ಪ್ರಾಧಿಕಾರದ ಆದೇಶಕ್ಕೆ ಮಣಿದ ಸರ್ಕಾರ: ಮತ್ತೆ ತಮಿಳುನಾಡಿಗೆ ಹರಿದ ಕಾವೇರಿ ನೀರು.

ಮಂಡ್ಯ, ಆಗಸ್ಟ್,30,2023(www.justkannada.in):  ಸರಿಯಾಗಿ ಮಳೆಯಾಗದೇ ಕೆಆರ್ ಎಸ್ ಜಲಾಶಯ ಭರ್ತಿಯಾಗದೆ ಇಲ್ಲಿನ ರೈತರು ಸಂಕಷ್ಟದಲ್ಲಿದ್ದರೂ ಸಹ  ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ಹಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಣಿದಿದೆ.

ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.  ರಾಜ್ಯದ 130 ತಾಲೂಕುಗಳಲ್ಲಿ ಬರಗಾಲ ಬಿದ್ದಿದ್ದು, ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ.  ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಆದರೂ ಕೂಡ  ಕಾವೇರಿ ‌ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದಿರುವ  ರಾಜ್ಯ ಸರ್ಕಾರ ರಾತ್ರಿಯಿಂದಲೇ ಕೆಆರ್​​ಎಸ್ ಜಲಾಶಯದಿಂದ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆ (ಆ.29) ರಂದು ಕೆಆರ್​ಎಸ್​ ಜಲಾಯಶದಿಂದ ಎರಡು ಸಾವಿರ ಕ್ಯೂಸೆಕ್​ ನೀರನ್ನು ನದಿಗೆ ಬಿಡಲಾಗುತ್ತು. ಸಾಯಂಕಾಲದ ಹೊತ್ತಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿನಿತ್ಯ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್​ ನೀರು ಹರಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ರಾತ್ರಿ ಜಲಾಶಯದಿಂದ‌ ಕಾವೇರಿ ನದಿಗೆ 4,448 ಕ್ಯೂಸೆಕ್​ ನೀರು ಬಿಡುಗಡೆ ಮಾಡಿದೆ. 15 ದಿನಗಳ ಕಾಲ ನೀರು ಹೀಗೆ ಹರಿಸಿದರೆ ಡ್ಯಾಮ್ ಸಂಪೂರ್ಣ ಬರಿದಾಗುವ ಸಾಧ್ಯತೆ ಇದ್ದು ಮುಂದೇ ಮಂಡ್ಯ ಮೈಸೂರು ಭಾಗದಲ್ಲಿ ಕುಡಿಯಲು ನೀರಿಲ್ಲದೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ಇನ್ನು ರಾತ್ರೋರಾತ್ರಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಂಡ್ಯ ರೈತರು ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.

Key words: government-obeyed -order – authority-Cauvery water- – Tamil Nadu.