ಮೈಸೂರಿನ ಐಶ್(AIISH)ನಿಂದ ಮೂರು ದಿನಗಳ ಕಾಲ ಆರೋಗ್ಯ ಶಿಬಿರ: ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತರಿಂದ ಉದ್ಘಾಟನೆ.

ಮೈಸೂರು,ಜುಲೈ,11,2022(www.justkannada.in):  ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣಸಂಸ್ಥೆ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.

ನಗರ ಸಶಸ್ತ್ರ ಮೀಸಲು ಪರೇಡ್ ಮೈದಾನ ಕಚೇರಿಯಲ್ಲಿ ಆಯೋಜಿಸಿರುವ ಆರೋಗ್ಯ ಶಿಬಿರವನ್ನ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉದ್ಘಾಟನೆ ಮಾಡಿದರು. ಈ ವೇಳೆ ಐಶ್(AIISH) ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಆಯುಕ್ತ ಚಂದ್ರಗುಪ್ತ, ಈ ಸಂಸ್ಥೆಗೆ ಪ್ರಧಾನಿ ಮಂತ್ರಿಗಳು ಬರುವ ಸಾಧ್ಯತೆ ಇತ್ತು. ಈ ನೆಪದಲ್ಲಿ ಸಂಸ್ಥೆಗೆ ನಾವು ಭೇಟಿ ಕೊಡುವ ಸಂದರ್ಭ ಬಂತು. ಈ ಸಂಸ್ಥೆಗೆ ಭೇಟಿ ಕೊಟ್ಟಾಗ ಇಷ್ಟೆಲ್ಲಾ ಅನುಕೂಲಗಳಿವೆಯೇ ಎಂದು ನಮಗೆ ಆಶ್ಚರ್ಯ ಉಂಟಾಗಿತ್ತು. ಕಾಡಿನಲ್ಲಿ ಪ್ರಾಣಿಗಳು ಅಂಗ ವೈಕಲ್ಯಕ್ಕೆ ತುತ್ತಾದರೇ ಅವು ಬದುಕುವುದೇ ಕಷ್ಟ. ಆದರೆ ನಾಡಿನಲ್ಲಿ ಮನುಷ್ಯರಿಗೆ ನ್ಯೂನ್ಯತೆಗಳಿದ್ದರೇ ಅವರನ್ನ ಪೋಷಿಸುವ,ಅವರನ್ನ ವ್ಯವಸ್ಥಿತವಾದ ಸ್ಥಿತಿಗೆ ತಲುಪಿಸುವ ಪ್ರಯತ್ನಗಳಿವೆ. ಇದೇ ಕಾಡಿಗೂ ಮತ್ತು ನಾಡಿಗೂ ವ್ಯತ್ಯಾಸ ಎಂದರು.

ಐಶ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಮಾತನಾಡಿ, ದಿನದ 24 ಗಂಟೆಗಳ ಕಾಲ ಪೊಲೀಸರು ಕೆಲಸ ನಿರ್ವಹಿಸುತ್ತಾರೆ. ಸದಾಕಾಲ  ಜನರಿಗಾಗಿ  ಕರ್ತವ್ಯ ನಿರ್ವಹಿಸುವ ಪೊಲೀಸರಿಗೋಸ್ಕರ ಈ ಆರೋಗ್ಯ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ. ಪೊಲೀಸರು ನಮ್ಮ ಸಂಸ್ಥೆಯ ರಾಯಭಾರಿಗಳಿದ್ದ ಹಾಗೆ. ನೆರೆಹೊರೆಯಲ್ಲಿ ಅಥವಾ ಕುಟುಂಬದಲ್ಲಿ ವಾಕ್ ಶ್ರವಣ ದೋಷ ಇರುವಂತಹ ಮಕ್ಕಳು ಕಂಡು ಬಂದರೇ ಅವರನ್ನ ನಮ್ಮ ಸಂಸ್ಥೆಗೆ ಕರೆತಂದರೇ ಅವರಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ನುಡಿದರು.

Key words: Health Camp – AIISH- Mysore- Police Commissioner – Dr. Chandragupta.