ಬೆಂಗಳೂರು,ಜುಲೈ,25,2025 (www.justkannada.in): ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ದದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸಿಎಸ್ ಶಾಲಿನಿ ರಜನೀಶ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಕುರಿತ ತನಿಖೆಗೆ ಮಧ್ಯಂತರ ತಡೆ ನೀಡಿ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಈ ಮೂಲಕ ಎಂಎಲ್ ಸಿ ರವಿಕುಮಾರ್ ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ.
ಶಾಲಿನಿ ರಜನೀಶ್ ದೂರು ನೀಡಿಲ್ಲ ಮೂರನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಾಗಿದೆ. ಹೇಳಿಕೆಯಲ್ಲಿ ಅಪರಾಧದ ಅಂಶಗಳಿಲ್ಲವೆಂದು ಎಂಎಲ್ ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಪೀಠ ತನಿಖೆಗೆ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಪ್ರಶ್ನಿಸಿ ಎಂಎಲ್ ಸಿ ಎನ್ ರವಿಕುಮಾರ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಪೀಠವು ಎನ್.ರವಿಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿತ್ತು.
Key words: Statement, Shalini Rajneesh, High Court, stays ,investigation, MLC Ravikumar