ಶಿಕ್ಷಣದಲ್ಲಿ ಜಾಗತಿಕ ಮಟ್ಟದ ಸಹಭಾಗಿತ್ವ ಮುಖ್ಯ- ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ಡಿಸೆಂಬರ್,16,2022(www.justkannada.in):  ಶಿಕ್ಷಣ ವ್ಯವಸ್ಥೆಯಲ್ಲಿ ಹೊಸತನದ ಚಿಂತನೆಗಳು ಇಂದು ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಮತ್ತು ವೈವಿಧ್ಯಮಯವಾಗಿ ಚಿಂತಿಸಬೇಕಾಗಿದೆ. ಇದು ಸಾಧ್ಯವಾಗಬೇಕು ಎಂದರೆ, ಜಾಗತಿಕ ಮಟ್ಟದ ವಿ.ವಿ.ಗಳೊಂದಿಗೆ ಸಹಭಾಗಿತ್ವ ಅನಿವಾರ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಪದ್ಮಶ್ರೀ ಜೀವವಿಜ್ಞಾನಗಳ ಶಿಕ್ಷಣ ಸಂಸ್ಥೆಯು ಅಮೆರಿಕದ ಅಲ್ವೆರ್ನಿಯಾ ವಿವಿ ಜತೆಗೂಡಿ ಆರಂಭಿಸಿರುವ ಎಂಬಿಎ (ಹೆಲ್ತ್‌ಕೇರ್) ಕೋರ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ  ಸಚಿವ ಅಶ್ವಥ್ ನಾರಾಯಣ್ ಮಾತನಾಡಿದರು.

ನಾವು ಉನ್ನತ ಶಿಕ್ಷಣದ ಮೂಲಕ ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯನ್ನು ಸಾಧಿಸಬೇಕು. ಇದಕ್ಕಾಗಿ ಸಾಂಪ್ರದಾಯಿಕ ಕಲಿಕಾ ಕ್ರಮಗಳಿಂದ ಹೊರಬರಬೇಕು. ವಿದ್ಯಾರ್ಥಿಗಳು ಕಲಿಕೆಯನ್ನು ಮುಗಿಸಿದ ಕೂಡಲೇ ಅಗತ್ಯ ಕೌಶಲಗಳೊಂದಿಗೆ ಉದ್ಯೋಗ ಮಾರುಕಟ್ಟೆಗೆ ಲಭ್ಯವಾಗುವಂತೆ ಇರಬೇಕು ಎಂದು ಅವರು ಪ್ರತಿಪಾದಿಸಿದರು.

ಶಿಕ್ಷಣ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಇಲ್ಲಿ ಯೋಜನೆಗಳು ತ್ವರಿತ ಗತಿಯಲ್ಲಿ ಅನುಷ್ಠಾನ ಗೊಳ್ಳಬೇಕು. ಆಗ ಮಾತ್ರ ಎದುರುಗಿರುವ ಅವಕಾಶಗಳನ್ನು ಬಾಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಬೆಂಗಳೂರು ಮತ್ತು ಕರ್ನಾಟಕ ಐಟಿ, ಬಿಟಿ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳ ನಗರವಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಇಂತಹ ಉದ್ದಿಮೆಗಳ ಜತೆ ಅರ್ಥಪೂರ್ಣ ಸಂಬಂಧವನ್ನು ಹೊಂದಬೇಕು ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಅರುಣ್ ಸೀತಾರಾಂ, ನಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

Key words: Global- cooperation -education – important- Minister-Ashwath Narayan