ಜಿ.ಎನ್.ಮೋಹನ್’ರ ಕ್ವಾರಂಟೈನ್ ಮೆಲುಕು: ಮಣ್ಣಿನ ಮೇಲೊಂದು ಮರವಾಗಿ…

ಕುಹು ಕುಹೂ..

ಗಾಢ ನಿದ್ದೆಯಲ್ಲಿದ್ದೆ. ಆಗ ಕೇಳಿಸಿತು ಈ ಕೂಗು. ನಾನು ಕಣ್ಣುಜ್ಜಿಕೊಂಡೆ. ಕಾಂಕ್ರೀಟ್ ಕಾಡಿನಲ್ಲಿ ಕೋಗಿಲೆ ಬಂದು ಕೂಗುವುದುಂಟೇ..?? ಒಳ್ಳೆಯ ಕನಸೇ ಬಿದ್ದಿದೆ ಎಂದು ಮಗ್ಗುಲಾದೆ.

ಅರೆ! ಮತ್ತೆ ಕುಹು ಕುಹೂ.. ಏನಾದರಾಗಲಿ ನೋಡೇಬಿಡುವ ಎಂದು ಮೆಲ್ಲಗೆ ಕಿಟಕಿಯ ಪರದೆ ಸರಿಸಿದರೆ ಆ ಹಸಿರು ಎಲೆಗಳ ಮಧ್ಯೆ ಕಾಣಿಸೇಬಿಟ್ಟಿತು ಆ ಕೋಗಿಲೆ.

ಸಂಜೆ ಆಫೀಸಿನಿಂದ ಬಂದು ‘ಉಸ್ಸಪ್ಪಾ’ ಎಂದು ಮನೆ ಬಾಗಿಲು ಬಡಿಯಬೇಕು. ಯಾರೋ ನನ್ನನ್ನೇ ನೋಡುತ್ತಿದ್ದಾರೆ ಅನಿಸಿತು. ಯಾರಿರಬಹುದು? ಎಂದು ತಲೆ ಎತ್ತಿದರೆ ಅದೇ ಹಸಿರು ಎಲೆಗಳ ಮಧ್ಯೆ ಒಂದು ಪುಟ್ಟ ಗೂಬೆ. ಮನೆಯ ಗೇಟಿನ ಮೇಲೆ ಸರಿಯಾಗಿ ಹೆಂಗಳೆಯರ ಹಣೆಯ ಮೇಲೆ ಸರಿದಾಡುವ ಮುಂಗುರುಳಿನಂತೆ ಒಂದು ಕೊಂಬೆ ಆಡುತ್ತಿತ್ತು. ಅದೇ ಕೊಂಬೆಯಲ್ಲಿ ಈಗ ಗೂಬೆ ಮರಿ. ಅದು ನನ್ನನ್ನೂ ನಾನು ಅದನ್ನೂ ನೋಡುತ್ತಾ ಸಾಕಷ್ಟು ಹೊತ್ತಾಯಿತು. ಗೂಬೆ ಕೂಡಾ ಇಷ್ಟು ಮುದ್ದಾಗಿರುತ್ತದಾ ಎಂದು ಅದನ್ನೇ ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದೆ.

ಇನ್ನೊಮ್ಮೆ ಮಹಡಿಯ ಮೇಲೆ ಅಡ್ಡಾಡುತ್ತಿದ್ದೆ. ನೋಡಿದರೆ ಒಂದು ಉನ್ಮಾದದ ಕೂಗು. ಅದೂ ಆ ಮರದಿಂದಲೇ. ಮರದ ರೆಂಬೆ ಕೊಂಬೆಗಳ ಕಡೆ ಕಣ್ಣಾಡಿಸಿದರೆ.. ಓಹ್! ಅಲ್ಲಿ ಅಳಿಲುಗಳ ಸುರತ

