ಈ ವರ್ಷದಿಂದ್ಲೇ ಶುರು ಸರ್ಕಾರಿ ನರ್ಸರಿ ಶಾಲೆ: ಆಂಗ್ಲ ಮಾಧ್ಯಮ ಸಂಸ್ಥೆಗಳಿಗೆ ಸೆಡ್ಡು

ಬೆಂಗಳೂರು:ಮೇ-18: ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ಈ ವರ್ಷವೇ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್​ಕೆಜಿ) ತರಗತಿಗಳನ್ನು ತೆರೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಲೆ ಆರಂಭಕ್ಕೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದ್ದು, ಈ ಸಂಬಂಧ ಶಿಕ್ಷಣ ಇಲಾಖೆ ಕೆಲವು ಷರತ್ತು ವಿಧಿಸಿದೆ.

ಸದ್ಯ ರಾಜ್ಯದಲ್ಲಿ 176 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, 2019-20ನೇ ಸಾಲಿನಿಂದ ಹೆಚ್ಚುವರಿ 100 ಶಾಲೆ ಆರಂಭಿಸಲಾಗುತ್ತಿದೆ. ಒಟ್ಟಾರೆ 276 ಶಾಲೆಗಳಲ್ಲಿ ಎಲ್​ಕೆಜಿ ತರಗತಿ ಆರಂಭವಾಗಲಿದೆ. ಸಮಗ್ರ ಶಿಕ್ಷಣ ಕರ್ನಾಟಕ ನಿಗದಿ ಪಡಿಸಿರುವ ಮಾನದಂಡಗಳ ಅನುಗುಣವಾಗಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕರನ್ನು ತಾತ್ಕಾಲಿಕವಾಗಿ 10 ತಿಂಗಳ ಅವಧಿಗೆ ನೇಮಿಸಿಕೊಳ್ಳಲಾಗಿದೆ. ಈ ಅತಿಥಿ ಶಿಕ್ಷಕರಿಗೆ ಮಾಸಿಕ 7,500 ಮತ್ತು ಆಯಾ ಕೆಲಸದವರಿಗೆ 5,000 ರೂ. ಸಂಭಾವನೆ ನಿಗದಿ ಪಡಿಸಿದೆ. ಇದಕ್ಕೆ ತಗಲುವ ವೆಚ್ಚವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್​ಡಿಎಂಸಿಗೆ ಬಿಡುಗಡೆ ಮಾಡಲಿದೆ.

ಮಕ್ಕಳಿಗೆ ಆಹಾರ: ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಅಂಗನವಾಡಿಗಳಂತೆಯೇ ಹಾಲು, ಉಪಾಹಾರ, ಊಟ ಮೊದಲಾದ ಆಹಾರ ಸಾಮಗ್ರಿಗಳ ಪೂರೈಕೆ ಜವಾಬ್ದಾರಿಯನ್ನು ಮಧ್ಯಾಹ್ನದ ಉಪಾಹಾರ ಯೋಜನೆಗೆ ವಹಿಸಿದೆ. ಮಕ್ಕಳಿಗೆ ವಯಸ್ಸಿನ ಅನುಗುಣವಾಗಿ ಚುಚ್ಚು ಮದ್ದು ನೀಡುವ ಜವಾಬ್ದಾರಿಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಹೊರಬೇಕಿದೆ. ಶಾಲಾ ನಿರ್ವಣಕ್ಕೆ ಅವಶ್ಯವಾದ ಅನುದಾನವನ್ನು ಕಟ್ಟಡ ನಿರ್ವಣಕ್ಕೆ ಪ್ರತ್ಯೇಕವಾಗಿಟ್ಟಿರುವ ಹಣವನ್ನು ಬಳಕೆ ಮಾಡಿಕೊಳ್ಳಬೇಕಿದೆ.

ಪಠ್ಯಕ್ರಮ: ಯುನಿಸೆಫ್ ಅಜೀಂ ಪ್ರೇಮ್ ವಿಶ್ವವಿದ್ಯಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ರಚಿಸಲಾಗಿದ್ದ ಸಮಿತಿ ಶಿಫಾರಸಿನ ಪ್ರಕಾರ ತರಗತಿಗೆ ಬೇಕಾದ ಪಠ್ಯಕ್ರಮ, ಬೋಧನೋಪಕರಣಗಳು ಮುಂತಾದವುಗಳನ್ನು ತಯಾರಿಸಿ ಶಿಕ್ಷಕರಿಗೆ ತರಬೇತಿ ನೀಡಬೇಕಿದೆ.

