ಲಂಚ ಪ್ರಕರಣ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು,ಮಾರ್ಚ್,17,2023(www.justkannada.in): ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ಆದೇಶವನ್ನ ಹೈಕೋರ್ಟ್ ಕಾಯ್ದಿರಿಸಿದೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿ,  ಉಭಯ ವಕೀಲರ ವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ. ನಟರಾಜನ್, ಆದೇಶವನ್ನು ಕಾಯ್ದಿರಿಸಿದರು.

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆರಂಭಿಸಿದ ಕೂಡಲೇ ಅದಕ್ಕೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸಿದರು. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು. ಈ ಮಧ್ಯೆ, ಮಾಡಾಳ್ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದರು. ಆದರೆ ಅವರ ಮನವಿಯನ್ನು ಹೈಕೋರ್ಟ್ ನಿರಾಕರಿಸಿ, ಕೂಡಲೇ ವಾದಮಂಡನೆ ಆರಂಭಿಸುವಂತೆ ಸೂಚಿಸಿತು.

ಮಾಡಾಳ್ ಅವರು ಪ್ರತಿದಿನವೂ ಲೋಕಾಯುಕ್ತ ಪೊಲೀಸರ ತನಿಖೆಗೆ ಹಾಜರಾಗಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ತನಿಖೆಯೇ ಮುಕ್ತಾಯದ ಹಂತದಲ್ಲಿರುವಾಗ ಬಂಧನದ ಅಗತ್ಯವಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮಾಡಾಳ್ ಪರ ವಕೀಲರು ವಾದ ಮಂಡಿಸಿದರು.

ಇಂದಿನ ದಿನಗಳಲ್ಲಿ ಲಂಚವನ್ನು ನೇರವಾಗಿ ಪಡೆಯುವುದಿಲ್ಲ. ಇಲ್ಲೂ ಸಹ ಪುತ್ರನ ಮೂಲಕ ಲಂಚವನ್ನು ಪಡೆದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.

Key words: High Court- reserves -Madal Virupakshappa- anticipatory bail -application -order