ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ್ದು ಸಾ.ರಾ ಮಹೇಶ್: ಹೆಚ್ ವಿಶ್ವನಾಥ್  ಕಿಡಿ: ರಮೇಶ್ ಕುಮಾರ್ ವಿರುದ್ದವೂ ಗುಡುಗಿದ ಹಳ್ಳಿಹಕ್ಕಿ….

ಮೈಸೂರು,ಆ,4,2019(www.justkannada.in):  ನನ್ನ ಮಗನಿಗೆ ವಿಷ ಹಾಕಿದ ರೀತಿ ಮತ್ತೊಬ್ಬರಿಗೆ ಹಾಕಬೇಡಿ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್,  ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ್ದು ಸಾ.ರಾ ಮಹೇಶ್ ಎಂದು ಕಿಡಿಕಾರಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಸಾ.ರಾ ಮಹೇಶ್ ಓರ್ವ ಅಪ್ರಬುದ್ಧ ವ್ಯಕ್ತಿ. ನನ್ನ ವಿರುದ್ದ 26 ಕೋಟಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಮಹಾನ್ ಸುಳ್ಳುಗಾರ.  ಅಪ್ಪ ಅವ್ವ ಮಕ್ಕಳ ಮೇಲೆ ಸದನದಲ್ಲಿ ಆಣೆ ಹಾಕಿದ್ದು ನೋವುಂಟು ಮಾಡಿದೆ. ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ನಿಜವಾಗಲು ವಿಷ ಉಣಿಸಿದ್ದು ಸಾ.ರಾ ಮಹೇಶ್ ಎಂದು ಹರಿಹಾಯ್ದರು.

ಹಾಗೆಯೇ ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದವೂ ಗುಡುಗಿದ ಹಳ್ಳಿಹಕ್ಕಿ, ಸದನದಲ್ಲಿ ನಾವು ಇಲ್ಲದಾಗ ಮಾತನಾಡಲು ಅವಕಾಶ ನೀಡಿ ಸಂಪ್ರದಾಯವನ್ನ ಉಲ್ಲಂಘಿಸಿದ್ದಾರೆ. ಅವರಿಗೆ ಅವರೇ ಸಂತ ಪ್ರಾಮಾಣಿಕ ಅಂತಾ ಹೇಳಿಕೊಳ್ತಾರೆ. ಸದನದಲ್ಲಿ ಸಾ.ರಾ ಮಹೇಶ್ ನನ್ನ ವಿರುದ್ದ 26 ಕೋಟಿ ಹಣ ಪಡೆದಿರುವ ಆರೋಪ ಮಾಡಿದ್ದರು. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಸಹ ಪ್ರಸ್ತಾಪಿಸಿದ್ದರು. ಸದನ ಕೇವಲ ನಿಂದನೆಗೆ ಸೀಮಿತವಾಯಿತು.  ಈ ಮೂಲಕ ವ್ಯಕ್ತಿಯ ವ್ಯಕ್ತತ್ವಹರಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಹುಲ್ ಪ್ರಚಾರಕ್ಕೆ ಬಂದಾಗ ಅವರ ಭೇಟಿಗೆ ಯತ್ನಿಸಿದೆ. ಆದರೆ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಬಾರದು. ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಲ್ಲೂ ನನಗೆ ತೊಂದರೆಯಾಗಿತ್ತು. ಇಲ್ಲೂ ತೊಂದರೆಯಾಯಿತು ಎಂದು ಹೆಚ್.ವಿಶ್ವನಾಥ್ ಹೇಳಿದರು.

ನಾವು ಪದವಿ ,ದುಡ್ಡಿಗಾಗಿ ನಮ್ಮನ್ನು ಮಾರಿಕೊಂಡಿಲ್ಲ. ಮುನಿರತ್ನ, ಎಸ್.ಟಿ ಸೋಮಶೇಖರ್, ಎಂಟಿಬಿ ನಾಗರಾಜ್ ಸಾಕಷ್ಟು ಹಣ ಹೊಂದಿದ್ದಾರೆ. ಹೀಗಾಗಿ  ನಾವು ಹಣಕ್ಕೆ ಮಾರಿಕೊಂಡಿಲ್ಲ.  ನಮಗಾದ ಅವಮಾನದಿಂದ ನಾವು ರಾಜೀನಾಮೆ ನೀಡಿದ್ದೇವೆ ಎಂದರು.

Key words: HD Deve Gowda’s- family -poison- Sara Mahesh-H, Vishwanath