ಹೆಂಚಿನಾ ಮನೆ ಕಾಣೋ, ಕಂಚಿನ ಕದ ಕಾಣೋ

ನಿಂತಾಡೋವೆರಡು ಗಿಣಿ ಕಾಣೋ । ಅಣ್ಣಯ್ಯ

ಅದೇ ಕಾಣೋ ನನ್ನ ತವರುಮನೆ

ತವರನ್ನು ಬಿಟ್ಟುಕೊಡಲಾಗದೆ ಕಣ್ಣೀರು ತುಂಬಿಕೊಂಡು ಗಂಡನ ಲೋಕಕ್ಕೆ ಪ್ರವೇಶ ಪಡೆದ ಹೆಣ್ಣು ಮಕ್ಕಳಿಗೆ ಇದು ಎದೆಯೊಳಗಿನ ಹಾಡು. ತಮ್ಮ ಮನೆ ಹಾದು ಹೋಗುವವರಿಗೆಲ್ಲಾ ತಮ್ಮ ತವರ ಗುರುತು, ಅಲ್ಲಿರುವ ಮನೆಯ ಗುರುತನ್ನು ಹೇಳಿ ಅಲ್ಲಿಗೆ ಹೋಗಿ ಬನ್ನಿ ಎನ್ನುತ್ತಿದ್ದರು.

ಥೇಟ್ ಹೀಗೆಯೇ ಆಗಿ ಹೋಗಿತ್ತು. ಸರಿಸುಮಾರು ೨೫ ವರ್ಷಗಳ ಹಿಂದೆ. ಪುಟ್ಟ ಸಸಿಯೊಂದನ್ನು ಹಿಡಿದು ಬಂದಾಗ ಅವಳ ಕಣ್ಣಾಲಿಗಳು ತುಂಬಿತ್ತು. ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಲೇ ಆಕೆ ಮನೆಯ ಮುಂದೆ ಪುಟ್ಟ ಪಾತಿ ತೋಡಿ ಅಲ್ಲಿ ಆ ಸಸಿ ನೆಟ್ಟಳು. ಆಮೇಲೆ ಗಂಡನ ಜೊತೆ ಹೊರಟುಹೋದಳು. ಅವಳು ನನ್ನ ತಂಗಿ.

ಅದು ಕಣ್ಣುಬಿಟ್ಟಿತು. ಮೊದಲು ಎರಡು ಎಲೆ, ನಂತರ ಮತ್ತೆರಡು ಹೀಗೆ ಗುಣಾಕಾರ ಮಾಡುತ್ತಾ ಮಾಡುತ್ತಲೇ, ನಾವು ನೋಡನೋಡುತ್ತಿದ್ದಂತೆಯೇ ಅದು ಹೆಮ್ಮರವಾಗಿ ಬೆಳೆದು ಹೋಯ್ತು.

ಬಹುಷಃ ಈಗ ಅವಳು ಅಲ್ಲಿ ತನ್ನ ಮನೆ ಹಾದು ಹೋಗುವವರಿಗೆ ಹಾಗೇ ಹೇಳುತ್ತಿರಬಹುದು- ಒಂದು ಮಹಡಿಯ ಮನೆ, ನೆಲಕೆ ಇನ್ನೂ ಕೆಂಪು ಬಣ್ಣ, ಎಲ್ಲರಂತಹದ್ದೇ ಬಾಗಿಲು, ಮನೆಯ ಮುಂದೆ ಮಾತ್ರ ದೊಡ್ಡ ಮರ..

ಅಷ್ಟು ಸಾಕು ಗುರುತಿಗೆ.

ಲಂಬಾಣಿಗರ ಹಾಡುಗಳನ್ನೊಮ್ಮೆ ನೀವು ಕೇಳಬೇಕು. ಅಲ್ಲಿ ಮರ ಗಿಡ ಕಲ್ಲು ಮುಳ್ಳು ಎಲ್ಲವೂ ಹಾಡಾಗಿ ಹೊಮ್ಮಿಬಿಡುತ್ತದೆ. ಲಂಬಾಣಿಯರದ್ದು ನಿರಂತರ ಚಲಿಸುವುದೇ ಬದುಕು. ತವರಿನಿಂದ ಹೊರಟ ಹೆಣ್ಣು ಮತ್ತೆ ತನ್ನ ತವರಿನವರನ್ನು ಬದುಕಿನಲ್ಲಿ ಕಾಣುತ್ತಾಳೆ ಎನ್ನುವ ಖಾತರಿಯೇ ಇಲ್ಲ.

