ಜಿ.ಎನ್ ಮೋಹನ್ ಸ್ಪೆಷಲ್: ಕಲಾಕ್ಷೇತ್ರವೆಂಬ ನನ್ನೊಳಗಿನ ಕವಿತೆ…

ಕಲಾಕ್ಷೇತ್ರವೆಂಬ
ನನ್ನೊಳಗಿನ ಕವಿತೆ…
—–
ಆ ದಿನ ಒಂದು ವಿಚಿತ್ರ ಜರುಗಿ ಹೋಗಿತ್ತು.
ಸದಾ ರಂಗದ ಮೇಲಿದ್ದು ಕತ್ತಲು ಬೆಳಕಿನಾಟದ ಮಧ್ಯೆ ಜನರ ಮನಸ್ಸಿಗೆ ಲಗ್ಗೆ ಹಾಕುತ್ತಿದ್ದ ಆ ಎಲ್ಲರೂ ಮೆಟ್ಟಿಲಿನ ಮೇಲೆ ಕುಳಿತಿದ್ದರು.jk-logo-justkannada-logo
ಪ್ರತಿಯೊಬ್ಬರ ಎದೆಯಲ್ಲೂ ನೋವು, ಆಕ್ರೋಶ ಮಡುಗಟ್ಟಿತ್ತು.
ತಮ್ಮ ಮನೆಯ ಮಂದಿಗೇ ಏನೋ ನೋವಾಯಿತು ಎನ್ನುವಂತೆ ಪ್ರತಿಯೊಬ್ಬರೂ ಯಾತನೆ ಅನುಭವಿಸುತ್ತಿದ್ದರು.
ಅವರೆಲ್ಲರೂ ಹಾಗೆ ಒದ್ದಾಡುತ್ತಿದ್ದುದ್ದು ಇನ್ನ್ಯಾರ ಬಗ್ಗೆಯೂ ಅಲ್ಲ, ರವೀಂದ್ರ ಕಲಾಕ್ಷೇತ್ರದ ಬಗ್ಗೆ.
ಗುಂಡೂರಾವ್ ಸರ್ಕಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲು ಸಜ್ಜಾಯಿತು.
ಅದುವರೆಗೂ ಈಗ ಬೆಂಗಳೂರಿನ ಬಸ್ ಸ್ಟ್ಯಾಂಡ್ ಇರುವ ಜಕ್ಕರಾಯನ ಕೆರೆ ಕಾಂಗ್ರೆಸ್ ಎಕ್ಸಿಬಿಶನ್ನಿನ ತಾಣವಾಗಿತ್ತು. ಗುಂಡೂರಾಯರಿಗೆ ಅದೇನು ಯೋಚನೆ ಬಂತೋ ಕಲಾಕ್ಷೇತ್ರದತ್ತ ಮುಖ ಮಾಡಿಬಿಟ್ಟರು.
ಸುದ್ದಿ ಗೊತ್ತಾದದ್ದೇ ತಡ, ತಮ್ಮ ತಮ್ಮ ಡೋಲು, ಹಾರ್ಮೋನಿಯಂ, ಕಂಜರ, ತಾಳ, ಗೆಜ್ಜೆ, ನಾಟಕದ ವೇಷಭೂಷಣಗಳ ಸಮೇತ ಕಲಾವಿದರು ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಕುಳಿತೇಬಿಟ್ಟರು.gn-mohan-special-8
’ಕೇಳಿ ಕೇಳಿರೋ ಕಲಾಕ್ಷೇತ್ರ ಕಥೆಯ
ನೀವೆಲ್ಲರೂ ಕೇಳಿ
ನೊಂದ ಬೆಂದ ಈ ಕಲಾಗಾರದ ವ್ಯಥೆಯ …..’
ಒಬ್ಬೊಬ್ಬರೂ ಒಂದೊಂದು ಸಾಲು ಸೇರಿಸುತ್ತಾ ಹೋದರು.
