ಆರೋಗ್ಯ ಸಹಾಯ ನಿಧಿ ಸೌಲಭ್ಯ ಪತ್ರಕರ್ತರ ಕುಟುಂಬದ ಸದಸ್ಯರಿಗೂ ವಿಸ್ತರಿಸಿ- ಮೈಸೂರು ಮೇಯರ್ ಗೆ ಮನವಿ ಸಲ್ಲಿಕೆ.

ಮೈಸೂರು,ಜೂನ್,28,2023(www.justkannada.in): ಪತ್ರಕರ್ತರ ಸಂಘದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಸಹಾಯ ನಿಧಿ ಸ್ಥಾಪಿಸುವ ಜೊತೆ ಪ್ರಸಕ್ತ ಸಾಲಿನಲ್ಲಿ ಸಹಾಯ ನಿಧಿಯನ್ನು 50 ಲಕ್ಷಕ್ಕೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸಹಾಯಧನದ ಸೌಲಭ್ಯವನ್ನು ಪತ್ರಕರ್ತರ ಕುಟುಂಬದ ಸದಸ್ಯರಿಗೂ ವಿಸ್ತರಿಸುವಂತೆ ಬುಧವಾರ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೇಯರ್ ಶಿವಕುಮಾರ್, ಆಯುಕ್ತರಾದ ಜಿ.ಲಕ್ಷ್ಮೀಕಾಂತರೆಡ್ಡಿ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗರಾಜ್ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಟಿ.ರವಿಕುಮಾರ್ ಮಾತನಾಡಿ, ಪಾಲಿಕೆ ಆಡಳಿತ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸಹಾಯ ನಿಧಿ ಸ್ಥಾಪಿಸುವ ಜೊತೆಗೆ ಪ್ರಸಕ್ತ ಸಾಲಿನಿಂದ ನಿಧಿಯ ಮೊತ್ತವನ್ನು 25ಲಕ್ಷ ರೂ.ಗಳಿಂದ 50ಲಕ್ಷ ರೂ.ಗಳಿಗೆ ಹೆಚ್ಚಳ ಮಾಡುವ ಮೂಲಕ ಸಂಘದ ಕೋರಿಕೆಯನ್ನು ಮಾನ್ಯ ಮಾಡಿದ್ದಕ್ಕೆ ಪತ್ರಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಆರೋಗ್ಯ ಸಹಾಯ ನಿಧಿ ಈವರೆಗೆ ಸಂಘದ ಸದಸ್ಯರಿಗೆ ಮಾತ್ರ ಉಪಯೋಗವಾಗುತ್ತಿದ್ದು ಮುಂದಿನ ದಿನಗಳಲ್ಲಿ ಸದಸ್ಯರ ಕುಟುಂಬದವರಿಗೂ ವಿಸ್ತರಿಸುವಂತೆ ಮನವಿ ಮಾಡಿದರು.

ಇದಕ್ಕೆ ಮೇಯರ್ ಶಿವಕುಮಾರ್, ಆಯುಕ್ತರಾದ ಲಕ್ಷ್ಮೀಕಾಂತರೆಡ್ಡಿ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜು ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ  ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೂವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಕಾರ್ಯಕಾರಿ ಸಮಿತಿ ಸದಸ್ಯ  ಎ.ಕೃಷ್ಣೋಜಿರಾವ್ ಹಾಜರಿದ್ದರು.

Key words: health- assistance -fund -facility – journalists-family-Mysore-press club