ಬಲಿಷ್ಟ  ಅಂಗ್ಲ ಪಡೆ ಬಗ್ಗು ಬಡಿಯಲು ಕೊಹ್ಲಿ ಪಡೆ ಸಜ್ಜು: ಟಾಸ್  ಗೆದ್ದ ಇಂಗ್ಲೇಂಡ್ ಬ್ಯಾಟಿಂಗ್ ಆಯ್ಕೆ…

Promotion

ಬೆಂಗಳೂರು,ಜೂ.30,2019(www.justkannada.in): ವಿಶ್ವಕಪ್​ನ 2019ರಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಇಂದು ಬಲಿಷ್ಟ ಇಂಗ್ಲೇಂಡ್ ವಿರುದ್ದ ಕದನಕ್ಕಿಳಿದಿದ್ದು, ಟಾಸ್ ಗೆದ್ದ  ಇಂಗ್ಲೇಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಇಂದಿನ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿ ಆಗುತ್ತಿವೆ. ಮೊದಲ ಬಾರಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡ ಸೆಣೆಸಾಟ ನಡೆಸುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯದ  ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.

ಇಂಗ್ಲೆಂಡ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದರೇ ಟೀಂ ಇಂಡಿಯಾ  ಈ ಪಂದ್ಯ ಗೆದ್ದರೆ ಸೆಮಿ ಫೈನಲ್‌ ಗೆ ಲಗ್ಗೆಯಿಡಲಿದೆ ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ವಿಶ್ವಕಪ್​ನಿಂದಲೇ ಹೊರಬೀಳುವ ಹಂತಕ್ಕೆ ತಲುಪಲಿದೆ.

ಇನ್ನು  ಟೀಂ ಇಂಡಿಯಾ ಆಡಿರುವ ಆರು ಪಂದ್ಯಗಳಲ್ಲಿ ಐದರನ್ನ ಗೆಲುವು ಸಾಧಿಸಿದ್ದು ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.  ಇಂದು ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಭಾರತ ಐಸಿಸಿ ಶ್ರೇಯಾಂಕದಲ್ಲೂ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ.

ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿರುವ ಭಾರತ ತಂಡಕ್ಕೆ ಕೊರತೆಯೆಂದರೇ ಅದು  ನಾಲ್ಕನೇ ಕ್ರಮಾಂಕದ್ದು, ಹೀಗಾಗಿ ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ವಿಜಯ್ ಶಂಕರ್ ಅನ್ನು ಕೈಬಿಟ್ಟು ಇಂದಿನ ಪಂದ್ಯಕ್ಕೆ ರಿಷಬ್ ಪಂತ್ ಗೆ ಸ್ಥಾನ ನೀಡಲಾಗಿದೆ.

ಇನ್ನು  ಇಂಗ್ಲೆಂಡ್‌ ತಂಡ ಸಹ ಬಲಿಷ್ಟವಾಗಿದ್ದು,  ನಾಯಕ ಇಯಾನ್‌ ಮಾರ್ಗನ್‌ ಬ್ಯಾಟಿಂಗ್‌ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಇವರ ಜೊತೆ ಜೋ ರೂಟ್,  ಜೋಸ್ ಬಟ್ಲರ್ , ಬೆನ್ ಸ್ಟೋಕ್ಸ್, ಜಾಣಿ ಬೈರ್​ಸ್ಟೋ ಕೂಡ ಇದ್ದಾರೆ.

ತಂಡಗಳು ಇಂತಿವೆ…

ಭಾರತ: ಕೆ.ಎಲ್‌. ರಾಹುಲ್‌, ರೋಹಿತ್‌ ಶರ್ಮ, ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ಧೋನಿ, ಹಾರ್ದಿಕ್‌ ಪಾಂಡ್ಯ, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಚಹಲ್‌, ಜಸ್ಪ್ರಿತ್ ಬುಮ್ರಾ.

ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಜೋ ರೂಟ್‌, ಇಯಾನ್‌ ಮಾರ್ಗನ್‌, ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಕ್ರಿಸ್‌ ವೋಕ್ಸ್‌,  ಆದಿಲ್‌ ರಶೀದ್‌, ಜೋಫ‌ ಆರ್ಚರ್‌, ಮಾರ್ಕ್‌ ವುಡ್‌. ಪ್ಲಂಕೆಟ್.

 

Keywords: worldcup2019- india- England- won – toss-batting