ಬಡವರಿಗೆ ಅನುಕೂಲ: ಪೂರ್ವ ಪ್ರಾಥಮಿಕ ಶಾಲೆಗಳ ಪ್ರವೇಶಕ್ಕೆ ಸದ್ಯ ಸಾಮಾನ್ಯ ಖಾಸಗಿ ಶಾಲೆಗಳು 30 ಸಾವಿರ ರೂ.ಗಳಿದ 50 ಸಾವಿರ ರೂ. ಹಾಗೂ ಪ್ರತಿಷ್ಠಿತ ಶಾಲೆಗಳು 1 ಲಕ್ಷ ರೂ.ನಿಂದ 3 ಲಕ್ಷ ರೂ.ವಸೂಲಿ ಮಾಡುತ್ತವೆ. ಕೆಲವೊಂದು ಶಾಲೆಗಳಲ್ಲಿ ಹಣ ನೀಡಿದರೂ ಸೀಟು ದೊರೆಯದಂತಾಗಿದೆ. ಸರ್ಕಾರದ ಕ್ರಮದಿಂದ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಅನುಕೂಲವಾಗಲಿದೆ.

ಗುಣಮಟ್ಟತೆ ಆದ್ಯತೆ: ರಾಜ್ಯ ಸರ್ಕಾರ ಕಳೆದ ವರ್ಷವೇ 176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದೆ. ಆದರೆ, ಇದು ಹೆಚ್ಚಿನ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸರ್ಕಾರ ಮತ್ತೆ ತೆರೆಯಲು ಹೊರಟಿರುವ 100 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ ಗುಣಮಟ್ಟ ಶಿಕ್ಷಣ ನೀಡಬೇಕಿದೆ.

ಸರ್ಕಾರಿ ಶಾಲೆಗಳತ್ತ ಪಾಲಕರು: ಬಡ, ಮಧ್ಯಮ ವರ್ಗದವರು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಇಲ್ಲ ಎಂಬ ಕಾರಣಕ್ಕಾಗಿಯೇ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇನ್ನು ಮುಂದೆ ಶೇ.50ಕ್ಕೂ ಹೆಚ್ಚಿನ ಬಡ ಮತ್ತು ಮಧ್ಯಮ ವರ್ಗದವರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಇದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.

ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಎಸ್​ಡಿಎಂಸಿ ಸದಸ್ಯರೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಿದ್ದಾರೆ. ಇದೀಗ ಸರ್ಕಾರವೇ ನೇರವಾಗಿ ಶಾಲೆ ಆರಂಭಿಸಲು ಮುಂದಾಗಿರುವುದು ಖುಷಿಯ ವಿಚಾರ.

| ಎಂ.ವಿ.ನಾರಾಯಣ ಸ್ವಾಮಿ ಅಧ್ಯಕ್ಷರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ವಿಭಿನ್ನ ಸಮವಸ್ತ್ರ ರೂಪಿಸಲು ಚಿಂತನೆ

ಸದ್ಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಲಿ ಬಣ್ಣದ ಸಮವಸ್ತ್ರ ನೀಡುತ್ತಿದ್ದು, ಹೆಣ್ಣುಮಕ್ಕಳಿಗೆ ಚೂಡಿದಾರ್ ನೀಡಿದೆ. ಆದರೆ, ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಗೆ ವಿಭಿನ್ನವಾದ ಸಮವಸ್ತ್ರ ರೂಪಿಸಲು ಶಿಕ್ಷಣ ಇಲಾಖೆ ಆಲೋಚಿಸಿದೆ. ಕಾರಣ, ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುವರೆಗೂ ಒಂದೇ ಆವರಣದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ವಿಭಿನ್ನ ಬಣ್ಣ ಮತ್ತು ವಿನ್ಯಾಸದ ಸಮವಸ್ತ್ರ ನೀಡಲು ಶಿಕ್ಷಣ ಇಲಾಖೆ ಚಿಂತಿಸಿದೆ.
ಕೃಪೆ:ವಿಜಯವಾಣಿ

ಈ ವರ್ಷದಿಂದ್ಲೇ ಶುರು ಸರ್ಕಾರಿ ನರ್ಸರಿ ಶಾಲೆ: ಆಂಗ್ಲ ಮಾಧ್ಯಮ ಸಂಸ್ಥೆಗಳಿಗೆ ಸೆಡ್ಡು
govt-nursery-school-education-dept-student-govt-school-english-medium-state-govt