ಮೈಸೂರು,ಜನವರಿ,6,2026 (www.justkannada.in): ಮೈಸೂರಿನ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಗರಿ ಲಭಿಸಿದೆ. ಇಲ್ಲಿನ ಮಣಿಪಾಲ್ ಆಸ್ಪತ್ರೆಯ ಖ್ಯಾತ ಕೀಲು ಬದಲಿ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬೋಗಾದಿ ಪ್ರಶಾಂತ್ ಅವರು ಯುಎಇಯ ದುಬೈನಲ್ಲಿ ನಡೆಯಲಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಅಸ್ಥಿರೋಗ ಸಮ್ಮೇಳನ ‘ಗ್ಲೋಬಲ್ ನೀ ಸಮಿಟ್ 2026’ (Global Knee Summit 2026) ಕ್ಕೆ ಫ್ಯಾಕಲ್ಟಿ ಸದಸ್ಯರಾಗಿ ಆಹ್ವಾನಿಸಲ್ಪಟ್ಟಿದ್ದಾರೆ.
ಜನವರಿ 22 ರಿಂದ 24 ರವರೆಗೆ ನಡೆಯಲಿರುವ ಈ ಜಾಗತಿಕ ಶೃಂಗಸಭೆಯು ವಿಶ್ವದ ಅಗ್ರಗಣ್ಯ ಅಸ್ಥಿರೋಗ ತಜ್ಞರು ಮತ್ತು ಸಂಶೋಧಕರ ಸಮಾಗಮಕ್ಕೆ ಸಾಕ್ಷಿಯಾಗಲಿದೆ. ಅಮೆರಿಕದ ಡಾ. ಕೆವಿನ್ ಪ್ಲಾಂಚರ್ ಮತ್ತು ಪುಣೆಯ ಸಂಚೇತಿ ಆಸ್ಪತ್ರೆಯ ಅಧ್ಯಕ್ಷ ಡಾ. ಪರಾಗ್ ಸಂಚೇತಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಜಾಗತಿಕ ವೇದಿಕೆಯಲ್ಲಿ ಡಾ. ಬೋಗಾದಿ ಪ್ರಶಾಂತ್ ಅವರು ಎರಡು ಪ್ರಮುಖ ಶೈಕ್ಷಣಿಕ ಗೋಷ್ಠಿಗಳ ಸಂಚಾಲಕರಾಗಿ (Moderator) ಕಾರ್ಯನಿರ್ವಹಿಸಲಿದ್ದಾರೆ. ಮಂಡಿ ಬದಲಿ ಶಸ್ತ್ರಚಿಕಿತ್ಸೆಯ ಪರಿಣಿತರ ಸಮಿತಿಯ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಸಮಾವೇಶವು ಮಂಡಿ ಬದಲಿ ಶಸ್ತ್ರಚಿಕಿತ್ಸೆಯಲ್ಲಿನ ಇತ್ತೀಚಿನ ಆವಿಷ್ಕಾರಗಳು, ರೋಬೋಟಿಕ್ಸ್ ತಂತ್ರಜ್ಞಾನ, ಕ್ರೀಡಾ ವೈದ್ಯಕೀಯ (Sports Medicine) ಮತ್ತು ಟ್ರಾಮಾ ಕೇರ್ ಬಗ್ಗೆ ಬೆಳಕು ಚೆಲ್ಲಲಿದೆ. ವಿಶ್ವದಾದ್ಯಂತ ಆಯ್ಕೆಯಾದ 60ಕ್ಕೂ ಹೆಚ್ಚು ಹೆಸರಾಂತ ತಜ್ಞರು ಇಲ್ಲಿ ಉಪನ್ಯಾಸ ನೀಡಲಿದ್ದು, ನೇರ ಶಸ್ತ್ರಚಿಕಿತ್ಸೆಗಳ (Live Surgeries) ಪ್ರದರ್ಶನವೂ ಇರಲಿದೆ. ಡಾ. ಎ. ಲೊಂಬಾರ್ಡಿ, ಜಾವೇದ್ ಪರ್ವಿಜಿ ಮತ್ತು ರಾಮನ್ ಕುಗಾಟ್ ಅವರಂತಹ ವಿಶ್ವವಿಖ್ಯಾತ ಪ್ರಾಧ್ಯಾಪಕರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ.
ಕೀಲು ಬದಲಿ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಡಾ. ಪ್ರಶಾಂತ್ ಅವರು ನೀಡಿರುವ ಗಣನೀಯ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಇದು ಮೈಸೂರಿನ ವೈದ್ಯಕೀಯ ಕ್ಷೇತ್ರದ ಪರಿಣತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ.
Key words: Global Knee Summit 2026, Mysore, Bogadi Prashanth, selected







