ರೈತರ ಹಿತ ಕಾಯಲು ಸರ್ಕಾರ ಬದ್ಧ: ಭತ್ತ – ರಾಗಿಗೆ ಬೆಂಬಲ ಬೆಲೆ ಅಡಿ ಶೀಘ್ರ ಖರೀದಿ ಕೇಂದ್ರ- ಸಚಿವ ಎಸ್. ಟಿ. ಸೋಮಶೇಖರ್

ಚನ್ನರಾಯಪಟ್ಟಣ,ನವೆಂಬರ್,28,2020(www.justkannada.in) :  ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲು ಸರ್ಕಾರ ಶೀಘ್ರದಲ್ಲೇ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಹೇಳಿದರು.I didn't knew CM BSY will think so cheaply - KPCC President D.K. Shivakumar

ಚನ್ನರಾಯಪಟ್ಟಣದಲ್ಲಿ ಗ್ರಾಮಸ್ವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಈ ಮೂಲಕ ರೈತರ ಹಿತ ಕಾಯಲು ಸರ್ಕಾರ ಸದಾ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ರೈತರು ಚಿಂತೆ ಪಡಬೇಕಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ರೈತರ ಪರವಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸಹ ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಿದ ಸರ್ಕಾರ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತಗೊಳಿಸಲಾಗಿದೆ. 162 ಎಪಿಎಂಸಿಗಳಲ್ಲೂ ಸಹ ಈಗ ರೈತರು ಮುಕ್ತವಾಗಿ ತಮ್ಮ ಬೆಳೆಯನ್ನು ಎಲ್ಲಿ ಬೇಕಿದ್ದರೂ, ಯಾವುದೇ ಅಡೆತಡೆಗಳಿಲ್ಲದೆ  ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದು ರೈತರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸೆಸ್ ಅನ್ನು ಸಹ ಸರ್ಕಾರ ಕಡಿಮೆಗೊಳಿಸಿದ್ದು, ಕೇವಲ 35 ಪೈಸೆಗೆ ಇಳಿಸಿದೆ. ರೈತರಿಗೆ ಕಿರಿಕಿರಿಯಾಗುತ್ತಿದ್ದ 79 ಎ, ಬಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನಮ್ಮ ಸರ್ಕಾರದಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಚಿವರು ತಿಳಿಸಿದರು.

ಆರ್ಥಿಕ ಸ್ಪಂದನದ ಮೂಲಕ ಸ್ವಾವಲಂಬನೆ

ಆರ್ಥಿಕ ಸ್ಪಂದನ ಯೋಜನೆ ಮೂಲಕ ರೈತರಿಗೆ 39300 ಕೋಟಿ ರೂಪಾಯಿಗಳ ಸಾಲ ನೀಡಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮುಂದಾಗಲಾಗಿದೆ. 4 ವಿಭಾಗಗಳಲ್ಲಿ ಈ ಯೋಜನೆ ಜಾರಿಗೆ ತರುತ್ತಿದ್ದು ಬೆಂಗಳೂರು ಮೈಸೂರು ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಯೋಜನೆಗೆ ಚಾಲನೆ ನೀಡಲಾಗಿದೆ. ರೈತರು ಸಹ ಉತ್ತಮವಾಗಿ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.Government- Paddy - Support price – millet-Minister-ST. Somashekhar

ಆತ್ಮನಿರ್ಭರದಡಿ ಹೆಚ್ಚುವರಿ 600 ಕೋಟಿ ರೂ.ಗಾಗಿ ಕೇಂದ್ರಕ್ಕೆ ಪ್ರಾಸ್ತಾವನೆ…

ಇನ್ನು ಆತ್ಮನಿರ್ಭರ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಪಾಲು 4750 ಕೋಟಿ ರೂಪಾಯಿ ಇದ್ದು, ಸಹಕಾರ ಇಲಾಖೆ ಮೂಲಕ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 600 ಕೋಟಿ ರುಪಾಯಿಗಳ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಗ್ರಾ.ಪಂ. ಚುನಾವಣೆಯಲ್ಲಿ ಕೇಸರಿ ಪತಾಕೆ ಹಾರಲಿ

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕು. ಈ ಗ್ರಾಮ ಪಂಚಾಯಿತಿ ಚುನಾವಣೆಯು ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರಿದ್ದರೆ ಒಬ್ಬ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಗುತ್ತದೆ. ಹಾಗಾಗಿ ಕಾರ್ಯಕರ್ತರು ಗೆಲುವಿಗೆ ನಾವು ನಾಯಕರು ಸಹ ಶ್ರಮವಹಿಸುತ್ತೇವೆ. ಇನ್ನು ಕಾರ್ಯಕರ್ತರು ಈ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಹ ಬಿಜೆಪಿಯ ಕೇಸರಿ ಪತಾಕೆ ಹಾರುವಂತೆ ಮಾಡಬೇಕು ಎಂದು ಕರೆ ನೀಡಿದರು.

ನಿಂಬೆಹಣ್ಣಿನ ಪ್ರಭಾವ ತಗ್ಗಿಸಲಿರುವ ಶಾಸಕರಾದ ಪ್ರೀತಂಗೌಡ…

ಹಾಸನ ಜಿಲ್ಲೆಯಲ್ಲಿ ನಿಂಬೆಹಣ್ಣಿನ ಪ್ರಭಾವವನ್ನು ತಗ್ಗಿಸಲು ಶಾಸಕರಾದ ಪ್ರೀತಂ ಗೌಡ ಅವರು ಸಮರ್ಥರಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಚಿವರಾದ ಸೋಮಶೇಖರ್ ಈ ಸಂದರ್ಭದಲ್ಲಿ ಹೇಳಿದರು.

ಹಾಸನ ಜಿಲ್ಲೆಯ ಡಿಸಿಸಿ ಬ್ಯಾಂಕ್ ವತಿಯಿಂದ 119814 ರೈತರಿಗೆ 541.82 ಕೋಟಿ ರೂಪಾಯಿ ಸಾಲಮನ್ನಾವಾಗಬೇಕಿದ್ದು, ಈವರೆಗೆ 514.88 ಕೋಟಿ ರೂಪಾಯಿವರೆಗೆ ಸಾಲಮನ್ನಾ ಆಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು.

ಹಾಸನ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 1,28,443 ರೈತರಿಗೆ 646.68 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಲಾಗಿದೆ. ಈ ಮೂಲಕ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಆಹಾರ ಇಲಾಖೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ, ಪೌರಾಡಳಿತ ಸಚಿವರಾದ ಕೆ. ಸಿ. ನಾರಾಯಣಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಎ. ಮಂಜು, ಶಾಸಕರಾದ ಪ್ರೀತಂ ಗೌಡ ಸೇರಿದಂತೆ ಬಿಜೆಪಿ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Key words: Government- Paddy – Support price – millet-Minister-ST. Somashekhar