ಹಾಗಾಗಿ ಆಕೆ ಮದುವೆಯಾಗಿ ಗಂಡನ ಜೊತೆ ಹೆಜ್ಜೆ ಹೊರಗಿಟ್ಟಾಗ ಅಳುವಿನ ಅಲೆಯೇ ಎದ್ದೇಳುತ್ತದೆ. ಅದು ಅಡಗುವ ಅಲೆಯಲ್ಲ, ಉಬ್ಬರಿಸಿ , ಉಬ್ಬರಿಸಿ ಭೋರ್ಗರೆವ ಅಳು. ಆಗಲೇ ಆಕೆಗೆ ತಾನು ಹಾಲುಂಡ ತವರು, ಅಲ್ಲಿ ಹಬ್ಬಿದ ಬಳ್ಳಿ, ತಾನು ಎಡವಿದ ಕಲ್ಲೂ, ಕಾಲಿಗೆ ಹೊಕ್ಕ ಮುಳ್ಳು ಎಲ್ಲವೂ ತವರ ನೆನಪಾಗಿ ನಿಲ್ಲುತ್ತದೆ.

ಆಗಲೇ ಆಕೆ ಕಲ್ಲನ್ನೂ, ಮುಳ್ಳನ್ನೂ, ಗಿಳಿಯನ್ನೂ, ಎಲೆಯನ್ನೂ ಹೀಗೆ ಕಂಡ ಕಂಡದ್ದೆಲ್ಲಕ್ಕೂ ಹೆಸರಿಟ್ಟು ಅಳುತ್ತಾಳೆ. ಅವಳ ಹೃದಯ ಹಾರೈಸುತ್ತದೆ ‘ಹಬ್ಬಾಲಿ ಅವರ ರಸಬಳ್ಳಿ..’

ಆದರೆ ನಮಗೆ ಮಾತ್ರ ಅವಳು ಹೊರಟುಹೋದಳು ಎಂದು ಅನಿಸಲೇ ಇಲ್ಲ. ಯಾಕೆಂದರೆ ಅವಳು ನಮ್ಮ ಮನೆಯ ಮುಂದೆ ಸಸಿಯಾಗಿ ಇದ್ದೇ ಇದ್ದಳು. ಯಾವಾಗ ಅದು ಅವಳಾಗಿ ಹೋಯಿತೋ

ಮನೆಯವರೆಲ್ಲರೂ ಪ್ರತೀ ಅದರ ಅರೋಗ್ಯ ವಿಚಾರಿಸಿಕೊಂಡರು. ಅಕ್ಕ ಪಕ್ಕದ ಮನೆಯವರೂ ಬಂದು ಮಾತಾಡಿಸುತ್ತಿದ್ದಾರೇನೋ ಎನ್ನುವಂತೆ ಅದು ಎಲೆ ಅರಳಿಸುವುದನ್ನೂ ನೋಡುತ್ತಾ ನಿಂತರು. ಊರಲ್ಲಿಲ್ಲದಾಗ ಅವರೇ ನೀರೆರೆದರು. ರಸ್ತೆಯಲ್ಲಿ ಹಸು ಓಡಾಡುತ್ತದೆ ಎಂದು ಖುದ್ದು ಕಾರ್ಪೊರೇಟರ್ ಅಮ್ಮನೇ ಬಂದು ಅದಕ್ಕೆ ಬಿದಿರ ರಕ್ಷಣೆ ಕೊಡಿಸಿದರು.

