ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ʼದ್ವೇಷ ಭಾಷಣʼ ಮಸೂದೆ ಅಂಗೀಕಾರ

ಬೆಳಗಾವಿ,ಡಿಸೆಂಬರ್,18,2025 (www.justkannada.in):   ವಿರೋಧ ಪಕ್ಷಗಳ ವಿರೋಧದ ನಡುವೆಯೂ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ವಿಧಾನಸಭೆಯಲ್ಲಿ  ಅಂಗೀಕರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರದ ಪರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಇದೀಗ ವಿಪಕ್ಷಗಳ ವಿರೋಧದ ನಡುವೆಯೇ ಕರ್ನಾಟಕ ದ್ವೇಷ ಭಾಷಣ ಮತ್ತು‌ ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ.

ಮೊದಲ ದ್ವೇಷ ಭಾಷಣ ತಪ್ಪಿಗೆ 1 ರಿಂದ 7 ವರ್ಷ ಜೈಲು, 50 ಸಾವಿರ ರೂ ದಂಡ. ದ್ವೇಷ ಭಾಷಣ ಪುನರಾವರ್ತನೆಗೆ 2 ವರ್ಷದಿಂದ ಗರಿಷ್ಠ ಶಿಕ್ಷೆ 7 ವರ್ಷ ಜೈಲು, 1 ಲಕ್ಷ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕೊಡಲಾಗಿದೆ.

ಮಸೂದೆ ಅಂಗೀಕಾರ  ವೇಳೆ ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ನೀಡಿದ ಹೇಳಿಕೆ ಗದ್ದಲವನ್ನುಂಟು ಮಾಡಿತು. ಕರಾವಳಿಯಲ್ಲಿ ಬೆಂಕಿ ಹಾಕಿ ಇಲ್ಲೂ ಬೆಂಕಿ  ಹಚ್ಚುತ್ತಿದ್ದಾರೆಂದು ಸಚಿವ ಬೈರತಿ ಸುರೇಶ್ ಹೇಳಿಕೆ ಬಗ್ಗೆ ಕರಾವಳಿ ಭಾಗದ ಶಾಸಕರು ತೀವ್ರ  ಅಸಮಾಧಾನ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ಸಮಯದಲ್ಲಿ ಗೊಂದಲ, ಗದ್ದಲದ ನಡುವೆ ಸರ್ಕಾರ ವಿಧೇಯಕವನ್ನು ಅಂಗೀಕರಿಸಿತು. ಇದೇ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು  ಬಿಲ್ ನ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Key words: ‘Hate Speech’ Bill, passed, Assembly