’ಕವಿ ರವೀಂದ್ರರ ಬೀಡಂತೆ
ಕಲಾ ಸೇವೆಯೇ ಗುರಿಯಂತೆ
ಸತ್ಯಕೆ ಷೆಡ್ಡೇ ಗತಿಯಂತೆ
ವಸ್ತು ಪ್ರದರ್ಶನ ಇಲ್ಲಂತೆ …
ಹೀಗೆ ಕಲಾವಿದರು ಕಲಾಕ್ಷೇತ್ರದ ಬಗಲಿಗೆ ನಿಂತೇಬಿಟ್ಟರು.
ನಿನ್ನ ಮೈ ಯಾರಾದರು ಮುಟ್ಟಿದರೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು.
ಕಲಾಕ್ಷೇತ್ರ ಎಂಬುದು ನನ್ನೊಳಗಿನ ಬೆರಗು.
ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ’ಇಸ್ಪೀಟ್ ರಾಜ್ಯ’ಕ್ಕೆ ಯಾರೆಲ್ಲಾ ಬರುತ್ತೀರಿ ಕೈ ಎತ್ತಿ’ ಎಂದರು.
ಇದೇನಪ್ಪ ಇಸ್ಪೀಟ್ ರಾಜ್ಯ? ಅಲ್ಲಿಗೆ ಯಾಕೆ ಕರೆದುಕೊಂಡು ಹೋಗುತ್ತಾರೆ ಎಂದು ಕಣ್ಣುಬಾಯಿ ಬಿಡುವಂತಾಗಿತ್ತು.
’ಇಸ್ಪೀಟ್’ ಎಂದರೆ ಸಾಕು ಮೈಮೇಲೆ ಬಾಸುಂಡೆ ಎಬ್ಬಿಸುವ ಮನೆ ನಮ್ಮದು. ಹಾಗಿರುವಾಗ ಅದರ ರಾಜ್ಯಕ್ಕೇ ಹೋಗುವುದು… ನನಗೋ ಇದು ಬಿಡಿಸಲಾಗದ ಒಗಟಾಗಿತ್ತು.
ಆದರೆ ಹಾಗೆ ಕೇಳುತ್ತಿದ್ದದ್ದು ನಾವೆಲ್ಲರೂ ಪ್ರೀತಿಸುತ್ತಿದ್ದ ನಾಟಕದ ಮೇಷ್ಟ್ರು ಎಂ ವಿ ಸುಬ್ಬಣ್ಣ. ಆ ಕಾರಣಕ್ಕಾಗಿಯೇ ಧೈರ್ಯ ಮಾಡಿ ನಾನೂ ಹಿಂದುಮುಂದು ನೋಡದೆ ಕೈ ಎತ್ತಿಬಿಟ್ಟಿದ್ದೆ.
ಆಮೇಲೆ ಗೊತ್ತಾಯಿತು ಅದು ‘ಬೆನಕ’ ತಂಡ ಅಭಿನಯಿಸುತ್ತಿದ್ದ ಬಿ ವಿ ಕಾರಂತರ ನಿರ್ದೇಶನದ ನಾಟಕ ಅಂತ. ನಾಟಕ ಇದ್ದದ್ದು ರವೀಂದ್ರ ಕಲಾಕ್ಷೇತ್ರದಲ್ಲಿ.
ಗಂಟೆ ಹೊಡೆದಂತೆ ಆರು ಗಂಟೆಗೆ ಕಲಾಕ್ಷೇತ್ರದ ಅಂಗಳಕ್ಕೆ ಕಾಲಿಟ್ಟಾಗ ’ನೀ ಯಾರೋ ಏನೋ ಎಂತೋ / ಅಂತೂ ಪೋಣಿಸಿತು ಕಾಣದಾ ತಂತು…’ ಎನ್ನುವ ಅನುಭವ.
ಆ ಕತ್ತಲು, ಆ ಬೆಳಕು, ಆ ಹಾಡುಗಳು, ಆ ದೃಶ್ಯಗಳು …. ಕಲಾಕ್ಷೇತ್ರ ನನ್ನೊಳಗೆ ಒಂದು ಜಾಗ ಹುಡುಕಿಕೊಂಡದ್ದು ಹೀಗೆ.
ಅಂದಿನಿಂದ ಇಂದಿನವರೆಗೂ ಕಲಾಕ್ಷೇತ್ರ ನನ್ನೊಳಗೆ ತನ್ನ ಆಟ – ಮಾಟವನ್ನು ನಡೆಸುತ್ತಲೇ ಬಂದಿದೆ.
