ಮೈಸೂರಿನ ಮ್ಯಾನ್‌ಹೋಲ್‌ನಲ್ಲಿ ಗೋಲ್ಡ್ ಮೈನಿಂಗ್ !?

*ಬಡವರ ಹೊಟ್ಟೆ ತುಂಬಿಸುತ್ತಿವೆಯೇ ನಗರದ ಯುಜಿಡಿ * ನಗರ ಪಾಲಿಕೆಯಿಂದ ದೂರು ದಾಖಲು

ಮೈಸೂರು, ಜುಲೈ 22, 2019 (www.justkannada.in):
ದೇಶದ ಸ್ವಚ್ಛ ನಗರಿಗಳ ಪೈಕಿ ಒಂದಾಗಿರುವ ಸಾಂಸ್ಕೃತಿಕ ನಗರಿಯ ಮ್ಯಾನ್‌ಹೋಲ್‌ಗಳು ಬಡವರ ಹೊಟ್ಟೆ ತುಂಬಿಸುವ ಮಾರ್ಗವಾ ಗಿದೆಯೇ? ಮ್ಯಾನ್‌ಹೋಲ್‌ನಲ್ಲಿ ಚಿನ್ನಾಭರಣ ದೊರೆಯುತ್ತದೆ ಎಂಬ ಆಸೆಗೆ ಬಡವರು ತಮ್ಮ ಜೀವದ ಹಂಗು ತೊರೆದು ಮ್ಯಾನ್‌ಹೋಲ್‌ನಲ್ಲಿ ತಡಕಾಡುತ್ತಿದ್ದಾರೆಯೇ?
ನಗರ ಪಾಲಿಕೆಯ ಆಯುಕ್ತರು ಕೃಷ್ಣರಾಜ ಪೊಲೀಸ್ ಠಾಣೆಗೆ ಭಾನುವಾರ ನೀಡಿರುವ ದೂರು ಇಂಥದೊಂದು ಅನುಮಾನ ಹುಟ್ಟು ಹಾಕಿದೆ. ನಗರದ ಬಸವೇಶ್ವರ ರಸ್ತೆಯ 15ನೇ ಕ್ರಾಸ್‌ನಲ್ಲಿ (ರಾಮಾನುಜ ರಸ್ತೆಗೆ ಹೊಂದಿಕೊಂಡಂತೆ) ಮೂವರು ವ್ಯಕ್ತಿಗಳು ಮ್ಯಾನ್ ಹೋಲ್‌ಗೆ ಇಳಿದು ಯುಜಿಡಿ ಮಾರ್ಗದಲ್ಲಿ ಸಂಗ್ರಹವಾಗಿದ್ದ ಕಲ್ಮಶದ ತ್ಯಾಜ್ಯವನ್ನು ಹೊರ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ನಗರದ ಕಾನೂನು ವಿದ್ಯಾರ್ಥಿ ಎನ್. ಪುನೀತ್ ಅವರನ್ನು ವಿಚಾರಿಸಿ ಯಾರು ನೀವು ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ಅವರು ಉತ್ತರಿಸಲು ತಡಬಡಿಸಿದ್ದಾರೆ.

ಈ ವಿಚಾರ ಮಾಧ್ಯಮಗಳ ಮೂಲಕ ನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆಯೇ ಪಾಲಿಕೆ ಯುಜಿಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜೆ. ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವೇಶ್ವರ ರಸ್ತೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಪೌರ ಕಾರ್ಮಿಕರು ಹಾಗೂ ಗುತ್ತಿಗೆ ಪೌರ ಕಾರ್ಮಿಕರನ್ನು ವಿಚಾರಿಸಿದಾಗ ಯಾರು ಕೂಡ ಭಾನುವಾರ ಬಸವೇಶ್ವರ 15ನೇ ಕ್ರಾಸ್‌ನಲ್ಲಿ ಮ್ಯಾನ್‌ಹೋಲ್ ಶುಚಿಗೊಳಿಸದೆ ಇರುವ ವಿಚಾರ ತಿಳಿದು ಬಂದಿದೆ.
ಇದಾದ ನಂತರ ಪಾಲಿಕೆ ಆಯುಕ್ತರು ನಗರದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮ್ಯಾನ್‌ಹೋಲ್‌ನಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಚಿನ್ನ, ಬೆಳ್ಳಿ, ಹಣಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ಸಾರ್ವಜನಿಕರು ತಿಳಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಹೇಳಿಕೆಯ ಆಧಾರದ ಮೇಲೆ ದೂರು ನೀಡಿದ್ದಾರೆ.