ಗಿಡವಾಗಿರುವಾಗಲೇ ಅದನ್ನು ಬಗ್ಗಲು ಕುಗ್ಗಲು ಬಿಡಲಿಲ್ಲ. ಹಾಗಾಗಿ ಅದು ಮರವೇ ಆಯಿತು. ಅದು ಮನೆಯವರಿಗೂ ಬೀದಿಯವರಿಗೂ ಎಂದೂ ಮರ ಅನ್ನಿಸಲೇ ಇಲ್ಲ. ಅದು ಸಾಕ್ಷಾತ್ ಅವಳೇ ಎನ್ನುವಂತೆ ಅದರ ಜೊತೆ ಮಾತಿಗೆ ನಿಂತರು. ಪಕ್ಕಾ ಜಾನಪದ ಕಥೆಗಳ ‘ಚೆಲುವಿ’ಯಂತೆ. ಅವಳೇ ಮರವಾಗಿ ಹೋಗುವ ಮರವೇ ಜೀವ ತಳೆದು ಅವಳಾಗುವ ಅಚ್ಚರಿಯಂತೆ

ನಾನು ಕ್ಯೂಬಾಕ್ಕೆ ಹೋದಾಗ ಒಂದು ಪುಟ್ಟ ಅಚ್ಚರಿ. ಅಲ್ಲಿಯ ಮನೆ ತಲುಪಿಕೊಂಡವನೇ ಸೂಟ್ ಕೇಸ್ ತೆರೆದೆ. ಅರೆ! ಅಲ್ಲೊಂದು ಪುಟ್ಟ ಗೊಂಬೆ. ಒಂದು ಪೆನ್ಸಿಲ್, ಒಂದು ರಬ್ಬರ್. ಇದೇನಪ್ಪಾ ಎಂದು ನೋಡಿದರೆ ಆಗಿನ್ನೂ ಅಕ್ಷರ ಲೋಕಕ್ಕೆ ಕಾಲಿಟ್ಟಿದ್ದ ಮಗಳು ತನ್ನ ಪೆನ್ಸಿಲ್, ರಬ್ಬರ್ ಆನ್ನೇ ನನ್ನ ಸೂಟ್ ಕೇಸ್ ಒಳಗೆ ಸೇರಿಸಿದ್ದಳು- ತನ್ನ ನೆನಪಿಗಾಗಿ. ಆ ಪುಟ್ಟ ಗೊಂಬೆ, ಆ ರಬ್ಬರ್, ಆ ಪೆನ್ಸಿಲ್ ನಾನು ಹೋದ ದಿನದಿಂದ ಹಿಂದಿರುಗುವವರೆಗೂ ನನ್ನ ಹಾಸಿಗೆಯ ಮೇಲೇ ಇತ್ತು. ನಾನು ಅಷ್ಟು ದಿನ ಇದ್ದರೂ ಒಬ್ಬನೇ ಅನಿಸಲೇ ಇಲ್ಲ. ನಾನು ಅದರೊಂದಿಗೆ ಮಾತನಾಡುತ್ತಲೇ ಇದ್ದೆ.

ಆ ನಂತರ ನಮ್ಮ ಬದುಕಿನಲ್ಲಿ ನೂರೆಂಟು ಘಟನೆಗಳು ನಡೆದು ಹೋಗಿವೆ. ನಾನು ಇಲ್ಲಿ ಅವಳು ಮುಂಬೈನಲ್ಲಿ. ಆದರೆ ಈಗಲೂ ನಾನು ಯಾವುದೇ ಊರಿಗೆ ಬಟ್ಟೆ ಪ್ಯಾಕ್ ಮಾಡಿದೆ ಎಂದರೆ ಅದರೊಳಗೆ ಒಂದು ಪುಟ್ಟ ಗೊಂಬೆ, ಇಲ್ಲಾ ಮಗಳು ಹಸ್ತಾಕ್ಷರ ಹಾಕಿದ ಪುಸ್ತಕ, ಇಲ್ಲ ಅವಳು ಗೀಚಿದ ರೇಖೆಗಳು ಜೊತೆಯಾಗುತ್ತವೆ. ಅದು ನನ್ನೊಡನೆ ಮಾತನಾಡುತ್ತಲೇ ಇರುತ್ತದೆ.. ಈಗ ಈ ಮರ..

‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ..’ ಎನ್ನುವುದನ್ನು ಸುಳ್ಳು ಮಾಡಲೋ ಎಂಬಂತೆ ಈ ಮರ ನಮ್ಮ ಮನೆ ಅಂಗಳದಲ್ಲಿ ಅರಳಿದರೂ ಇಡೀ ರಸ್ತೆಯನ್ನೇ ಆವರಿಸಿ ಅಕ್ಕ ಪಕ್ಕದ ಎದೂರು ಹೀಗೆ ಎಲ್ಲಾ ಮನೆಗೂ ಮುತ್ತಿಡುತ್ತದೆ. ಇಡೀ ರಸ್ತೆಯಲ್ಲಿ ಒಂದು ದೊಡ್ಡ ಛತ್ರಿ ಹರಡಿಕೊಂಡಂತೆ. ಹಸಿರಿನ ಚಪ್ಪರ.

ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಹುಟ್ಟಿ, ಅಲ್ಲಿಯೇ ಬೆಳೆದು, ಕಟ್ಟಡ ಅಲ್ಲದೆ ಬೇರೆ ಗೊತ್ತಿಲ್ಲದ ನನಗೆ ಬೆಂಗಳೂರು ಈಗ ಆಕಾಶ ನೋಡುವ ಅವಕಾಶವನ್ನೂ ಕಿತ್ತುಕೊಳ್ಳುತ್ತಿದೆ. ೪೫- ೫೦ ಹೀಗೆ ಎತ್ತರೆತ್ತರದ ಬಹುಮಹಡಿಗಳೇ ನಿಂತು ಅದರ ಸಂದಿಯಿಂದ ಒಂದಿಷ್ಟು ಆಗಸ ಹುಡುಕಿಕೊಳ್ಳುವ ಕಾಲ ಬಂದಿದೆ. ಇನ್ನು ರಾತ್ರಿ ಚುಕ್ಕಿಗಳನ್ನು ಆಯ್ದುಕೊಳ್ಳುವುದೋ .. ಸಾಧ್ಯವಿಲ್ಲದ ಮಾತು.

ಇಂತ ಸಮಯದಲ್ಲಿ ನನಗೆ ಋತುವಿನ ಫುಲಕವನ್ನು ಕೊಟ್ಟದ್ದು ಈ ಮರ. ವಸಂತ ಗ್ರೀಷ್ಮ ಶಿಶಿರ ಎಲ್ಲವನ್ನೂ ನಾನು ಖಚಿತವಾಗಿ ಹೇಳಬಲ್ಲೆ.. ನೆನಪಿಡಿ ಆ ಋತುಗಳು ಕೊಡುವ ಫುಲಕದ ಸಮೇತ.

ವಸಂತ ಪುಟ್ಟ ಮೊಗ್ಗಾಗಿ, ಹಸಿರು ಎಲೆಯಾಗಿ, ಬಿಳಿಯ ಹೂವಾಗಿ, ಕಡುಹಸಿರು ಕಾಯಾಗಿ ಹರಡಿನಿಲ್ಲುವ ಸಡಗರಕ್ಕೆ ಪದಗಳ ಹೊಂದಿಸುವುದೇ ಕಷ್ಟ. ವಸಂತವನ್ನು ಆ ಮರ ಸಂಭ್ರಮಿಸುವ ಪರಿ ನೋಡಬೇಕು. ‘ಘಲ್ಲು ಘಲ್ಲೆನುತಾ ಗೆಜ್ಜೆ ಘಲ್ಲು ತಾದಿನತ..’ ಎನ್ನುವ ಸಂಭ್ರಮ ಗೊತ್ತಾದದ್ದೇ ಇಲ್ಲಿ. ವಸಂತ ಬರುತ್ತಿದೆ ಎನ್ನುವುದನ್ನು ಒಂದು ಮಣ ಕಂಬಳಿ ಹುಳುಗಳೂ, ಕಣ್ಣಿಗೆ ಕಾಣದಷ್ಟು ಚಿಕ್ಕ ಸೊಳ್ಳೆಗಳೂ, ಹೊಂಗೆಯ ಕಂಪೂ ಸಾರಿಬಿಡುತ್ತದೆ.