ಸಿಜಿಕೆ ಯ ’ಒಡಲಾಳ’ ’ಬೆಲ್ಚಿ’ ’ಮಹಾಚೈತ್ರ’ ಪ್ರಸನ್ನರ ’ದಂಗೆಯ ಮುಂಚಿನ ದಿನಗಳು’ ’ತಾಯಿ’ ’ಗೆಲಿಲಿಯೋ’ ಟಿ ಎನ್ ಸೀತಾರಾಂ ಅವರ ’ನಮ್ಮೊಳಗೊಬ್ಬ ನಾಜೂಕಯ್ಯ’, ಸುರೇಶ್ ಆನಗಳ್ಳಿಯ ’ಮಂಟೆಸ್ವಾಮಿ ಪ್ರಸಂಗ’… ಹೀಗೆ ನೂರೆಂಟು ನಾಟಕಗಳು ನನ್ನೊಳಗೆ ಇಳಿದಿವೆ,
ನಾದದ ನದಿಯನ್ನು ನಡೆಸಿವೆ, ನನ್ನನ್ನು ತಿದ್ದಿವೆ, ಕಣ್ಣೋಟವನ್ನು ನೀಡಿವೆ.
ಪುಸ್ತಕವೆಂದರೆ ಹೇಗೆ ಪುಸ್ತಕ ಮಾತ್ರವಲ್ಲವೋ ಹಾಗೆ ನನಗೆ ನಾಟಕವೆಂದರೆ ಬರೀ ನಾಟಕ ಮಾತ್ರವಲ್ಲ. ಹಾಗೆಯೇ ಕಲಾಕ್ಷೇತ್ರವೆಂದರೆ ಬರೀ ಕಲಾಕ್ಷೇತ್ರವೂ ಅಲ್ಲ, ಬದುಕಿನ ಪಾಠಶಾಲೆ.
ನಾಲ್ಕು ಗೋಡೆಯ ಒಳಗೆ ನಾನು ಎಷ್ಟು ಹೆಕ್ಕಿಕೊಂಡಿದ್ದೇನೆಯೋ ಅದರ ನಾಲ್ಕು ಪಟ್ಟು ಹೆಚ್ಚೇ ನಾನು ಕಲಾಕ್ಷೇತ್ರದಿಂದಲೂ ಆಯ್ದುಕೊಂಡಿದ್ದೇನೆ.
ಕಲಾಕ್ಷೇತ್ರವೆಂದರೆ ಅಲ್ಲಿನ ಸ್ಟೇಜ್ ಮಾತ್ರ ಎಂದುಕೊಂಡರೆ ಯಾರಾದರೂ ನಕ್ಕುಬಿಟ್ಟಾರು.
ಕಲಾಕ್ಷೇತ್ರವೆಂದರೆ ಅದು ಸ್ಟೇಜ್ ಕೂಡಾ ಹೌದು, ಅದರ ಮುಂದಿನ ಮೆಟ್ಟಿಲೂ ಹೌದು, ಹಿಂದಿನ ಬಯಲು ರಂಗವೂ ಹೌದು, ಪಕ್ಕದ ಕನ್ನಡ ಭವನವೂ ಹೌದು, ರಿಹರ್ಸಲ್ ಷೆಡ್ಡುಗಳೂ ಹೌದು, ವಿಶ್ರಾಂತಿ ಕೊಠಡಿಗಳೂ ಹೌದು, ಪಕ್ಕದ ಕಲ್ಲುವನವೂ ಹೌದು, ಅಷ್ಟೇ ಏಕೆ ಉಡುಪರ ಕ್ಯಾಂಟೀನ್ ಕೂಡಾ ಹೌದು.
ಕಲಾಕ್ಷೇತ್ರ ಎಂದರೆ ಕೇವಲ ನಾಟಕವಲ್ಲ.
ಇಲ್ಲಿನ ಮೆಟ್ಟಿಲಿನ ಮೇಲೆ ಏರುದನಿಯ ಚರ್ಚೆಗಳಾಗಿವೆ, ಹೊಸ ತಂಡಗಳು ಹುಟ್ಟಿವೆ, ನೂರು ಕನಸುಗಳು ಅರಳಿವೆ, ಪುಸ್ತಕಗಳು ಬಿಡುಗಡೆ ಆಗಿವೆ, ಕಲಾಕೃತಿಗಳು ಮೂಡಿವೆ..
