ಕಾಲ ಬದಲಾದರೂ ಗುರು-ಶಿಷ್ಯರ ಸಂಬಂಧ ಬದಲಾಗದು: ಮೈವಿವಿ‌ ಕುಲಪತಿ ಪ್ರೊ.ಹೇಮಂತ್ ಕುಮಾರ್

ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಕಾಲ ಎಷ್ಟೇ ಬದಲಾದರೂ ಗುರು-ಶಿಷ್ಯರ ಸಂಬಂಧ ಬದಲಾಗದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ‌ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂಬಂಧ ಕೋವಿಡ್ ನಂತರದ ಜಗತ್ತು ಉನ್ನತ ಶಿಕ್ಷಣದಲ್ಲಿ ಶಿಕ್ಷಕರು ಎಂಬ ವಿಷಯದ ಬಗ್ಗೆ ಮಾತನಾಡಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಗಾಥೆಯನ್ನು ಮತ್ತೆ ಮತ್ತೆ ಮೆಲುಕು ಹಾಕಬೇಕಾದ ಅವಶ್ಯಕತೆ ಇದೆ. ಅವರಿಂದ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ‌ ಪ್ರಾಪ್ತವಾಗುತ್ತದೆ. ರಾಧಾಕೃಷ್ಣನ್ ಅವರು ಬೈಬಲ್ ಓದುವುದರ ಜೊತೆಗೆ ವಿವೇಕಾನಂದರ ಪ್ರೇರಣೆಯಿಂದ ಬ್ರಹ್ಮ ಸೂತ್ರ ಉಪನಿಷತ್ತು ಹಾಗೂ ಭಗವದ್ಗೀತೆಯನ್ನು ಅಭ್ಯಾಸ ಮಾಡಿದರು.

ಕಾಲ ಎಷ್ಟೇ ಬದಲಾದರೂ ಗುರು-ಶಿಷ್ಯರ ಸಂಬಂಧ ಬದಲಾಗದು. ಭಾರತೀಯ ಸಂಪ್ರದಾಯದಲ್ಲಿ ಗುರು ಶಿಷ್ಯ ಪರಂಪರೆಗೆ ವಿಶೇಷ ಮಹತ್ವ ಇದೆ. ಒಂದು ನಾಗರಿಕತೆ ಸದೃಢವಾಗಿ ನಿಂತು ತನ್ನನ್ನು ಅವಲಂಭಿಸಿದ ಜನಸಮುದಾಯಕ್ಕೆ ಸಕಲ ಶ್ರೇಯಸ್ಸನ್ನು ಉಂಟು ಮಾಡಲು ಗುರುಪರಂಪರೆ‌ ತುಂಬಾ ಮುಖ್ಯವಾಗುತ್ತದೆ. ಆದ್ದರಿಂದಲೇ ಡಾ.ರಾಧಾಕೃಷ್ಣನ್ ಅವರನ್ನು ನೆನೆಯಬೇಕು. ಜೊತೆಗೆ ಅವರ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಮೈಸೂರು ವಿವಿಯ ಮೂವರಿಗೆ ಭಾರತ ರತ್ನ ಬಂದಿದೆ. ಮೈವಿವಿ‌ ಕಟ್ಟಿದ ವಿಶ್ವೇಶ್ವರಯ್ಯ, ಪಾಠ ಬೋಧಿಸಿದ ರಾಧಾಕೃಷ್ಣನ್ ಹಾಗೂ ಇಲ್ಲೇ ಓದಿದ ಸಿ.ಎನ್.ಆರ್. ರಾವ್ ಅವರು ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಮೈವಿವಿಗೆ ಹೆಮ್ಮೆಯ ‌ಸಂಗತಿ ಎಂದರು.

ಎಂದು ಕೇಂದ್ರದ ಮಾನವ ಸಂಪನ್ಮೂಲ, ಬಿಲ್ಡಿಂಗ್ ‌ಕೆಪಾಸಿಟಿ‌ ಮಿಷನ್ ಸದಸ್ಯರಾದ ಡಾ.ಆರ್. ಬಾಲಸುಬ್ರಹ್ಮಣ್ಯಂ, ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

key words: Guru-student relationship does not change over time: Vice Chancellor Prof. Hemanth Kumar