ಆ ದಿನಗಳಲ್ಲಿ ಟಾರಿನ ರಸ್ತೆ ಮುಚ್ಚಿಹೋಗುವಂತೆ, ಇಲ್ಲ ಬಿಳಿ ಹಚ್ಚಡ ಹೊದಿಸಿ ಹೋಗಿದ್ದಾರೆ ಎನ್ನುವಂತೆ, ಅಥವಾ ‘ಮಡಿಕೇರಿ ಮೇಲ್ ಮಂಜು’ ಎನ್ನುವಂತೆ ಹೂಗಳು ಒಂದಿಷ್ಟಾದರೂ ನೆಲ ಕಾಣುವ ಅವಕಾಶ ಕೊಟ್ಟರೆ ಹೇಳಿ. ಇದನ್ನು ನೋಡಲೆಂದೇ ಆ ರಸ್ತೆ ಈ ರಸ್ತೆಯಿಂದೆಲ್ಲಾ ಜನ ಬರುತ್ತಾರೆ. ಕಸ ಗುಡಿಸಲು ಬರುವ ಕೆಲಸಗಾರಳಿಗೂ ಅದನ್ನು ಗುಡಿಸಿ ಹಾಕಲು ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಅವಳೂ ತನ್ನ ಗುತ್ತಿಗೆಯ ಇತರೆ ಎಲ್ಲಾ ರಸ್ತೆ ಮುಗಿಸಿ ಮಧ್ಯಾಹ್ನ ಮಾಡಿಯೇ ಬರುತ್ತಾಳೆ.

ಮಾಗಿ ಮಾಗಿಯ ಮಧ್ಯೆ ಮೌನವೇ ಸರದಾರ ಎನ್ನುವಂತೆ ಅಂತಹ ಹಾಡುಗಬ್ಬದ ಈ ಮರ ಮಾಗಿ ಬರುತ್ತಿದ್ದಂತೆ ತನ್ನ ಒಂದು ಎಲೆಯನ್ನೂ ಉಳಿಸಿಕೊಳ್ಳದೆ ಬೋಳಾಗಿ ಬಿಡುತ್ತದೆ.

ಅವಳು ಇಲ್ಲಿ ಮರವಾಗಿದ್ದಾಳೆ. ತವರು ಬಿಟ್ಟು ಹೋದ ತಂಗಿ ಇಲ್ಲಿ ಪ್ರತೀ ಋತುವಿಗೂ ತನ್ನ ಗುರುತು ಕಾಣುವಂತೆ ಮಾಡಿ ಹೋಗಿದ್ದಾಳೆ. ಒಂದು ಪುಟ್ಟ ಸಸಿ ಕೋಗಿಲೆಗೂ, ಅಳಿಲಿಗೂ, ಗೂಬೆ ಮರಕುಟಿಗಕ್ಕೂ ದಾರಿ ಮಾಡಿದೆ. ಬೆಳಗ್ಗೆ ಎಂಪಿ೩ ಹಾಡುಗಳಿಗೆ ಮೊರೆ ಹೋಗುವುದು ನಿಲ್ಲಿಸಿದ್ದೇನೆ. ಏಕೆಂದರೆ ಹಕ್ಕಿಯ ಕುಕಿಲು ಅನಾಯಾಸವಾಗಿ ಸಿಕ್ಕುತ್ತಿದೆ.