ಸಂತಸದ ಕಣ್ಣೀರೂ ಚಿಮ್ಮಿವೆ, ನೋವಿನ ಕಂಬನಿಯೂ ಅಲ್ಲಿ ಜಾಗ ಮಾಡಿಕೊಂಡಿದೆ.
ಕವಿ ರವೀಂದ್ರರ ನೂರನೆ ಹುಟ್ಟುಹಬ್ಬವನ್ನು ಜನಮನದಲ್ಲಿ ಸ್ಥಾಯಿಯಾಗಿ ಉಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿತು.
ರವೀಂದ್ರರ ತವರು ಕೊಲ್ಕತ್ತಾದಲ್ಲಿ ರವೀಂದ್ರ ಸದನ, ಭೂಪಾಲದಲ್ಲಿ ರವೀಂದ್ರ ಭವನ, ಹೈದರಾಬಾದಿನಲ್ಲಿ ರವೀಂದ್ರ ಭಾರತಿ, ಮುಂಬೈನಲ್ಲಿ ರವೀಂದ್ರ ನಾಟ್ಯಮಂದಿರ ತಲೆ ಎತ್ತಿತು.
ಬೆಂಗಳೂರಿನಲ್ಲಿ ರವೀಂದ್ರರ ಹೆಸರಿನ ಕಲಾಕ್ಷೇತ್ರ ಹುಟ್ಟುಹಾಕಲು ಮುಂದಾದಾಗ ಕಣ್ಣಿಗೆ ಕಂಡದ್ದು ಪುರಭವನದ ಪಕ್ಕ ಇದ್ದ ಕೊಳೆಗೇರಿ.
ಆಗ ಮುಖ್ಯಮಂತ್ರಿಯಾಗಿದ್ದ ಬಿ ಡಿ ಜತ್ತಿ ಉತ್ಸಾಹದಿಂದ ಮುಂದೆ ಬಂದರು.
ಮಾಸ್ತಿ, ಬೇಂದ್ರೆ, ಶಿವರಾಮ ಕಾರಂತ, ಗೊರೂರು ರಾಮಸ್ವಾಮಿ ಐಯ್ಯಂಗಾರ್, ಮಲ್ಲಿಕಾರ್ಜುನ ಮನ್ಸೂರರೂ ಸೇರಿದಂತೆ ಹಲವು ಗಣ್ಯರ ಸಮಿತಿ ರಚನೆಯಾಯಿತು.
ಎಸ್ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದೇ ಕಲಾಕ್ಷೇತ್ರ ನಿರ್ಮಾಣಕ್ಕೆ ಇನ್ನಷ್ಟು ವೇಗ ಒದಗಿತು.
ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಮಕ್ಕಳಿಗಾಗಿ ನೆಹರೂ ಸಿನಿಮಾ ಪ್ರದರ್ಶಿಸಿ ಹಣ ಸಂಗ್ರಹಿಸಲಾಯಿತು. ಶಿವಾಜಿ ಗಣೇಶನ್ ’ವೀರಪಾಂಡ್ಯ ಕಟ್ಟಬೊಮ್ಮನ್’ ನಾಟಕ ಪ್ರದರ್ಶಿಸಿ ಹಣ ಕೂಡಿಸಿಕೊಟ್ಟರು. ಅಧಿಕಾರಿಗಳು, ಕಾರ್ಮಿಕರು, ಮಠಾಧಿಪತಿಗಳು ಹಣ ಸೇರಿಸುತ್ತಾ ಹೋದರು.
ಅಮೇರಿಕಾದ ಚಾರ್ಲ್ಸ್ ವಿಲ್ಸನ್ ಕಣ್ಗಾವಲಿನಲ್ಲಿ ಬಿ ಆರ್ ಮಾಣಿಕ್ಯಂ ರೂಪರೇಷೆ ಸಿದ್ಧಪಡಿಸಿದರು.
