ಉಪರಾಷ್ಟ್ರಪತಿ ದಿಢೀರ್ ರಾಜೀನಾಮೆ ಮತ್ತು ಸುಪ್ರೀಂ ತೀರ್ಪು ಬಿಜೆಪಿ ಸರ್ಕಾರದ ದುಷ್ಟತನ ಸಾಬೀತು- ಹೆಚ್.ಎ ವೆಂಕಟೇಶ್

ಮೈಸೂರು,ಜುಲೈ,23,2025 (www.justkannada.in): ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ದಿಢೀರ್ ರಾಜೀನಾಮೆ ಹಾಗೂ ಸುಪ್ರೀಂ ಕೋರ್ಟ್ ಇಡಿ ನೋಟಿಸ್ ರದ್ದು ಬಿಜೆಪಿ ಸರ್ಕಾರ ದುಷ್ಟತನ ರಾಷ್ಟ್ರಮಟ್ಟದಲ್ಲಿ ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಕುಟುಕಿದರು.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಹೆಚ್ ಎ ವೆಂಕಟೇಶ್, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸರಿಯಾದ ಪಾಠ ಕಲಿಸಿದೆ.  ಮುಡಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಕೇಂದ್ರ ಸರ್ಕಾರ ಬಹಳವಾಗಿ ಪ್ರಯತ್ನಿಸಿರುವುದು ಜನಜನಿತ. ಜಾರಿ ನಿರ್ದೇಶನಾಲಯ (ಇಡಿ) ದಂತಹ ಸಾಂವಿಧಾನಿಕ ಸಂಸ್ಥೆಯನ್ನು ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಂಡಿದ್ದರು. ಇಡಿ ಅಧಿಕಾರಿ ವರ್ಗ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ತನಿಖೆ ಹೆಸರಿನಲ್ಲಿ ದಬ್ಬಾಳಿಕೆ ನಡೆಸಿದೆ. ಮುಡ ಪ್ರಕರಣಕ್ಕೆ ಸಂಬಂಧಿಸಿ ಇಡಿ ನೀಡಿದ್ದ ನೋಟಿಸ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಕ್ರಿಯೆ. ಇದೇ ಸಮಯ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸಿಬಿಐ ಅಧಿಕಾರಿಗಳ ವರ್ತನೆಗೆ  ಛೀಮಾರಿ ಹಾಕಿದೆ. ಈ ಬೆಳವಣಿಗೆಗಳು ಬಿಜೆಪಿಯ ಅಧಿಕಾರ ಕಬಳಿಕೆ ಮತ್ತು ಹವಣಿಕೆಯ ದುಷ್ಟತನವನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತೆರೆದಿಟ್ಟಿವೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಧಿಕಾರ ದುರ್ಬಳಕೆಯ ಆರೋಪ ಮಾಡುತ್ತಿದ್ದ ಬಿಜೆಪಿಯವರ ಬಾಯಿಗೂ ಬೀಗ ಬಿದ್ದಿದೆ. ಸರ್ವೋಚ್ಚ ನ್ಯಾಯಾಲಯದ ಇಂತಹ  ನ್ಯಾಯ ಪಕ್ಷಪಾತಿ  ನಿಲುವುಗಳು ಪ್ರಜಾಪ್ರಭುತ್ವದ ಉಳಿವಿಗೆ ಮಹತ್ವದ ಕೊಡುಗೆಯೂ ಆಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರ ಹುನ್ನಾರ

ಉಪರಾಷ್ಟ್ರಪತಿಯೂ ಆಗಿದ್ದ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಹಿಂದೆ ಬಿಜೆಪಿ ನಾಯಕರ ಹುನ್ನಾರವಿರುವುದು ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಆರೋಗ್ಯದ ಸಮಸ್ಯೆಯನ್ನು ಧನಕರ್ ಮುಂದು ಮಾಡಿದ್ದಾರಾದರೂ ಒಟ್ಟು ಬೆಳವಣಿಗೆಯ ಹಿಂದೆ ರಾಜಕೀಯ ಲೆಕ್ಕಾಚಾರವಿರುವುದನ್ನು ತಳ್ಳಿ ಹಾಕಲಾಗುತ್ತಿಲ್ಲ. ಪೀಠಾಸೀನ ಸಭಾಪತಿಯವರ ಹಿರಿಮೆಗೆ ಧಕ್ಕೆಯಾಗುವಂತೆ ಕೇಂದ್ರ ಸಚಿವ ಜೆಪಿ ನಡ್ಡಾ ನಡೆದುಕೊಂಡಿರುವುದು ಸದನದಲ್ಲಿ ದಾಖಲಾಗಿದೆ. ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಎಂತಹವರನ್ನಾದರೂ ಸರಿ ಬಲಿಕೊಡುತ್ತಾರೆ ಎನ್ನುವುದಕ್ಕೆ ಬಲಪಂಥೀಯ ಸಿದ್ದಾಂತಗಳನ್ನು ನಂಬಿ ಆಚರಿಸುತ್ತಿದ್ದ ಜಗದೀಪ್ ಅವರ ರಾಜೀನಾಮೆ ಪ್ರಕರಣ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಗುರಿ ಸಾಧನೆಗೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಧನಕರ್ ಪ್ರಕರಣ ಹೊಸ ಉದಾಹರಣೆಯಷ್ಟೇ ಎಂದು ಹೆಚ್.ಎ ವೆಂಕಟೇಶ್ ಟೀಕಿಸಿದ್ದಾರೆ.vtu

Key words: resignation, Vice President, Supreme Court,  verdict, BJP, H.A. Venkatesh