ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ಹೃದಯ ವೈಶಾಲ್ಯ ಕಾರ್ಯಕ್ರಮ-ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ.ಅಕ್ಟೋಬರ್, 5,2023(www.justkannada.in): ಗ್ರಾಮೀಣ ಜನರ ಆರೋಗ್ಯದ ದೃಷ್ಠಿಯಿಂದ ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ ಅವರ ಮನೆ ಬಾಗಿಲಲ್ಲೇ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೃದಯ ವೈಶಾಲ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹೃದಯ ವೈಶಾಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹೃದಯ ಸಂಬಂಧಿ ರೋಗಗಳನ್ನು ಮೊದಲು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಹೃದಯಾಘಾತವನ್ನು ತಡೆಗಟ್ಟಬಹುದು. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸಿ.ಎ.ಡಿ ಸಂಸ್ಥೆ ಜನರ ಹೃದಯ ಸಂಬಂಧಿ ರೋಗಗಳನ್ನು ಪತ್ತೆ ಹಚ್ಚಲು ಹೃದಯ ವೈಶಾಲ್ಯ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತದ ಪ್ರಕರಣಗಳ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ಹೃದಯ ವೈಶಾಲ್ಯ ಎಂಬ ವಿನೂತನ ಕಾರ್ಯಕ್ರಮವೊಂದು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 120 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಯೋಜನೆಯಲ್ಲಿ ಪ್ರಥಮ ಹಂತದಲ್ಲಿ ಜಿಲ್ಲೆಯ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತೀ ತಾಲೂಕಿನ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ.ಸಿ.ಜಿ ಯಂತ್ರಗಳನ್ನು ಉಚಿತವಾಗಿ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಇ.ಸಿ.ಜಿ ಯಂತ್ರವನ್ನು ಈ ಯೋಜನೆಯಡಿ ಒದಗಿಸಿಕೊಡಿ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಹಾಗೂ ಸಿ.ಹೆಚ್.ಒ ಗಳಿಗೆ ಇ.ಸಿ.ಜಿ ಯಂತ್ರದ ಕಾರ್ಯನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗುವುದು. ಆರೋಗ್ಯ ಇಲಾಖೆ ಅವರು ತರಬೇತಿ ಪಡೆದ ನಂತರ ಆಸಕ್ತಿ ಹಾಗೂ ಪ್ರಮಾಣಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ. ಸಾರ್ವಜನಿಕರು ಇ.ಸಿ.ಜಿಗೆ ಒಳಪಟ್ಟ ನಂತರ ಆನ್‌ ಲೈನ್ ಮೂಲಕ ವರದಿಯನ್ನು ಸಿ.ಎ.ಡಿ ಸಂಸ್ಥೆಗೆ ಕಳುಹಿಸಿಕೊಡಲಾಗುವುದು. ಸಂಸ್ಥೆಯಲ್ಲಿ ತಜ್ಞ ವೈದ್ಯರು ವರದಿಯನ್ನು ಪರಿಶೀಲಿಸಿ ಯಾವುದೇ ತೊಂದರೆಗಳಿದ್ದಲ್ಲಿ ಮುಂದಿನ ಚಿಕಿತ್ಸೆಗೆ ವೈದ್ಯರನ್ನು ಸಂಪರ್ಕಿಸುವ ಬಗ್ಗೆ ಮಾಹಿತಿ ನೀಡುತ್ತಾರೆ. ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಲಿದ್ದಾರೆ ಎಂದರು.

