ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಓಪನ್: ನಾಳೆಯಿಂದ ಭಕ್ತರಿಗೆ  ದರ್ಶನಕ್ಕೆ ಅವಕಾಶ.

ಹಾಸನ,ನವೆಂಬರ್,2,2023(www.justkannada.in):  ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಇಂದು ತೆರೆಯಲಾಗಿದ್ದು ನಾಳೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಪೂಜಾ ಕೈಂಕರ್ಯದ ಮೂಲಕ ಹಾಸನ ಜಿಲ್ಲಾ ಉಸ್ತುವಾರಿ ಕೆ ಎನ್ ರಾಜಣ್ಣ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಹಾಸನಾಂಬ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಇಂದು ಮಧ್ಯಾಹ್ನ 12.23 ಗಂಟೆಗೆ ಹಾಸನಾಂಬಾ ದೇಗುಲ ಹೊರಗೆ ಕದಳಿ ಕಡಿಯುತ್ತಲೇ ದೇವಾಯಲಯದ ಗರ್ಭಗುಡಿ ಬಾಗಿಲು ತೆರೆಯಲಾಯಿತು.

ಗರ್ಭಗುಡಿಯ ಬಾಗಿಲು ತೆರೆದ ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ನಾಳೆಯಿಂದ ಹಾಸನಾಂಬ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿದ್ದು, ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 12 ದಿನಗಳ ವರೆಗೆ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಬೆಳಿಗ್ಗೆ 6 ರಿಂದ ಹಾಸನಾಂಬೆ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಹಾಸನಾಂಬ ದರ್ಶನ ಪಡೆಯಲು ಹಾಸನ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಪ್ರತಿವರ್ಷ ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಹಾಗೂ ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

Key words: Hasanambe temple – door- open- Devotees – darshan – tomorrow.