ಪ್ರವಾಹದ ಮಧ್ಯದಲ್ಲಿ ಸಿಲುಕಿದ್ದ ಶಾಸಕ ಎಚ್.ಕೆ ಪಾಟೀಲ್ ಗೆ  ಕರೆ ಮಾಡಿ ಕ್ಷೇಮ ವಿಚಾರಿಸಿದ ಸಿಎಂ ಬಿಎಸ್ ವೈ…

ಗದಗ,ಆ,9,2019(www.justkannada.in): ಗದಗ ಜಿಲ್ಲೆಯ ಕೊಣ್ಣೂರು ಮತ್ತು ಹೊಳೆ ಆಲೂರು ಮಧ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರಿಗೆ ನೆರವು ನೀಡಲು ಹೋಗಿದ್ದ ಮುಂಬೈ-ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಕೆ.ಪಿ.ಸಿ.ಸಿ ಸಮಿತಿಯ ಅಧ್ಯಕ್ಷರಾದ ಶಾಸಕ ಎಚ್.ಕೆ. ಪಾಟೀಲ್ ಪ್ರವಾಹದ ಮಧ್ಯದಲ್ಲಿ ಸಿಲುಕಿದ್ದ ಘಟನೆ ನಡೆದಿದೆ.

ನೆರೆ ಸಂತ್ರಸ್ಥರಿಗೆ ಬ್ಲಾಂಕೆಟ್ ವಿತರಿಸಲು ಹೋಗಿದ್ದ ಶಾಸಕ ಎಚ್.ಕೆ ಪಾಟೀಲ್ ಮತ್ತು ಮಾಜಿ ಸಂಸದ ಐಜಿ ಸನದಿ ಇತರ ಮತ್ತು ಇತರ ಪದಾಧಿಕಾರಿಗಳಿದ್ದ ತಂಡ ಪ್ರವಾಹದ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಾಗ ಸಿಎಂ ಬಿಎಸ್ ಯಡಿಯೂರಪ್ಪ ಹೆಚ್.ಕೆ ಪಾಟೀಲ್ ಅವರಿಗೆ ಕರೆ ಮಾಡಿ ಕ್ಷೇಮ ವಿಚಾರಿಸಿದರು.

ಮಲಪ್ರಭಾ ನದಿಯ ಪ್ರವಾಹದಿಂದ ಪೀಡಿತವಾಗಿರುವ ವಾಸನ್, ಬೂದಿಹಾಳ, ಕೊಣ್ಣೂರು, ಹೊಳೆ-ಆಲೂರು ಗ್ರಾಮಗಳ  ಪ್ರವಾಹ ಪೀಡಿತ ಸಂತ್ರಸ್ಥರ ನೆರವಿಗೆ ಧಾವಿಸುವುದರ ಜೊತೆಗೆ ಕೆ.ಪಿ.ಸಿ.ಸಿ. ಸಮಿತಿ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡ ಸಂದರ್ಭದಲ್ಲಿ 4 ಅಡಿ ಮಟ್ಟದ ನೀರಿನಲ್ಲಿ ವಾಹನ ಸಿಲುಕಿ ಹಾಕಿಕೊಂಡು ಮುಂದೆ ಪ್ರಯಾಣಿಸದ ಸ್ಥಿತಿ ಉಂಟಾಗಿತ್ತು.ಸುಮಾರು 2 ತಾಸುಗಳ ನಂತರ ಸಾವರಿಸಿಕೊಂಡು ಪ್ರಯಾಣ ಮುಂದುವರೆಸಿ ಗೂಡ್ಸ್ ರೈಲಿನಲ್ಲಿ ಬಾಗಲಕೋಟೆಗೆ ಬಂದಿಳಿದ ಘಟನೆ ನಡೆಯಿತು.

ಪ್ರವಾಹ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಚ್.ಕೆ. ಪಾಟೀಲರಿಗೆ ದೂರವಾಣಿ ಮೂಲಕ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸಿದರು. ಮುಖ್ಯಮಂತ್ರಿಗಳ ಕರೆಯ ನಂತರ ಅರ್ಧ ಗಂಟೆಯಲ್ಲಿ ಪೊಲೀಸ್ ವಾಹನ ಮತ್ತಿತರ ವಾಹನಗಳು ಧಾವಿಸಿದವು. ಈ ಸಂದರ್ಭದಲ್ಲಿ ನೆರೆ ಸಂತ್ರಸ್ಥರ ನೆರವಿಗೆ ಬರುವಂತೆ, ನನ್ನ ಕಾಳಜಿಗಿಂತ ಹೆಚ್ಚು ನೆರೆ ಸಂತ್ರಸ್ಥರ ಕಾಳಜಿ ಮಾಡಬೇಕಾಗಿರುವುದು ಅವಶ್ಯಕತೆಯಿದೆ ಎಂದು ಎಚ್. ಕೆ. ಪಾಟೀಲರು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಬಾಗಲಕೋಟೆಗೆ ಬೋಟುಗಳ ಮೂಲಕ ತೆರಳಬೇಕೆಂಬ ಪ್ರಯತ್ನದಲ್ಲಿದ್ದಾಗ ಸ್ಥಳೀಯರು ಮತ್ತು ಜೊತೆಗಿದ್ದವರೆಲ್ಲ ಗೂಡ್ಸ್ ರೈಲಿನ ಮೂಲಕ ಹೋಗುವಂತೆ ಸಲಹೆ ಮಾಡಿದರು. ಕೊಣ್ಣೂರು ಮತ್ತು ಹೊಳೆ ಆಲೂರು ಗ್ರಾಮಗಳು ಪೂರ್ಣವಾಗಿ ಮುಳುಗಡೆಯಾಗಿವೆ. ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆ ಪರಿಸ್ಥಿತಿ ಗಂಭೀರವಾಗಿದ್ದರೂ ಪರಿಹಾರ ಕಾರ್ಯ ಚುರುಕುಗೊಂಡಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಜುಲೈ 31ರ ಒಳಗೇ ಮುಗಿದು ಹೋಗಿರುವ ಫಲಸು ಭೀಮಾ ಯೋಜನೆಯ ವಿಮಾ ಕಂತು ಪಾವತಿ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಇದೇ ಸಂದರ್ಭದಲ್ಲಿ ಕೋರಲಾಯಿತು.

ಗಂಜಿ ಕೇಂದ್ರಗಳು, ನಿರಾಶ್ರತರ ಕೇಂದ್ರಗಳಿಗೆ ಭೇಟ್ಟಿ ಕೊಟ್ಟ ಕೆ.ಪಿ.ಸಿ.ಸಿ. ಸಮಿತಿ ಅವಶ್ಯಕ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಕೈಗೊಂಡಿತು. ಪ್ರವಾಸ ಮುಂದುವರೆದಿದ್ದು, ಬಾಗಲಕೋಟೆ ಜಿಲ್ಲೆಯ ಪ್ರವಾಸ ಈಗಷ್ಟೇ ಪ್ರಾರಂಭಗೊಂಡಿದೆ.

Key words: HK Patil-middle – flood-  Call – Wellness -CM BS Yeddyurappa