ಸರ್ಕಾರ ಕೊರೊನಾ ನಿರ್ವಹಣೆ ಅಂಕಿ,ಅಂಶ ತಿರುಚಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಅಕ್ಟೋಬರ್,09,2020(www.justkannada.in) : ಅಂಕಿ ಅಂಶಗಳನ್ನು ತಿರುಚುವ ಮೂಲಕ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸರ್ಕಾರದ ಬೆನ್ನನ್ನು ಜನರು ತಟ್ಟಬೇಕೇ ಹೊರತು ಸರ್ಕಾರವೇ ತಟ್ಟಿಕೊಂಡರೆ ಹಾಸ್ಯಾಸ್ಪದವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.jk-logo-justkannada-logoಸರ್ಕಾರ ಕೊರೋನಾ ಸಾವುಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಮುಚ್ಚಿಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 99 ಜನ ಮೃತ ಪಟ್ಟಿದ್ದಾರೆಂದು ಸರ್ಕಾರ ಹೇಳುತ್ತಿದೆ. ನನಗಿರುವ ಅಧಿಕೃತ ಮಾಹಿತಿಯ ಪ್ರಕಾರ ದೊಡ್ಡಬಳ್ಳಾಪುರ ಒಂದರಲ್ಲೆ ಇಷ್ಟು ಜನರು ಮರಣ ಹೊಂದಿದ್ದಾರೆ. ಹೊಸಕೋಟೆಯಲ್ಲಿ ಸುಮಾರು 80 ಜನ, ನೆಲಮಂಗಲದಲ್ಲಿ 40 ಜನ, ದೇವನಹಳ್ಳಿಯಲ್ಲಿ 50 ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಬೇಸರವ್ಯಕ್ತಪಡಿಸಿದ್ದಾರೆ.

ಈ ಕುರಿತು ನಿಮಗೆ ನಂಬಿಕೆ ಇಲ್ಲದಿದ್ದರೆ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಕೇಳಿ ನೋಡಿ ಸತ್ಯ ಗೊತ್ತಾಗುತ್ತದೆ. ಆಸ್ಪತ್ರೆಗೆ ಹೋಗಲು ಭಯಭೀತರಾಗಿ ಕಾಯಿಲೆ ಪತ್ತೆಯಾಗದೇ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Govt,Corona,management,figures,twists,turns,back,Former CM Siddaramaiah

ಸಂಪೂರ್ಣ ಮಾಹಿತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಇನ್ನೂ ಉತ್ತರ ಬಂದಿಲ್ಲ

ಬೆಂಗಳೂರು ನಗರದ ಪರಿಸ್ಥಿತಿಯೂ ಇದಕ್ಕೆ ಹೊರತಲ್ಲ. ನಗರದಲ್ಲಿ 3,190 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕಳೆದ ವರ್ಷದ ಜುಲೈನಲ್ಲಿ 5,778, ಆಗಸ್ಟ್ ನಲ್ಲಿ 5,481, ಸೆಪ್ಟೆಂಬರ್‍ನಲ್ಲಿ 5,411 ಮಂದಿ ಮೃತಪಟ್ಟಿದ್ದರು. ಈ ವರ್ಷದ ಜುಲೈನಲ್ಲಿ 6,477, ಆಗಸ್ಟ್ ನಲ್ಲಿ 9,340, ಸೆಪ್ಟೆಂಬರ್ ನಲ್ಲಿ 8,710 ಮಂದಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮರಣ ಹೊಂದಿದ್ದಾರೆಂಬ ಸರ್ಕಾರದ ದಾಖಲೆಗಳನ್ನು ಆಧರಿಸಿ ಪತ್ರಿಕೆಯೊಂದು ವರದಿ ಮಾಡಿದೆ. ಈ ಕುರಿತಂತೆ ಎರಡೂ ವರ್ಷಗಳ ರಾಜ್ಯದ ಸಂಪೂರ್ಣ ಮಾಹಿತಿ ನೀಡುವಂತೆ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇನ್ನೂ ಉತ್ತರ ಬಂದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಸರ್ಕಾರ 3 ಜನ ಸತ್ತರೆ ಒಬ್ಬರು ಸತ್ತಿದ್ದಾರೆ ಎಂದು ಹೇಳುತ್ತಿದೆ