‘ಒಂದುವೇಳೆ ಪಾಲಿಕೆ ಆಯುಕ್ತರು ನೀಡಿರುವ ದೂರಿನಲ್ಲಿ ಸತ್ಯಾಂಶ ಇದ್ದರೆ ಅದು ದೇಶವೇ ತಲೆತಗ್ಗಿಸುವ ವಿಚಾರ. ಸ್ವಾತಂತ್ರೃ ಬಂದು ಏಳು ದಶಕಗಳು ಕಳೆದರೂ ಇಂದಿಗೂ ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಮ್ಯಾನ್‌ಹೋಲ್‌ನಲ್ಲಿ ತಡಕಾಡುವ ಸ್ಥಿತಿ ಇರುವುದು ಅತ್ಯಂತ ಶೋಚನೀಯ ಸ್ಥಿತಿ. ಈ ಶೋಚನೀಯ ಸ್ಥಿತಿಗೆ ಮುಕ್ತಿ ದೊರಕಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇನೆ’ ಅನ್ನುತ್ತಾರೆ ಕಾನೂನು ವಿದ್ಯಾರ್ಥಿ ಪುನೀತ್.ಮ್ಯಾನ್‌ಹೋಲ್‌ನಲ್ಲಿ ಚಿನ್ನ?: ನಗರದ ಯುಜಿಡಿ (ಒಳಚರಂಡಿ) ಕೇವಲ ಕಲ್ಮಶ ಮಾತ್ರವಲ್ಲ ಚಿನ್ನಾಭರಣವನ್ನು ಹೊತ್ತು ತರುತ್ತಿದೆ ಯೇ? ನಗರ ಪಾಲಿಕೆ ಆಯುಕ್ತರ ದೂರಿನ ಹಿನ್ನೆಲೆಯಲ್ಲಿ ಇಂಥದೊಂದು ಪ್ರಶ್ನೆ ಕಾಡುತ್ತಿದೆ. ಕೆಲವೊಮ್ಮೆ ಜನರು ಬಹಿರ್ದೆಸೆಗೆ ಹೋದ ಸಂದರ್ಭ ಚಿನ್ನಾಭರಣ ಕಳಚಿ ಬಿದ್ದು ಅದು ಯುಜಿಡಿ ಮೂಲಕ ಹರಿದು ಬರುವ ಸಾಧ್ಯತೆ ಇದೆ. ಆದರೆ, ಇದು ತೀರಾ ಅಪರೂಪ. ಆದರೆ, ಇಂಥ ಚಿನ್ನಾಭರಣಕೋಸ್ಕರ ಕೆಲವು ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮ್ಯಾನ್‌ಹೋಲ್‌ನಲ್ಲಿ ಹುಡುಕಾಟ ನಡೆಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಇನ್ನಾದರೂ ಸರ್ಕಾರ ಇಂಥ ಜನರ ಜೀವನಮಟ್ಟ ಉತ್ತಮ ಪಡಿಸಲು ಚಿಂತನೆ ನಡೆಸುವ ಅವಶ್ಯಕತೆ ಇದೆ ಹಾಗೂ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ.

ಪಾಲಿಕೆ ಸ್ಪಷ್ಟನೆ ಏನು?:
ಮ್ಯಾನ್‌ಹೋಲ್‌ಗಳನ್ನು ಶುಚಿಗೊಳಿಸಲು ನಗರ ಪಾಲಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೆಟ್ಟಿಂಗ್ ಮೆಷಿನ್, ಡಿ ಸಿಲ್ಟಿಂಗ್ ಮೆಷಿನ್, ರಾಡಿಂಗ್ ಮೆಷಿನ್ ಇದೆ. ಹೀಗಾಗಿ ಪಾಲಿಕೆಯ ಪೌರ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಶುಚಿಗೊಳಿಸುವ ಅವಶ್ಯಕತೆಯೇ ನಿರ್ಮಾಣ ಆಗುವುದಿಲ್ಲ. ಬಸವೇಶ್ವರ ರಸ್ತೆಯಲ್ಲಿ ಮ್ಯಾನ್‌ಹೋಲ್ ಬ್ಲಾಕ್ ಆಗಿರುವ ಕುರಿತು ಪಾಲಿಕೆ ನಿಯಂತ್ರಣ ಕೊಠಡಿಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬುದು ಪಾಲಿಕೆಯ ಸ್ಪಷ್ಟನೆಯಾಗಿದೆ.

ಕೆಲವು ಖಾಸಗಿ ವ್ಯಕ್ತಿಗಳು ಚಿನ್ನಾಭರಣದ ಆಸೆಗೆ ಮ್ಯಾನ್‌ಹೋಲ್‌ನಲ್ಲಿ ಶೋಧ ನಡೆಸುತ್ತಿದ್ದು, ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೃಷ್ಣರಾಜ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
– ಶಿಲ್ಪಾ ನಾಗ್, ನಗರ ಪಾಲಿಕೆ ಆಯುಕ್ತೆ

ಕೃಪೆ…

ವಿಜಯವಾಣಿ