ನಿಮ್ಮ ತಂದೆ ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೇ ಬದುಕಿನ ಅಂತ್ಯ ಕಂಡರು: ರಾಹುಲ್ ಗಾಂಧಿ ವಿರುದ್ಧ ಕಿಡಿಕಾರುವ ಬರದಲ್ಲಿ ಹೊಸ ವಿವಾದ ಸೃಷ್ಟಿಸಿದ ಪ್ರಧಾನಿ ಮೋದಿ

Promotion

ಲಖನೌ:ಮೇ-5:(www.justkannada.in) ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ನಂಬರ್ 1 ಭ್ರಷ್ಟಾಚಾರಿ. ರಾಜೀವ್ ಗಾಂಧಿ ಭ್ರಷ್ಟಾಚಾರಿ ಹಣೆಪಟ್ಟಿಕಟ್ಟಿಕೊಂಡೇ ಬದುಕಿನ ಅಂತ್ಯಕಂಡರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೊಸ ವಿವಾದ ಸೃಷ್ಠಿಸಿದ್ದಾರೆ.

ಲಖನೌನಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ನಿಮ್ಮ ತಂದೆ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು. ರಾಜೀವ್ ಗಾಂಧಿ ಭ್ರಷ್ಟಾಚಾರದಲ್ಲಿ ನಂಬರ್ 1 ಎಂದು ನಿಮ್ಮವರೇ ಹೇಳುತ್ತಾರೆ ಎಂದು ಹೇಳುವ ಮೂಲಕ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ರಫೇಲ್‌ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದಂತೆ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದಷ್ಟೇ ರಾಹುಲ್ ಗಾಂಧಿ ಅವರ ಏಕೈಕ ಗುರಿಯಾಗಿದೆ. ನಿಮ್ಮ ತಂದೆ ರಾಜೀವ್‌ ಗಾಂಧಿ ತಮ್ಮ ಆಪ್ತರ ನಡುವೆ ಮಾತ್ರ ಮಿಸ್ಟರ್ ಕ್ಲೀನ್ ಎನಿಸಿಕೊಂಡಿದ್ದರು. ಆದರೆ ಅವರ ಜೀವನ ಭ್ರಷ್ಟಾಚಾರಿ ನಂ.1 ಎಂಬ ಕಳಂಕದಲ್ಲೇ ಕೊನೆಗೊಂಡಿತು.

1980 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬೋಪೋರ್ಸ್ ಹಗರಣ ನಡೆದಿತ್ತು, ಸೈನ್ಯಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವ ಸ್ವೀಡೀಶ್ ಮೂಲದ ಬೋಪೋರ್ಸ್ ಕಂಪನಿಯಿಂದ ರಾಜೀವ್ ಗಾಂಧಿ ದೊಡ್ಡ ಮೊತ್ತದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು. ಆದರೆ ರಾಜೀವ್‌ ಗಾಂಧಿಯವರು ಲಂಚ ಸ್ವೀಕರಿಸಿರುವ ಕುರಿತು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್‌ ತಿಳಿಸಿತ್ತು ಎಂದು ಹೇಳಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಹಂಕಾರದಿಂದಲೇ ಕುಸಿಯುತ್ತಾರೆ, ಒಂದೆಡೆ ಸಮಾಜವಾದಿ ಪಕ್ಷದ ಮುಖಂಡರು ಕಾಂಗ್ರೆಸ್‌ ಜತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅದೇ ಸಮಾಜವಾದಿ ಪಕ್ಷದ ಜತೆ ಮಹಾ ಘಟಬಂಧನ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ, ಕಾಂಗ್ರೆಸ್‌ಗೆ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ ಎಂದು ಗುಡುಗಿದರು.

Your Father’s Life Ended As ‘Corrupt No. 1: PM Modi To Rahul Gandhi