ಹೆಚ್’ಎಂಟಿಗೆ ಮರುಜೀವ: DPR ಸಿದ್ಧವಾಗುತ್ತಿದೆ -ಕೇಂದ್ರ ಸಚಿವ HDK

ಮಂಡ್ಯ,ಅಕ್ಟೋಬರ್,16,2025 (www.justkannada.in):  ಪ್ರತಿಷ್ಠಿತ ಹೆಚ್ ಎಂಟಿ ಕಾರ್ಖಾನೆಗೆ ಮರುಜೀವ ನೀಡಲು ಸಮಗ್ರ ಯೋಜನಾ ವರದಿ (DPR) ತಯಾರು ಮಾಡಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡುವ ವೇಳೆ ಮಹತ್ವದ ಈ ಅಂಶವನ್ನು ತಿಳಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೆಚ್ ಎಂಟಿ ಹಾಗೂ ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL) ಪುನರುಜ್ಜೀವನ ಮಾಡುವ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿಸಿದರು.

ನೀತಿ ಆಯೋಗದ ಸದಸ್ಯರು ಆಗಿರುವ ಡಾ. ವಿ.ಕೆ. ಸಾರಸ್ವತ ಅವರು ಹೆಚ್ ಎಂಟಿ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಮಹತ್ವದ ವರದಿ ನೀಡಿದ್ದಾರೆ. ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಿಗಳು, ಹೆಚ್’ಎಂಟಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿ.ಕೆ.ಸಾರಸ್ವತ ಅವರೊಂದಿಗೆ ನವದೆಹಲಿಯಲ್ಲಿ ಹಲವು ಸುತ್ತಿನ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ ಜಪಾನ್ ದೇಶದಿಂದ ತಾಂತ್ರಿಕ ಸಹಕಾರ ಪಡೆಯುವ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ತಂಡವನ್ನು ಆ ದೇಶಕ್ಕೆ ಕಳಿಸಿದ್ದೆ ಎಂದು  ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬುದು ಜನರ ಅಭಿಲಾಷೆಯಾಗಿದೆ. ರಾಜ್ಯ ಸರ್ಕಾರದ ಸಹಕಾರ ಕೇಳಿದ್ದೇನೆ ಹಾಗೂ ದೆಹಲಿ ಮಟ್ಟದಲ್ಲಿಯೂ ಮಂಡ್ಯದಲ್ಲಿ ಉದ್ಯಮ ಸ್ಥಾಪಿಸುವ ಬಗ್ಗೆ ಹಲವಾರು ಉದ್ದಿಮೆದಾರರ ಜತೆ ಮಾತುಕತೆ ನಡೆಸಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ  ಮಾಹಿತಿ ನೀಡಿದರು.

ಹಾಗೆಯೇ ನನಗೆ ಸಿಕ್ಕಿರುವ ಎರಡು ಖಾತೆಗಳ ಸಹಾಯದಿಂದ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒಂದಿಷ್ಟು ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರವು ಕೇಂದ್ರದ ಜೊತೆ ಉತ್ತಮ ರೀತಿಯಲ್ಲಿ ಬಾಂಧವ್ಯ ಹೊಂದಿರಬೇಕು. ಹಾಗಾದಾಗ ಮಾತ್ರ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚು ಅನುಕೂಲ ಆಗುತ್ತದೆ. ಎಲ್ಲ ವಿಷಯಕ್ಕೂ ರಾಜಕಾರಣ ತರುವುದು ಅನಗತ್ಯ ಎಂದು ಕುಮಾರಸ್ವಾಮಿ ಅವರು ಹೇಳಿದರು.

Key words: HMT, revived,  DPR,  prepared, Union Minister, HDK, Mandya