ತಾತ್ಕಾಲಿಕ,ಗುತ್ತಿಗೆ, ಹೊರಗುತ್ತಿಗೆ ನೌಕರರನ್ನ ಕೂಡಲೇ ಬಿಡುಗಡೆ ಮಾಡುವಂತೆ ವಿವಿಗಳಿಗೆ ಸರ್ಕಾರ ಸೂಚನೆ.

ಬೆಂಗಳೂರು,ಸೆಪ್ಟಂಬರ್,3,2021(www.justkannada.in): ಸರ್ಕಾರದ ಪೂರ್ವಾನುಮೋದನೆ ಪಡೆಯದೆ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿ ಮಾಡಿಕೊಂಡಿರುವ ತಾತ್ಕಾಲಿಕ,ಗುತ್ತಿಗೆ, ಹೊರಗುತ್ತಿಗೆ ನೌಕರರನ್ನ ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯದ  ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈ ಕುರಿತು 2-9-2021 ರಂದು ಆದೇಶ ಹೊರಡಿಸಿರುವ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಅವರು, ವಿಶ್ವ ವಿದ್ಯಾನಿಲಯಗಳು ತಮ್ಮ ಹಂತದಲ್ಲಿಯೇ ಹುದ್ದೆಗಳನ್ನು ಸೃಜಿಸಿ ತಾತ್ಕಾಲಿಕ, ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಲ್ಲಿ ಅಂತಹ ಯಾವುದೇ ನೇಮಕಾತಿಗೆ ಸರ್ಕಾರದಿಂದ ಸಹಾಯಾನುದಾನ ಒದಗಿಸುವುದಿಲ್ಲವೆಂದು ತಿಳಿಸಲಾಗಿದೆ.

ಈ ಮಧ್ಯೆ ವಿವಿಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಿಕೊಂಡಿರುವ ಸಿಬ್ಬಂದಿಗಳನ್ನ ಬಿಡುಗಡೆ ಮಾಡುವಂತೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರೂ ವಿಶ್ವ ವಿದ್ಯಾನಿಲಯಗಳು ಸರ್ಕಾರದ ಸೂಚನೆಯನ್ನ ಪಾಲಿಸದೆ ಇರುವುದು ಸರ್ಕಾರದ ನೀತಿಗೆ ವಿರುದ್ಧ ಮತ್ತು ನಿಯಮ ಬಾಹಿರವಾಗಿದೆ.

ತಾತ್ಕಾಲಿಕ ಗುತ್ತಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ವೇತನ, ಖಾಯಂಮಾತಿ ಹಾಗೂ ಇತರ ಸೌಲಭ್ಯಗಳಿಗಾಗಿ ಪದೇ ಪದೇ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ದಾಖಲಿಸಿ ಸರ್ಕಾರದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ.

ಹೀಗಾಗಿ ಸರ್ಕಾರದ ಪ್ರಸಕ್ತ ನೇಮಕಾತಿ ಹಾಗೂ ಮೀಸಲಾತಿ ಕಾರ್ಯನೀತಿ ನಿಯಮಗಳನ್ನು ಪಾಲಿಸದೆ ನಿಯಮ ಬಾಹಿರವಾಗಿ ಅರ್ಹತೆ ಮಾನದಂಡವನ್ನ ಮೀರಿ ಸರ್ಕಾರದ ಪೂರ್ವಾನುಮೋದನೆಯನ್ನ ಪಡೆಯದೆ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ನೇಮಕವಾಗಿದ್ದ, 28 ಜನ  ಸಿಬ್ಬಂದಿಗಳನ್ನು ಹೈಕೋರ್ಟ್ ಆದೇಶದನ್ವಯ ಪರಿಶೀಲಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.covid-dead-body-cancels-license-order-state-government

ಅದ್ದರಿಂದ  ವಿಶ್ವ ವಿದ್ಯಾನಿಲಯಗಳಲ್ಲಿ ಸರ್ಕಾರದ ಪೂರ್ವಾನುಮೋದನೆ ಪಡೆಯದೆ ಹಾಗೂ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತಾತ್ಕಾಲಿಕ, ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಂಡಿರುವ ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಈ ಕೂಡಲೇ ವಿಶ್ವವಿದ್ಯಾನಿಲಯದ ಸೇವೆಯಿಂದ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದ್ದಾರೆ. ಹಾಗೆಯೇ ಆದೇಶ ಪಾಲಿಸದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words:  government- instructs –university-  release – temporary-contracted – employees