ಬೇಸಿಗೆ ಬಂದರೆ ಸಾಕು ದಾರಿಯಲ್ಲಿ ಹಾದು ಹೋಗುವ ರಂಗೋಲಿ ಹುಡುಗಿ, ನಿಂಬೆ ಹಣ್ಣು ಮಾರುವ ಆ ಹೆಂಗಸು, ಕತ್ತರಿ ಹರಿತ ಮಾಡಿಕೊಡುವ ಕಲಾಯಿ ಹುಡುಗ, ಕಡಲೆಪುರಿ ಹೊತ್ತು ತರುವ ಬೊಚ್ಚುಬಾಯಿಯ ಅಜ್ಜ, ಮನೆ ಮನೆ ಬಾಗಿಲು ತಟ್ಟುವ ಸೇಲ್ಸ್ ಗರ್ಲ್ ಗಳು, ವೋಟರ್ ಐ ಡಿ, ಜನಗಣತಿ, ಶಾಲೆಗೆ ಸೇರಿಸಿ ಹೀಗೆ ಗಣತಿಗೆ ಬರುವ ಮೇಷ್ಟ್ರುಗಳ ದಂಡು, ನನಗೆ ವೋಟ್ ಕೊಡಿ ಎಂದು ಮೈಗಿಯುವ ಅಭ್ಯರ್ಥಿಗಳು, ದಿನವಿಡೀ ಸುತ್ತಿ ಬಳಲಿದ ಉಬೆರ್, ಓಲಾ ಡ್ರೈವರ್ ಗಳು ಒಂದು ಪುಟ್ಟ ನಿದ್ದೆ ತೆಗೆಯಲು, ಆ ಕೊನೆಯ ಮನೆಯಲ್ಲಿ ಗಾರೆ ಕೆಲಸ ಮಾಡುತ್ತಿರುವವರ ಬುತ್ತಿ ಗಂಟು ಸಹಾ ಇಲ್ಲಿಯೇ ಬಿಚ್ಚಿಕೊಳ್ಳುತ್ತದೆ.

ಹೆಣ್ಣಾಗಿ ಹುಟ್ಟೋಕಿಂತ ಮಣ್ಣಾಗಿ ಹುಟ್ಟಿದರೆ

ಮಣ್ಣಿನ ಮೇಲೊಂದು ಮರವಾಗಿ / ಹುಟ್ಟಿದರೆ

ಪುಣ್ಯವಂತರಿಗೆ ನೆರಳಾದೆ

ನಮಗೋ ಇಲ್ಲಿ ಆಕೆ ಹೆಣ್ಣಾಗಿ ಹುಟ್ಟಿದ್ದರಿಂದಲೇ ಈ ಮಣ್ಣಲ್ಲಿ ಸಸಿ ನೆಡುವ ಹುಕಿ ಬಂತು ಅನಿಸುತ್ತದೆ.

ಆ ಮರವೂ ಸಹಾ ಎಕ್ಕುಂಡಿ ಹೇಳುವಂತೆ ‘ದೂರದಲಿ ಇದ್ದವರ ಹತ್ತಿರಕೆ ತರಬೇಕು, ಎರಡು ದಂಡೆಗೂ ಉಂಟಲ್ಲ ಎರಡು ತೋಳು’ ಎನ್ನುವಂತೆ ಎಲ್ಲರನ್ನೂ ಹುಡುಕಿ ಹುಡುಕಿ ತನ್ನಎಡೆಗೆ ತರುತ್ತಿದೆ. ಮರವೇ ಈಗ ಸೇತುವೆಯಾಗಿ ನಮ್ಮನ್ನೂ ಅವಳನ್ನೂ ಬಂಧಿಸಿದೆ.

ಆಗೋ ನೋಡಿ, ಆಗಲೇ ಆ ಮರದ ಕೆಳಗೆ ಒಂದು ಜೋಡಿ ನಿಂತಿದೆ. ಕಣ್ಣಲ್ಲಿ ಕಾಮನೆ. ಪಿಸು ಪಿಸು ಮಾತು ನಡೆಸುತ್ತಿದೆ.

ಹೌದಲ್ಲಾ.. ಮರದ ಮೇಲಲ್ಲ, ಮರದಡಿಯೂ ವಸಂತ..