‘ಅಧಿಕಾರದ ಜಪ ಹೊಂದಾಣಿಕೆ ನೆಪ’: ಹೆಚ್.ಎ ವೆಂಕಟೇಶ್ ಟೀಕೆ

ಬೆಂಗಳೂರು,ಅಕ್ಟೋಬರ್,23,2025 (www.justkannada.in): ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿರುವುದು ಎರಡು ಪಕ್ಷಗಳ ರಾಜಕೀಯ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಬಿವೈ ವಿಜಯೇಂದ್ರ ಭೇಟಿಯಾಗಿ ಸಮನ್ವಯ ಸಮಿತಿ ಕುರಿತು ಚರ್ಚಿಸಿದ್ದರು. ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ ಟಾಂಗ್ ಕೊಟ್ಟಿರುವ  ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್, ಲೋಕಸಭಾ ಚುನಾವಣೆ ಕಳೆದು  ಒಂದುವರೆ ವರ್ಷಗಳಾಗಿವೆ ಈಗ ಸಮನ್ವಯ ಸಮಿತಿ ರಚಿಸುವ ಔಚಿತ್ಯ ಎರಡು ಕುಟುಂಬಗಳ ಮಧ್ಯ ಅಧಿಕಾರ  ಹಂಚಿಕೆಗಾಗಿ ಸಮನ್ವಯ ಸಮಿತಿಯೇ? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.

ಸಮನ್ವಯ ಸಮಿತಿಯ ನಿಜವಾದ ಉದ್ದೇಶ ಬಿ. ವೈ . ವಿಜಯೇಂದ್ರ ಹಾಗೂ ಎಚ್. ಡಿ. ಕುಮಾರಸ್ವಾಮಿಯವರಿಗೆ ತಮ್ಮ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ತಮ್ಮ ಕುರ್ಚಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸಮನ್ವಯ ಸಮಿತಿಯನ್ನು ರಚಿಸಿ ರಾಜಕೀಯವಾಗಿ ತಮ್ಮ ಅವಶ್ಯಕತೆಯನ್ನು ತೋರಿಸುವ ಉದ್ದೇಶವೇ ಹೊರತು ಮತ್ತೇನು ಇಲ್ಲ. ಸಂಪೂರ್ಣ ಜನಗಳ ವಿಶ್ವಾಸ ಗಳಿಸಿ ಎಂದು ಅಧಿಕಾರ ಪಡೆಯದ ಈ ಎರಡು ಪಕ್ಷಗಳ ನಾಯಕರ ವರ್ತನೆಯನ್ನು ಜನ ಗಮನಿಸುತ್ತಿದ್ದಾರೆ. ಪಕ್ಷ ಸಂಘಟಿಸುವ ಶಕ್ತಿ ವಿಜಯೇಂದ್ರ ಇಲ್ಲ, ಕೇಂದ್ರದಿಂದ ಯಾವುದೇ ಯೋಜನೆಯನ್ನು ತರಲು ವಿಫಲವಾಗಿರುವ ಕುಮಾರಸ್ವಾಮಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಾಗಲೇ ಈ ಇಬ್ಬರ ನಡುವೆ ಪೈಪೋಟಿ ವ್ಯಕ್ತವಾಗಿದೆ . ಯಾವ ಕಾರಣದಿಂದಲೂ ಇವರ ಉದ್ದೇಶ ಈಡೇರುವುದಿಲ್ಲ. ಜನ ಮನ್ನಣೆ ಸಾಧ್ಯವಾಗದ ಎರಡು ಪಕ್ಷದ ನಾಯಕರು ಅಧಿಕಾರಕ್ಕಾಗಿ ನಡೆಸುತ್ತಿರುವ ಕುತಂತ್ರ ನೋಡಿದರೆ ಮರುಕ ಹುಟ್ಟುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ಹೊಂದಾಣಿಕೆ ಯಾವ ರೀತಿ ಮುರಿದು ಬಿತ್ತು. ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ. ಪ್ರಸ್ತುತ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಜನಗಳ ಮುಂದೆ ಒಟ್ಟಿಗೆ ಕಾಣಿಸಿಕೊಳ್ಳುವುದು ನಿಜಕ್ಕೂ ವಿಪರ್ಯಾಸ.

ರಾಜ್ಯ ಸರ್ಕಾರದ ಆಡಳಿತದ ವೈಫಲ್ಯತೆಯನ್ನು ಹೋರಾಟ ಮಾಡುವ ಯಾವುದೇ ನೈತಿಕತೆ ವಿರೋಧ ಪಕ್ಷಗಳಿಗೆ ಇಲ್ಲದಂತಾಗಿದೆ.   ಕಾಂಗ್ರೆಸ್ ಸರ್ಕಾರ ಜನಪರ ಆಡಳಿತದ ಮೂಲಕ ಕರ್ನಾಟಕದಲ್ಲಿ ಬಹಳ ಶಕ್ತಿಯುತವಾಗಿದೆ. ಸಮನ್ವಯ ಸಮಿತಿ ರಚಿಸುತ್ತೇವೆ ಎಂದು ಹೇಳುವುದರ ಮೂಲಕ ಎರಡು ಪಕ್ಷಗಳಲ್ಲಿ ವಿಶ್ವಾಸ ಮೂಡುತ್ತಿಲ್ಲ ಎಂಬುದೇ ಅರ್ಥ. ಸಮನ್ವಯ ಸಮಿತಿ ರಚನೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕಲ್ಲ. ಅಧಿಕಾರದ ಜಪ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಯಾವುದೇ ಚುನಾವಣೆಯಲ್ಲೂ ಯಶಸ್ಸು ಅಸಾಧ್ಯ ಎಂದು ಹೆಚ್.ಎ ವೆಂಕಟೇಶ್ ಕುಟುಕಿದ್ದಾರೆ.

Key words: HD Kumaraswamy, BY Vijayendra, KPCC, HA Venkatesh