ಸಚಿವ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಖಂಡನಾರ್ಹ-ಹೆಚ್.ಎ ವೆಂಕಟೇಶ್

ಮೈಸೂರು,ಮೇ,21,2025 (www.justkannada.in): ರಾಜ್ಯದ ಗೃಹ ಸಚಿವರೂ ಆಗಿರುವ ಹಿರಿಯ ರಾಜಕಾರಣಿ ಡಾ.ಜಿ. ಪರಮೇಶ್ವರ ಅವರ ನೇತೃತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ  ದಾಳಿ ಖಂಡನಾರ್ಹ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್.ಎ ವೆಂಕಟೇಶ್, ಕೇಂದ್ರದ ಬಿಜೆಪಿ ಸರ್ಕಾರದ ರಾಜಕೀಯ ಅಜೆಂಡಾಗಳನ್ನು ಜಾರಿಗೆ ತರಲು, ಕೃಪಾಪೋಷಿತ ನಾಟಕ ಮಂಡಳಿಯಂತೆ ಇಡಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ.  ರಾಜಕೀಯವಾಗಿ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಬಿಜೆಪಿ ನಾಯಕರು ಇಡಿ, ಐಟಿ, ಸಿಬಿಐ ಮುಂತಾದ ಸಂಸ್ಥೆಗಳನ್ನು ಬಹುವಾಗಿ ದುರ್ಬಳಕೆ  ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಸರ್ವ ವೇದ್ಯ. ಹಿರಿಯ ದಲಿತ ನಾಯಕರು ಆಗಿರುವ ಪರಮೇಶ್ವರ್ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಉನ್ನತಿಯನ್ನು ಸಹಿಸದೆ ಬಿಜೆಪಿ ನಾಯಕರು ಅಸೂಯೆಯಿಂದ ಈ ದ್ವೇಷದ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆಯೂ ಸಿದ್ದಾರ್ಥ ಸಂಸ್ಥೆಗಳ ಮೇಲೆ ಇಡಿ ಐಟಿ ಇತ್ಯಾದಿಗಳ ಪ್ರಾಯೋಜಿತ ದಾಳಿ ನಡೆದಿತ್ತು, ಆದರೆ ಯಾವುದೇ ಅಕ್ರಮ ಬಯಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಟಕ್ಕೆ ಬಿದ್ದಂತೆ ಮತ್ತೆ ದಾಳಿ ನಡೆಸಿರುವುದು ಆಡಳಿತಗಾರರ ಕುತ್ಸಿತ ಮನೋಭಾವವನ್ನು ಬಹಿರಂಗಪಡಿಸಿದೆ.  ಇದು ರಾಜಕೀಯ ಪ್ರೇರಿತ ದಾಳಿ ಎಂಬ ಅರಿವಿದ್ದರೂ, ರಾಜಕೀಯಕ್ಕಾಗಿಯೇ ಗೃಹ ಸಚಿವರ ರಾಜೀನಾಮೆ ಕೇಳಿರುವ ಬಿಜೆಪಿ ನಾಯಕ ಆರ್.  ಅಶೋಕ್ ಅವರ ನಡೆ ಅಕ್ಷೇಪಾರ್ಹ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಮತ್ತು ಸರ್ಕಾರದಲ್ಲಿ ಹಿರಿಯ ದಲಿತ ನಾಯಕರಾಗಿರುವ ಪರಮೇಶ್ವರ್ ಅವರ ಸಕ್ರಿಯ ಭಾಗವಹಿಸುವಿಕೆ ಬಿಜೆಪಿ ನಾಯಕರ ಕಣ್ಣು ಕುಕ್ಕುತ್ತಿದೆ, ಇದಕ್ಕಾಗಿಯೇ ಇವರು ಅಡ್ಡ ದಾರಿಯಲ್ಲಿ ಪರಮೇಶ್ವರ್ ಅವರಿಗೆ ಕೆಟ್ಟ ಹೆಸರು ತರಲು ಕಸರತ್ತು ಮಾಡುತ್ತಿದ್ದಾರೆ, ಇಂತಹ ನೂರಾರು ಯತ್ನಗಳು ನಡೆದರೂ ಪರಮೇಶ್ವರ್ ಅವರ ಹೋರಾಟದ ಹಾದಿಗೆ ಕಪ್ಪುಮಸಿ ಬಳಿಯಲು ಸಾಧ್ಯವಿಲ್ಲ, ಬದಲಾಗಿ ಬಿಜೆಪಿಯವರ ಕೀಳು ಮಟ್ಟದ ರಾಜಕೀಯ ರಾಜ್ಯದ ಜನರೆದುರು ಮತ್ತೆ ಬಯಲಾಗಿದೆ. ಇದಕ್ಕೆ ಈ ಪಕ್ಷದ ನಾಯಕರು ಮುಂದೆ ದೊಡ್ಡಬೆಲೆ ತೆರಬೇಕಾಗುತ್ತದೆ.

ಇಂತಹ ಯಾವುದೇ ದಾಳಿ ಇತ್ಯಾದಿ ಬೆದರಿಕೆಗಳಿಗೆ ಪರಮೇಶ್ವರ್ ಎಂದಿಗೂ ಎದೆಗುಂದುವುದಿಲ್ಲ, ಅವರೊಟ್ಟಿಗೆ ಇಡೀ ಸಮುದಾಯ, ರಾಜ್ಯದ ಜನತೆ ಮತ್ತು ಕಾರ್ಯಕರ್ತ ವರ್ಗವಿದೆ ಎನ್ನುವುದನ್ನು ತಿಳಿಸಬಯಸುವೆ ಎಂದು ಎಚ್.ಎ. ವೆಂಕಟೇಶ್  ತಿಳಿಸಿದ್ದಾರೆ.

Key words: ED, raids , Parameshwar, educational institutions, H.A. Venkatesh