ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರು ಬದಲಾಗಲ್ಲ: ಸಚಿವ ಸೋಮಶೇಖರ್

Promotion

ಪೊನ್ನಂಪೇಟೆ, ಕೊಡಗು, ನವೆಂಬರ್ 29, 2020 (www.justkannada.in): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆಯೂ ಇಲ್ಲ. ಅವರ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಯವರು ನುಡಿದಂತೆ ನಡೆಯುವವರು ಅವರು ಮಾತು ಕೊಟ್ಟಂತೆ ನಮ್ಮೆಲ್ಲರನ್ನು ಸಚಿವರನ್ನಾಗಿ ಮಾಡಿದ್ದಾರೆ. ಅಲ್ಲದೆ ಸೋತವರಿಗೂ ಕೂಡ ಮಂತ್ರಿಗಿರಿ ಕೊಟ್ಟಿದ್ದಾರೆ. ಇನ್ನೂ ಸಂಪುಟ ವಿಸ್ತರಣೆಯಾಗಲಿ, ಪುನರಾಚನೆಯಾಗಲೀ ಆಗಿಲ್ಲ. ಅದನ್ನು ಮಾಡುವ ಸಮಯದಲ್ಲಿ ಯಾರಿಗೆ ಸ್ಥಾನ ಕೊಡಬೇಕು..? ಕೊಡಬಾರದು..? ಎಂಬ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಲೂ ಸಹ ಅವರು ಉಳಿದವರನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈಗ ಪಕ್ಷದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪ್ರಮುಖ ಮುಖಂಡರುಗಳ ಸಭೆಯನ್ನು ನಡೆಸುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಯಾವ ರೀತಿ ಜನರಿಗೆ ಮುಟ್ಟಿಸಬೇಕು? ಯಾವ ರೀತಿಯಲ್ಲಿ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬೇಕು? ಅದಕ್ಕೆ ನಮ್ಮ ಬೆಂಬಲ ಹೇಗಿದೆ ಎಂಬ ಬಗ್ಗೆ ಇಲ್ಲಿ ಕಾರ್ಯಕರ್ತರಿಗೆ ಮಾಹಿತಿ ನೀಡಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದು ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಆದೇಶದ ಮೇರೆಗೆ ಮಾಡುತ್ತಿರುವ ಕಾರ್ಯವಾಗಿದೆ. ಈ ಮೂಲಕ ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.