2019 ರ ಜುಲೈಯಿಂದ ಸೆಪ್ಟೆಂಬರ್ ವರೆಗೆ 16,670 ಜನರು ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ. ಈ ವರ್ಷದ ಇದೇ 3 ತಿಂಗಳ ಅವಧಿಯಲ್ಲಿ 24,527 ಜನರು ಮರಣ ಹೊಂದಿದ್ದಾರೆಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ. ಅಂದರೆ, 7,857 ಕ್ಕೂ ಹೆಚ್ಚು ಮರಣ ಸಂಭವಿಸಿದೆ ಎಂದಾಯಿತು. ಗಮನಿಸಬೇಕಾದ ಅಂಶವೆಂದರೆ ನಗರದಿಂದ ಲಕ್ಷಾಂತರ ಜನ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಜುಲೈ ತಿಂಗಳಿನಲ್ಲಿ ಲಾಕ್‍ಡೌನ್ ಕೂಡ ಜಾರಿ ಮಾಡಲಾಗಿತ್ತು. ಈ ಅವಧಿಯಲ್ಲಿ ಅಪಘಾತ ಸಂಬಂಧಿ ಸಾವುಗಳ ಸಂಖ್ಯೆ ತೀರ ಕಡಿಮೆಯಿತ್ತು. ಆದರೂ, ಇಷ್ಟೊಂದು ಸಾವುಗಳು ಹೇಗೆ ಸಂಭವಿಸಿದವು? ಹೆಚ್ಚುವರಿಯಾದ ಈ ಸಾವುಗಳು ಕೊರೋನಾ ಸಂಬಂಧಿತ ಸಾವುಗಳು ಎನ್ನುವುದರಲ್ಲಿ ಅನುಮಾನವೆ ಇಲ್ಲ. ಅಂದರೆ ಸರ್ಕಾರ 3 ಜನ ಸತ್ತರೆ ಒಬ್ಬರು ಸತ್ತಿದ್ದಾರೆ ಎಂದು ಹೇಳುತ್ತಿದೆ ಎಂದು ಅನುಮಾನವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಶಹಭಾಸ್‍ಗಿರಿಗಾಗಿ ಸರಕಾರದಿಂದ ಅಮಾನವೀಯ ಕೃತ್ಯ

ಸರ್ಕಾರದ ದಾಖಲೆಗಳ ಪ್ರಕಾರ 10 ವರ್ಷದೊಳಗಿನ 20,256 ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಈಗಾಗಲೇ ಕೊರೋನಾ ಸೋಂಕಿತರಾಗಿದ್ದಾರೆ. ಈ ಎರಡೂ ಗುಂಪಿನಿಂದ 61 ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.  ರಾಷ್ಟ್ರ ಮಟ್ಟದಲ್ಲಿ ಶಹಭಾಸ್‍ಗಿರಿ ಪಡೆಯಲು ಸರ್ಕಾರ ಇಂತಹ ಅಮಾನವೀಯ ಕೃತ್ಯಕ್ಕೆ ಇಳಿದಿರುವುದು ಕ್ಷಮಿಸಲಾಗದ ಕ್ರಿಮಿನಲ್ ಸಂಗತಿಯಾಗುತ್ತದೆ. ಈ ವಿಚಾರಗಳು ನಿಮ್ಮ ಗಮನಕ್ಕೆ ಮತ್ತು ಮಕ್ಕಳ ಆಯೋಗದ ಗಮನಕ್ಕೆ ಬಂದಿವೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಗೆ ಪತ್ರದ ಮೂಲಕ ತಿಳಿಸಿದ್ದಾರೆ.

key words : Govt-Corona-management-figures-twists-turns-back-Former CM Siddaramaiah