ಸರ್ಕಾರ ಯಾವುದೇ ಜನಪ್ರಿಯ ಯೋಜನೆ ರದ್ಧು ಮಾಡಲ್ಲ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…

ನವದೆಹಲಿ,ಆ,17,2019(www.justkannada.in): ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕತ್ತರಿ ಹಾಕಿ ಆ ಹಣವನ್ನ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಸಿದ್ದ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು  ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಹೀಗಾಗಿ ಕೈ ನಾಯಕರ ಏಟಿಗೆ ಬೆದರಿದ ಸಿಎಂ ಬಿಎಸ್ ಯಡಿಯೂರಪ್ಪ ಜನಪ್ರಿಯ ಯೋಜನೆಗಳನ್ನ ರದ್ಧು ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಸರ್ಕಾರ ಯಾವುದೇ ಜನಪ್ರಿಯ ಯೋಜನೆ ರದ್ದು ಮಾಡಲ್ಲ. ಜನಪ್ರಿಯ ಯೋಜನೆಗಳನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ನಮ್ಮ ಸರ್ಕಾರ ಜನಪರ ಸರ್ಕಾರ. ಅನ್ನಭಾಗ್ಯ ಯೋಜನೆ ಮುಂದುವರಿಸಲು ಅನುದಾನ ಬಿಡುಗಡೆಯ ಕಡತಕ್ಕೆ ಈಗಾಗಲೇ ಸಹಿ ಮಾಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಕಿಸಾನ ಸನ್ಮಾನ್ ಯೋಜನೆಗೆ ಹಣ ಹೊಂದಿಸಲು ಹಿಂದಿನ‌ ಸರ್ಕಾರದ ಕೆಲ ಯೋಜನೆಗಳನ್ನ ‌ ರದ್ದು ಮಾಡುವ ಸುದ್ದಿ ಹಬ್ಬಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ವಿರುದ್ದ ಕಿಡಿಕಾರಿದ್ದರು.ಇದೀಗ ಅಧಿಕೃತವಾಗಿ ಸಿಎಂ ಬಿಎಸ್ ವೈ ಸ್ಪಷ್ಟನೆ ನೀಡಿದ್ದಾರೆ.

Key words:  government -not canceled -any popular –project-CM BS Yeddyurappa -clarified.