೧೯೬೩, ಮಾರ್ಚ್ ೧೨ ರಂದು ಕಲಾಕ್ಷೇತ್ರದ ಪರದೆಯನ್ನು ಸರಿಸಿಯೇ ಬಿಟ್ಟರು.
ಆಗ ತಲೆಬಿಸಿಯಾಗಿದ್ದು ರಂಗತಂಡಗಳಿಗೆ.
೫೦ ರೂ ಖರ್ಚು ಮಾಡಿ ಇಡೀ ಒಂದು ನಾಟಕವನ್ನೇ ತಯಾರು ಮಾಡುತ್ತಿದ್ದ ರಂಗತಂಡಗಳಿಗೆ ಬರೀ ಪ್ರದರ್ಶನ ಮಾಡಲು ನೂರಾರು ರೂ ಬಾಡಿಗೆ ಕೊಡುವುದು ಸುತರಾಂ ಸಾಧ್ಯವಿರಲಿಲ್ಲ.
ಅದುವರೆವಿಗೂ ಬಸವನಗುಡಿ ನ್ಯಾಷನಲ್ ಕಾಲೇಜ್, ಮಲ್ಲೇಶ್ವರಂ ಅಸೋಸಿಯೇಷನ್ ನಾಟಕದ ತವರಾಗಿತ್ತು. ಹಾಗಾಗಿ ಕಲಾಕ್ಷೇತ್ರ ಸರ್ಕಾರಿ ಕಾರ್ಯಕ್ರಮ, ಸಭೆ, ಸಮ್ಮೇಳನಕ್ಕೇ ಸೀಮಿತವಾಗಿ ಹೋಯಿತು.
ಸಂಗೀತ ನಾಟಕ ಅಕಾಡಮಿ ಕಛೇರಿ ಕಲಾಕ್ಷೇತ್ರದಲ್ಲಿಯೇ ನೆಲೆಯೂರಿತು.
ಯಾವಾಗ ವಿದೇಶಿ ಸಾಂಸ್ಕೃತಿಕ ತಂಡಗಳು ಸಾಂಸ್ಕೃತಿಕ ವಿನಿಮಯದಡಿ ಬೆಂಗಳೂರಿಗೆ ಬರಲು ಆರಂಭಿಸಿದವೋ ಆಗ ಕಲಾಕ್ಷೇತ್ರ ಸಹ ಇಲ್ಲಿನ ರಂಗತಂಡಗಳಿಗೆ ಬೇಕಾದಂತೆ ಹೊಸ ರೂಪ ಪಡೆಯುತ್ತಾ ಹೋಯಿತು.
‘ನಾಟ್ಯ ಸಂಘ’ದ ಹೆಮ್ಮೆಯ ಉಲ್ಲಾಳ್ ಷೀಲ್ಡ್ ಸ್ಪರ್ಧೆ ಪ್ರಥಮ ಬಾರಿಗೆ ಪುರಭವನ ಬಿಟ್ಟು ಕಲಾಕ್ಷೇತ್ರ ಪ್ರವೇಶಿಸಿತು.
ಈ ಮಧ್ಯೆ ಒಂದು ಘಟನೆ ರಂಗಭೂಮಿಯ ಎಲ್ಲರನ್ನೂ ಒಗ್ಗೂಡಿಸಿಬಿಟ್ಟಿತು.
೧೯೭೪ರಲ್ಲಿ ರಂಗಸಂಪದದ ’ಆ ಮನಿ’ ನಾಟಕ ಪ್ರದರ್ಶನಕ್ಕೆ ನೀಡಿದ್ದ ಅನುಮತಿಯನ್ನು ರಾತ್ರೋರಾತ್ರಿ ರದ್ದು ಮಾಡಲಾಯಿತು.
ರಂಗಕರ್ಮಿಗಳು ಕುದ್ದುಹೋದರು.
ಬಿ ವಿ ಕಾರಂತರ ನೇತೃತ್ವದಲ್ಲಿ ‘ರಂಗಭೂಮಿ ಕ್ರಿಯಾಸಮಿತಿ’ ರಚನೆಯಾಯಿತು. ಕಲಾಕ್ಷೇತ್ರ ಕಲಾವಿದರ ತಾಣವಾಗಿ ಬದಲಾಗಲು ಆರಂಭಿಸಿದ್ದೇ ಆಗ.
