ರಾಜ್ಯದ ಬರಹಗಾರರು, ಚಿಂತಕರಿಗೆ ಬೆದರಿಕೆ ಕರೆ ಬಗ್ಗೆ ಸರ್ಕಾರದಿಂದ ನಿರ್ಲಕ್ಷ ಬೇಡ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಜುಲೈ,12,2022(www.justkannada.in): ರಾಜ್ಯದ ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷಗಳ ಮುಖಂಡರುಗಳಿಗೆ ಬರುತ್ತಿರುವ ಜೀವ ಬೆದರಿಕೆ ಕರೆ ಹಾಗೂ ಪತ್ರಗಳನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಕುರಿತು  ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ‍್ಧರಾಮಯ್ಯ, ರಾಜ್ಯದ ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಪದೆ ಪದೆ ಜೀವ ಬೆದರಿಕೆಯ ಪತ್ರಗಳನ್ನು ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಪೋಸ್ಟ್ ಮಾಡಲಾಗುತ್ತಿದೆ. ಕುಂ ವೀರಭದ್ರಪ್ಪನವರಿಗೆ 6 ಪತ್ರ, ಬಂಜಗೆರೆ ಜಯಪ್ರಕಾಶ್ ಅವರಿಗೆ 5 ಪತ್ರ, ಬಿ.ಟಿ.ಲಲಿತಾ ನಾಯಕ್, ಬಿ.ಎಲ್ ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ 2 ಪತ್ರ, ಎಸ್.ಜಿ ಸಿದ್ಧರಾಮಯ್ಯ ಮತ್ತು ವಸುಂಧರ ಭೂಪತಿಯವರುಗಳಿಗೆ ಒಂದೊಂದು  ಪತ್ರಗಳನ್ನು ಬರೆಯಲಾಗಿದೆ.

ಇವರುಗಳೆಲ್ಲ ಪ್ರಜಾತಾಂತ್ರಿಕ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ ಹಾಗಾಗಿ ಹಲವು ಬಾರಿ ಆಡಳಿತಾರೂಢ ಸರ್ಕಾರದ ವಿರುದ್ಧ ಮಾತನಾಡಲೇಬೇಕಾಗುತ್ತದೆ. ಇದಿಷ್ಟನ್ನೂ ಸಹಿಸದ ಕಿಡಿಗೇಡಿಗಳು ಜೀವ ಬೆದರಿಕೆಗಳನ್ನು ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅನೇಕ ಸಾರಿ ನನ್ನ ಸೋಷಿಯಲ್ ಮೀಡಿಯಾ ಖಾತೆಗಳಿಗೂ ಬಂದು ಹೀನಮನೋವೃತ್ತಿ ತೋರುವವರೂ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನನಗೂ ಹಲವು ಬೆದರಿಕೆ ಪತ್ರಗಳು ಬಂದಿವೆ. ಸ್ವತಃ ಡಿಜಿಯವರಿಗೆ ನಾನು ಈ ಕುರಿತು ಮಾತನಾಡಿದ್ದೆ. ಇತ್ತೀಚೆಗೆ ಟಿವಿಯೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ನನಗೆ ಗುಂಡು ಹಾರಿಸಬೇಕೆಂದು ಹೇಳಿಕೆ ಕೊಟ್ಟಿದ್ದ. ಈ ಬೆದರಿಕೆಯ ಹೇಳಿಕೆ ಹಾಗೂ ಪತ್ರಗಳ  ಕುರಿತು ದೂರು ದಾಖಲಿಸಲಾಗಿದೆ.  ಆದರೂ ಇದುವರೆಗೆ ಸರ್ಕಾರ ಎಫ್‍ ಐಆರ್ ದಾಖಲಿಸಿಲ್ಲ. ಇದೇ ವಿಷಯಕ್ಕೆ ಹಲವು ಬಾರಿ ದೂರು ದಾಖಲಿಸಿದರೂ ಎಫ್‍ಐ ಆರ್ ಮಾಡಿ ತನಿಖೆ ನಡೆಸದಿರುವುದು ಸರ್ಕಾರದ ಬೇಜವಾಬ್ಧಾರಿಯುತವಾದ ನಡವಳಿಕೆ ಎಂದು ಕಿಡಿಕಾರಿದರು.

