠಾಣೆಗೆ ದೀಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭದಿಂದ ಇಲ್ಲಿಯವರೆಗೆ ಬೆಳೆದುಬಂದ ರೀತಿ ಹಾಗೂ ಇಲಾಖೆಗೆ ಸಂಬಂಧಿಸಿದ ನೆನಪಿನಲ್ಲಿ ಉಳಿಯುವಂತಹ ವಸ್ತುಗಳನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಸಿದ್ಧವಾದ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಮಾಡಲಾಗುವುದು ಎಂದು ವಿವರಿಸಿದರು.
ನಜರ್ ಬಾದ್ ಪೊಲೀಸ್ ಠಾಣೆ ಮೈಸೂರಿನಲ್ಲಿ ಅತ್ಯಂತ ಹಳೆಯ ಪೊಲೀಸ್ ಠಾಣೆ. ಬಹಳ ದಿನದಿಂದ ಭೇಟಿ ನೀಡಬೇಕು ಎಂದುಕೊಂಡಿದೆ. ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ದಿಢೀರ್ ಭೇಟಿ ನೀಡಿದ್ದೇನೆ. ರೆಕಾರ್ಡ್, ಸಶಸ್ತ್ರಗಳನ್ನು ಇಟ್ಟುಕೊಳ್ಳುವುದು ಸೇರಿದಂತೆ ಪರಿಶೀಲನೆ ನಡೆಸಿದ್ದೇನೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೇನೆ. ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ನಾಲ್ಕೈದು ಜನರಿಗೆ ಖುದ್ದು ಕರೆ ಮಾಡಿ ವಿಚಾರಿಸಿದೆ.
ಆನ್‌ಲೈನ್ ವಂಚನೆಯಾಗಿರುವ ಬಗ್ಗೆ ತಿಳಿಸಿದರು. ವಂಚನೆಯಾದ ಬಳಿಕ 1930 ನಂಬರ್‌ಗೆ ಕರೆ ಮಾಡಿದ್ದಾರೆ. ವಂಚಕರ ಬ್ಯಾಂಕ್ ಖಾತೆ ನಿಷ್ಕ್ರೀಯಗೊಳಿಸಲಾಗಿರುತ್ತದೆ. ಆ ಪ್ರಕರಣದ ತನಿಖೆಯನ್ನು ಫಾಲೋಅಪ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಜರ್‌ಬಾದ್ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದರು.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದೇನೆ. ಹೆಚ್ಚಿನಂಶ ಸೈಬರ್ ವಂಚನೆಗೊಳಗಾಗುತ್ತಿದ್ದಾರೆ. ಮೈಸೂರಿನಲ್ಲಿ ಡಿಜಿಟಲ್ ಅರೆಸ್ಟ್, ಹೂಡಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಸುಮಾರು 30 ಕೋಟಿ ರೂ.ಯಷ್ಟು ಸೈಬರ್ ವಂಚನೆಯಾಗಿದೆ. ಕಳೆದ ವರ್ಷ 40 ಕೋಟಿ ರೂ.ಯಷ್ಟು ವಂಚನೆಯಾಗಿತ್ತು. ಈ ವರ್ಷ ಕಡಿಮೆಯಾಗಿದೆ. 30 ಕೋಟಿ ರೂಪಾಯಿ ವಂಚನೆಯಲ್ಲಿ 5 ಕೋಟಿ ರೂ. ಪತ್ತೆಹಚ್ಚಲಾಗಿದೆ. ಇದನ್ನು ಯಾವ ರೀತಿ ನಿಯಂತ್ರಣಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಚರ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಕುಳಿತು ಅಮೆರಿಕಾದವರಿಗೆ ಡಿಜಿಟಲ್ ಅರೆಸ್ಟ್ ವಂಚನೆ ಮಾಡುತ್ತಿದ್ದವರ ಬಗ್ಗೆ ಪತ್ತೆಹಚ್ಚಿ ಬಂಧಿಸಿದ್ದೇವೆ.
ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೈಬರ್ ಲ್ಯಾಬ್ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಸೈಬರ್ ಲ್ಯಾಬ್ ಮಾಡಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿರಿಯ ಪೊಲೀಸ್ ಅಧಿಕಾರಿವರೆಗೂ ಸೈಬರ್ ಅಪರಾಧದ ಕುರಿತು ತಾಂತ್ರಿಕ ಜ್ಞಾನ ಹಾಗೂ ತರಬೇತಿ ಇರಬೇಕು. ಈ ಎರಡು ವರ್ಷದೊಳಗೆ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೂ ಹಂತಹಂತವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಪೊಲೀಸ್ ಆಯೋಗದಿಂದ ಒಬ್ಬ ಪೊಲೀಸ್ ಎಷ್ಟು ತಾಸು ಕೆಲಸ ಮಾಡಬೇಕು ಎಂಬ ಬಗ್ಗೆ ಸೂಚನೆ ಇದೆ. ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗುವುದಿಲ್ಲ. ಪಿಎಸ್‌ಐ ಅಕ್ರಮದಿಂದ ನೇಮಕಾತಿ ಸ್ಥಗಿತವಾಗಿತ್ತು. ಇದೆಲ್ಲ ಸಮಸ್ಯೆಯನ್ನು ನಿವಾರಿಸಿ, ನೇಮಕಾತಿ ಮಾಡಿ 900ಕ್ಕೂ ಹೆಚ್ಚು ಪಿಎಸ್‌ಐಗಳನ್ನು ತರಬೇತಿಗೆ ಕಳುಹಿಸಲಾಗಿದೆ. ಎರಡು ತಿಂಗಳಲ್ಲಿ ತರಬೇತಿ ಪಡೆದು, ಕರ್ತವ್ಯಕ್ಕೆ ಬರುತ್ತಾರೆ. ಅಲ್ಲಿವರೆಗೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಸೈಬರ್ ಅಪರಾಧದ ಕುರಿತು ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಲಾಗುತ್ತಿದೆ. ವಿದ್ಯಾವಂತರು ಹೆಚ್ಚಿನ ರೀತಿಯಲ್ಲಿ ವಂಚನೆಗೆ ಒಳಗಾಗುತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಟೆಕ್ಕಿಯೊಬ್ಬರು ನಿರಂತರವಾಗಿ 32 ಕೋಟಿ ರೂ. ವಂಚನೆಗೊಳಗಾಗಿದ್ದಾರೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಈ ರೀತಿಯ ವಂಚನೆಗೆ ಸಿಲುಕುತ್ತಿದ್ದಾರೆ ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಒಂದು ವರ್ಷಕ್ಕೆ ವರ್ಗಾವಣೆ ಮಾಡುವ ನಿಯಮವಿತ್ತು. ಇದರಿಂದ ನಮಗು ಒತ್ತಡ ಮತ್ತು ಇಲಾಖೆಯಲ್ಲಿ ಸರಿಯಾಗಿ ಕೆಲಸಗಳಾಗುತ್ತಿರಲಿಲ್ಲ. ಈಗ ವರ್ಗಾವಣೆ ಮಾಡಲು ಎರಡು ವರ್ಷ ಆಗಿರಲೇಬೇಕು. ಇದರಿಂದ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಹಂತಹಂತವಾಗಿ ಹಲವು ಬದಲಾವಣೆಗಳನ್ನು ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಐಜಿಪಿ ಡಾ. ಎಂ.ಬಿ.ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿ ಬಿಂದುಮಣಿ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಗಣ್ಯರಾದ ಹೆಚ್.ಎ.ವೆಂಕಟೇಶ್ ಅವರು ಇದ್ದರು.
Key words: Well-equipped, police museum , established , Mysore, Home Minister, Parameshwar