ಕಲಾಕ್ಷೇತ್ರದ ಬಾಡಿಗೆ ಇಳಿಸಬೇಕು, ಬೆಳಕು ವ್ಯವಸ್ಥೆ ಸರಿಮಾಡಬೇಕು, ರಿಹರ್ಸಲ್ ಗೂ ಅನುಮತಿ ನೀಡಬೇಕು, ಬಾಡಿಗೆ ಯಾಕೆ ಹೆಚ್ಚಿಸಬೇಕು ಎನ್ನುವುದಷ್ಟೇ ಅಲ್ಲದೆ ಅಧಿಕಾರಿಗಳಿಗೆ ಆರು ಸೀಟು ಪುಕ್ಕಟೆಯಾಗಿ ಯಾಕೆ ಕೊಡಬೇಕು ಎಂದು ಪ್ರಶ್ನಿಸುವವರೆಗೂ ಬಂದು ನಿಂತಿತು.
ಗುಂಡೂರಾವ್ ವಸ್ತುಪ್ರದರ್ಶನ ನಡೆಸಲು ಶಂಕುಸ್ಥಾಪನೆ ನಡೆಸಿದ್ದೇ ಪ್ರತಿಭಟನೆಯ ಅಲೆಯನ್ನೇ ಎದುರಿಸಬೇಕಾಯಿತು.
೧೯೮೩ರಲ್ಲಿ ಕಲಾಕ್ಷೇತ್ರದ ರಿಪೇರಿಗಾಗಿ ಅದರ ಬಾಗಿಲು ಮುಚ್ಚಲಾಯಿತು. ತಿಂಗಳುಗಳು ಉರುಳಿದರೂ ಬಾಗಿಲು ತೆಗೆಯದ್ದು ಕಂಡು ಪಕ್ಕದಲ್ಲಿ ತಾತ್ಕಾಲಿಕವಾಗಿ ‘ಕೈಲಾಸಂ ಕಲಾಕ್ಷೇತ್ರ’ ನಿರ್ಮಿಸಲಾಯಿತು.
ಆ ನಂತರ ಹಿಂದೆ ಸಂಸ ಬಯಲು ರಂಗಮಂದಿರ ಬಂದದ್ದು, ಕೈಲಾಸಂ ಕಲಾಕ್ಷೇತ್ರ ಇದ್ದ ಜಾಗ ಕನ್ನಡಭವನವಾಗಿದ್ದು ಎಲ್ಲವೂ ಇತಿಹಾಸ.
ಕಲಾಕ್ಷೇತ್ರ ಎಷ್ಟೋ ತಲೆಮಾರುಗಳಿಗೆ ವಿವೇಕ ಬಿತ್ತಿದ ಜಾಗ. ಬಂಡಾಯದ ಉಸಿರು ಜೀವಂತವಿಟ್ಟ ಜಾಗ, ಹೊಸ ನೋಟಕ್ಕೆ ದಾರಿ ಮಾಡಿಕೊಟ್ಟ ಜಾಗ. ವಿಚಾರ ಮಂಥನಕ್ಕೆ ಒದಗಿದ ವೇದಿಕೆ.
‘ಒಣಮರ ಚಿಗುರಿ ಹೂ ಬಿಟ್ಟ ಕಥೆಯ ಊರೆಲ್ಲಾ ಹಾಡಿ ಹಾಡಿ, ಕಥೆಯಾಯ್ತು, ಹೊಸ ಕವಿತೆಯಾಯ್ತು, ನಾಲಿಗೆಯ ಹೆಡೆಯನಾಡಿ..’ ಎನ್ನುವ ಪ್ರಸನ್ನ ನಿರ್ದೇಶಿಸಿದ ‘ದಂಗೆಯ ಮುಂಚಿನ ದಿನಗಳು’ ನಾಟಕದ ಸಾಲು ಯಾಕೋ ನೆನಪಾಗುತ್ತಿದೆ.
ರವೀಂದ್ರ ಕಲಾಕ್ಷೇತ್ರ ಎಂಬ ಹೊಸ ಕವಿತೆ ಎದೆಯಲ್ಲಾಡುತ್ತಿದೆ.
—-