ನಾಡಿನ ಬರಹಗಾರಗಾರರು, ಚಿಂತಕರುಗಳಿಗೆ ಬಹಿರಂಗವಾಗಿ ಜೀವ ಬೆದರಿಕೆ ಪತ್ರಗಳನ್ನು ಬರೆದರೂ ಸರ್ಕಾರ ಸುಮ್ಮನಿದೆಯೆಂದರೆ ಭಿನ್ನ ಮತ ಮತ್ತು ಭಿನ್ನ ಧ್ವನಿಗಳನ್ನು ದಮನಿಸಲು ಪ್ರಯತ್ನಿಸಲಾಗುತ್ತಿದೆ ಅಥವಾ ಪೊಲೀಸ್ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದರ್ಥ. ಅತ್ಯಂತ ಆಧುನಿಕ ವ್ಯವಸ್ಥೆ ಇದ್ದರೂ ದುರುಳರನ್ನು ಪತ್ತೆ ಹಚ್ಚದೆ ಸರ್ಕಾರ ನಿಷ್ಕ್ರಿಯವಾಗಿದೆ.

ಈಗಾಗಲೆ ನಾಡಿನ ಪ್ರಖ್ಯಾತ ಚಿಂತಕರು ಹಾಗೂ ಬಸವ ತತ್ವದ ಅನುಯಾಯಿಗಳಾಗಿದ್ದ ಡಾ.ಎಂ.ಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಇದೇ ಗೋಡ್ಸೆ ಸಂತತಿಯವರು ಹಾಗೂ ಮನು ಸಂಸ್ಕೃತಿಯ ಪ್ರತಿಪಾದಕರುಗಳು ಗುಂಡಿಟ್ಟು ಕೊಂದರು. ಕೊಲೆಗಾರರಲ್ಲಿ ಬಹುತೇಕರು ಬಿಜೆಪಿಯನ್ನು ಬೆಂಬಲಿಸುವ ಸನಾತನ ಸಂಸ್ಕೃತಿಯೆಂಬ ಸಂಘಟನೆಯ ಸದಸ್ಯರುಗಳಾಗಿದ್ದಾರೆಂಬ ಮಾಹಿತಿ ಇದೆ. ಈಗಷ್ಟೆ ಆ ಇಬ್ಬರು ಹುತಾತ್ಮ ಚಿಂತಕರ ವಿಚಾರಣೆ ಪ್ರಾರಂಭವಾಗಿದೆ. ಈ ಪ್ರಕರಣಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಸರ್ವಜನಾಂಗದ ಶಾಂತಿಯ ತೋಟ ಎಂದು ಹೆಸರಾದ ಕನ್ನಡ ನಾಡಿನಲ್ಲಿ ಸಮರ್ಥವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಬೇಕಾದ ತುರ್ತು ಅಗತ್ಯವಿದೆ. ಯಾಕೆಂದರೆ ನಾಡಿನಲ್ಲಿ ಪದೇ ಪದೇ ಕಾನೂನು ಸುವ್ಯವಸ್ಥೆ ಕುಸಿದು ಬೀಳುತ್ತಿದೆ. ಆದ್ದರಿಂದ  ಸರ್ಕಾರ ಕ್ರಿಯಾಶೀಲವಾಗಬೇಕು. ಬೆದರಿಕೆ ಪತ್ರಗಳನ್ನು ಬರೆಯುತ್ತಿರುವ ದುರುಳರನ್ನು ಕೂಡಲೆ ಪತ್ತೆ ಹಚ್ಚಿ ಕೂಡಲೆ ಶಿಕ್ಷೆ ವಿಧಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಬೇಕೆಂದು  ಸರ್ಕಾರಕ್ಕೆ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Key words: government – not -ignore -threats – writers-thinkers-Former CM-Siddaramaiah.