ಕ್ಯಾತಮಾರನಹಳ್ಳಿ ಮಸೀದಿ ವಿವಾದ: ಡಿಸಿ ಆದೇಶಕ್ಕೆ ಹೈಕೋರ್ಟ್ ತಡೆ

ಮೈಸೂರು,ಮೇ,8,2025 (www.justkannada.in): ಮೈಸೂರಿನ ಕ್ಯಾತಮಾರನಹಳ್ಳಿ ವಿವಾದಿತ ಜಾಗದಲ್ಲಿ ಮದರಸಾ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಕ್ಯಾತಮಾರನಹಳ್ಳಿ ವಿವಾದಿತ ಜಾಗದಲ್ಲಿ ಮದರಸಾ ಮಾಡಲು ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈ ಕೋರ್ಟ್ ತಡೆ ನೀಡಿದ್ದು ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಕುರಿತು  ಮಾಹಿತಿ ಹಂಚಿಕೊಂಡಿರುವ ವಕೀಲ ಅ.ಮ ಭಾಸ್ಕರ್ , ಈಗಾಗಲೇ ವಿವಾದಿತ ಜಾಗದ ವಿಚಾರಕ್ಕೆ ಕೊಲೆ ಆಗಿದೆ. ಅಲ್ಲದೆ ಮದರಸಾ ಮಾಡಲು ಸ್ಥಳೀಯರ ವಿರೋಧವಿದೆ. ವಿವಾದಿತ ಜಾಗ ರೇಸಿಡೆನ್ಸಿಯಲ್ ಆಗಿದ್ದು, ಅಲ್ಲಿ ನರ್ಸರಿ ಅರೇಬಿಕ್ ಶಾಲೆ ತೆರೆಯಲು ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ಅನುಮತಿ ನೀಡಿದ್ದರು. ಸದ್ಯ ಹೈಕೋರ್ಟ್ ಡಿಸಿ ಅವರ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ ಎಂದು ತಿಳಿಸಿದರು.

ಸಂತಸ ಹಂಚಿಕೊಂಡ ಕ್ಯಾತಮಾರ‌ನಹಳ್ಳಿ ಗ್ರಾಮಸ್ಥರು

ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೆ ಸಂತಸ ಹಂಚಿಕೊಂಡ ಕ್ಯಾತಮಾರ‌ನಹಳ್ಳಿ ಗ್ರಾಮಸ್ಥರು, ವಿವಾದಿತ ಸ್ಥಳದಲ್ಲಿ ಮದರಸ ನಡೆಸದಂತೆ ಹೈಕೋರ್ಟ್ ತಡೆ ನೀಡಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಸೂಚನೆ ನೀಡಿದೆ. ಇದು ನಮಗೆ ಮೊದಲ ಹಂತದ ಜಯ. ಯಾವುದೇ ಕಾರಣಕ್ಕೂ ಅಲ್ಲಿ ಮದರಸ ತೆರೆಯಬಾರದು. ಈಗಾಗಲೇ ಅದು ಸೂಕ್ಷ್ಮ ಪ್ರದೇಶವಾಗಿದೆ. ಕೋರ್ಟ್ ಆದೇಶವನ್ನ ನಾವು ಗೌರವಿಸುತ್ತೇವೆ  ಮತ್ತು ಪಾಲಿಸುತ್ತೇವೆ. ಮುಂದೆ ಏನಾಗುತ್ತದೋ ಅದಕ್ಕೆ ನಮ್ಮ ವಕೀಲರಿದ್ದಾರೆ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.

Key words: Kyathamaranahalli, Mosque, controversy, High Court, stays, Mysore DC, order