ಹೃದಯ ವೈಶಾಲ್ಯ ಯೋಜನೆಯ ಅನುಷ್ಠಾನವನ್ನು CAD(ಕಾರ್ಡಿಯಾಲಜಿ ಎಟ್ ಡೂರ್‌ಸ್ಟೆಪ್ ಫೌಂಡೇಷನ್) ಸಂಸ್ಥೆಯ ಮೂಲಕ ಇ.ಸಿ.ಜಿ ಯಂತ್ರಗಳನ್ನು ಉಚಿತವಾಗಿ ಪೂರೈಸುತ್ತಿರುವುದು ಸಾರ್ವಜನಿಕರಿಗೆ ಬಹಳ ಉಪಯುಕ್ತವಾದ ಯೋಜನೆಯಾಗಿದೆ. ಆಗಾಗಿ ಸರ್ಕಾರ ಹಾಗೂ ಜಿಲ್ಲೆಯ ಜನರ ಪರವಾಗಿ ಸಿ.ಎ.ಡಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಗಣನೀಯ ಪುಮಾಣದಲ್ಲಿ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ, ಗ್ರಾಮೀಣ ಭಾಗದ ಜನರು ತಮ್ಮ ಹೃದಯ ಸಂಬಂಧಿತ ಪರೀಕ್ಷೆಗಳನ್ನು ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಕೊಳ್ಳದಿರುವುದರಿಂದ ತಮ್ಮ ಆರೋಗ್ಯ ಕಾಳಜಿ ಕುರಿತು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೃದಯ ವೈಶಾಲ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಹೃದಯ ವೈಶಾಲ್ಯ ಯೋಜನೆಯು ಸಾವಿರಾರು ಗ್ರಾಮೀಣ ಭಾಗದ ಜನರಿಗೆ ಅನುಕೂಲಕರವಾಗಿದೆ. ಆದ್ದರಿಂದ ಮಹಾತ್ಮಕಾಂಕ್ಷೆ ಮತ್ತು ವಿನೂತನವಾದ ಈ ಹೃದಯ ವೈಶಾಲ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಗ್ರಾಮೀಣ ಭಾಗದ ಜನರು ತಮಗೆ ಅಗತ್ಯವೆನಿಸಿದ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಉಚಿತವಾಗಿ ಹೃದಯ ತಪಾಸಣೆಯನ್ನು ಮಾಡಿಸಿಕೊಂಡ ವರದಿಯನ್ನು Cardiology at doorstep Foundation (CAD) ಸಂಸ್ಥೆಯಡಿ Empanelled ಆಗಿರುವ ತಜ್ಞ ವೈದ್ಯರು ಆನ್ ಲೈನ್ ಮೂಲಕವೇ ಪರಿಶೀಲಿಸಿ ಹೃದಯದ ಸ್ಥಿತಿ-ಗತಿ ಬಗ್ಗೆ ತಿಳಿಸುತ್ತಾರೆ. ನಂತರ ಸಮಸ್ಯೆ ಇದ್ದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆ ಅಥವಾ ಇನ್ಯಾವುದೇ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಹೃದಯ ತಜ್ಞ ಪದ್ಮನಾಭ ಕಾಮತ್ ಅವರು ಮಾತನಾಡಿ, ಹೃದಯಘಾತವಾದಾಗ ಅದನ್ನು ಹೇಗೆ ತಡೆಗಟ್ಟುವುದು ಎಂದು ಜನರಲ್ಲಿ ಅರಿವು ಮೂಡಿಸಬೇಕಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಇ.ಸಿ.ಜಿ ಲಭ್ಯವಿಲ್ಲ. ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲೂ ಇ.ಸಿ.ಜಿ ಯಂತ್ರಗಳನ್ನು ಅಳವಡಿಸಿದ್ದರೆ ಹೃದಯಘಾತಗಳನ್ನು ತಡೆಗಟ್ಟಬಹುದು ಎಂದರು.

ಕಾರ್ಯಕ್ರಮದಲ್ಲಿ Cardiology at Doorstep Foundation (CAD) ಸಂಸ್ಥೆಯ ಹೃದಯ ತಜ್ಞ ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು

ಹೃದಯ ವೈಶಾಲ್ಯ ಯೋಜನೆಗೆ ಸಂಬಂಧಿಸಿದಂತೆ ವಿಧಾನ ಸಭಾ ಕ್ಷೇತ್ರವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿವರ ಇಂತಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಿವಪುರ, ಹಲ್ಲೇಕೆರೆ ಕೆರಗೋಡು, ಬೇಬಿ,  ಹಾಗೂ ಮಾರಗೌಡನಹಳ್ಳಿ. ಮದ್ದೂರು ವಿಧಾನಸಭಾ ಕ್ಷೇತ್ರದ ಕೆ.ಹೊನ್ನಲಗೆರೆ, ಕದಲೂರು, ಕೆಸ್ತೂರು, ಕೌಡ್ಲೆ ಹಾಗೂ ಕಾಡುಕೊತ್ತನಹಳ್ಳಿ. ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬೆಳಕವಾಡಿ, ಚಿಕ್ಕಬಾಗಿಲು, ಡಿ.ಹಲಸಹಳ್ಳಿ, ಹಲಗೂರು ಹಾಗೂ ಅಂತರಹಳ್ಳಿ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ  ಬೆಳಗೊಳ, ಮಹದೇವಪುರ, ತಗಳ್ಳಿ, ಅರಕೆರೆ, ಕೊತ್ತತ್ತಿ. ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಸಂತೇಬಾಚಹಳ್ಳಿ, ಅಕ್ಕಿಹೆಬ್ಬಾಳು, ಶೀಳನೆರೆ, ಸಿಂಧಘಟ್ಟ, ಸಾರಂಗಿ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚಿಕ್ಕಬ್ಯಾಡರಹಳ್ಳಿ, ನಾರಾಯಣಪುರ, ಕ್ಯಾತನಹಳ್ಳಿ,  ಕೆರೆತೂಣ್ಣೂರು, ಬೆಳ್ಳಾಳೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ  ಬಿಳಿಗುಂದ, ಕದಬಹಳ್ಳಿ,  ಕಲಗೆರೆ, ದೇವಲಾಪುರ, ಚಿಣ್ಯ.

ಕಾರ್ಯಕ್ರಮದಲ್ಲಿ ಶಾಸಕರಾದ ರಮೇಶ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಪಿ, ದರ್ಶನ್ ಪುಟ್ಟಣಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ: ಮೋಹನ್, ಮಿಮ್ಸ್ ನಿರ್ದೇಶಕ ಡಾ: ಮಹೇಂದ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Heart – program -health care -rural people-Minister-N. Chaluvarayaswamy