ಲಖಿಂಪುರದಲ್ಲಿ ರೈತರ ಮೇಲೆ ದೌರ್ಜನ್ಯ: ಕೇಂದ್ರ ಮತ್ತು ಯುಪಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ.

ಬೆಂಗಳೂರು,ಅಕ್ಟೋಬರ್,6,2021(www.justkannada.in): ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ದೌರ್ಜನ್ಯ ನಡೆಸುತ್ತಿವೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ಇಂದು ಪತ್ರಿಕಾಗೋಷ್ಠಿ  ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಿಷ್ಟು….

ಮೂರು ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು ಕಳೆದ 10 ತಿಂಗಳಿಂದ ಚಳುವಳಿ ಮಾಡುತ್ತಿದ್ದಾರೆ. ಇಂತಹ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಈ ಹಿಂದೆ ಪ್ರತಿಭಟನಾನಿರತ ರೈತರಿಗೆ ಆತ ಪಾಠ ಕಲಿಸುವುದಾಗಿ ಎಚ್ಚರಿಸಿದ್ದು ನಾವೆಲ್ಲ ಮಾಧ್ಯಮಗಳ ಮೂಲಕ ನೋಡಿದ್ದೇವೆ. ರೈತರು ನ್ಯಾಯಯುತ ವೇದಿಕೆ ಇಟ್ಟ ಮೇಲೆ ಸ್ಪಂದಿಸಬೇಕಾದದ್ದು ಕೇಂದ್ರ ಸರ್ಕಾರದ ಕೆಲಸ. ಕಾರಣ ಆ ಮೂರು ಕಾನೂನು ಮಾಡಿರುವುದು ಕೇಂದ್ರ ಸರ್ಕಾರ. ಆದರೆ ಇಂದು ರಾಜ್ಯ ಸರ್ಕಾರಗಳಿಗೆ ಕುಮ್ಮಕ್ಕು ನೀಡಿ ರೈತರು ಪ್ರತಿಭಟನೆ ನಡೆಸದಂತೆ, ಬೀದಿಗಿಳಿಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೋರಾಟ ಮಾಡಿದರೆ ರೈತರಿಗೆ ಪಾಠ ಕಳಿಸುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಅವರೂ ಹೇಳಿದ್ದಾರೆ.

2021ರ ಆಕ್ಟೊಬರ್ 3ರಂದು, ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಅವರು ‘ಪ್ರತಿ ಜಿಲ್ಲೆಯಲ್ಲಿ ನಮ್ಮ ಜನ 7100 ಜನರನ್ನು ಕರೆತಂದು, ರೈತರನ್ನು ದೊಣ್ಣೆಯಲ್ಲಿ ಹೊಡೆದು ಓಡಿಸಬೇಕು, ನಂತರದ ಪರಿಣಾಮ ಲೆಕ್ಕಿಸಬೇಡಿ’ ಎಂದು ಕರೆ ನೀಡಿದ್ದರು.

ಇನ್ನು ಸೆಪ್ಟೆಂಬರ್ 25ರಂದು ಅಜಯ್ ಮಿಶ್ರಾ ಅವರು ಲಖಿಂಪುರ ಖೇರಿಯಲ್ಲಿ ‘ರೈತರು ಬದಲಾದರೆ ಒಳ್ಳೆಯದು, ಇಲ್ಲದಿದ್ದರೆ ನಾವು ಕೇವಲ 2 ನಿಮಿಷದಲ್ಲಿ ನಿಮಗೆ ಪಾಠ ಕಲಿಸಿ, ಎಲ್ಲವನ್ನು ಸರಿ ಮಾಡುತ್ತೇವೆ’ ಎಂದಿದ್ದರು. ಈಗ ಅವರ ಪುತ್ರ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದಿದ್ದಾನೆ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

ಈ ಘಟನೆ ನಂತರ ಉತ್ತರ ಪ್ರದೇಶ ಉಸ್ತುವಾರಿ ವಹಿಸಿರುವ ಪ್ರಿಯಾಂಕಾ ಗಾಂಧಿ ಅವರು ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುವಾಗ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ. ಅವರನ್ನು ಈ ರೀತಿ ಬಂಧಿಸಿರುವುದು ಅಪರಾಧ. ‘

ನೀವು ಬಂಧನ ವಾರೆಂಟ್  ತೋರಿಸಿ, ಯಾವ ಕಾರಣಕ್ಕೆ, ಯಾವ ಕಾನೂನಿನ ಅಡಿಯಲ್ಲಿ ಬಂಧಿಸುತ್ತಿದ್ದೀರಿ’ ಎಂದು ಪ್ರಿಯಾಂಕಾ ಅವರು ಪೊಲೀಸರನ್ನು ಕೇಳಿದ್ದನ್ನು ನೀವೆಲ್ಲ ನೋಡಿದ್ದೀರಿ. ಅವರನ್ನು ಬಂಧಿಸಿ 40 ಗಂಟೆಗಳಾದರೂ ಅವರ ವಿರುದ್ಧ ಕ್ರಮವೂ ಇಲ್ಲ, ವಾರೆಂಟ್ ಕೂಡ ಇಲ್ಲ.

ಮೋದಿಯವರು ನಿನ್ನೆ ಲಖನೌನಲ್ಲೇ ಇದ್ದರೂ ಅವರು ರೈತರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡದೇ ನಿರ್ಲಕ್ಷಿಸಿದ್ದಾರೆ. ರೈತರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ. ಪ್ರಿಯಾಂಕಾ ಗಾಂಧಿ ಅವರು ಯಾಕೆ ಕಾನೂನು ಬಾಹಿರವಾಗಿ ಬಂಧಿಸಿದ್ದೀರಿ ಎಂಬ ಪ್ರಶ್ನೆಯನ್ನೂ ಮಾಡಿಲ್ಲ. ನಂತರ ಪ್ರಿಯಾಂಕಾ ಗಾಂಧಿ ಅವರೇ, ‘ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ ಈ ಬಗ್ಗೆ ಗಮನಹರಿಸಿ’ ಎಂದು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು ರಾಹುಲ್ ಗಾಂಧಿ ಅವರು ಕೂಡ ಇಂದು ಪ್ರತಿಕ್ರಿಯೆ ನೀಡಿದ್ದು, ‘ನಮ್ಮ ಕುಟುಂಬದವರಿಗೆ ಯಾರು ಎಷ್ಟೇ ಕಿರುಕುಳ ನೀಡಿದರೂ ನಾವು ರೈತರಿಗಾಗಿ, ಜನರಿಗಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದಿದ್ದಾರೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧಶರಾದ ಮದನ್ ಲೋಕು ಅವರು, ‘ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದು ಕಾನೂನು ಬಾಹಿರ. ಪ್ರಿಯಾಂಕಾ ಗಾಂಧಿ ಅವರನ್ನು ಯಾವುದೇ ಆದೇಶ ಇಲ್ಲದೆ ಬಂಧಿಸಲಾಗಿದ್ದು, ಇದು ಅಸಂವಿಧಾನಿಕ.  ಅವರನ್ನು ಕಾನೂನು ಬಾಹಿರವಾಗಿ ಅತಿಥಿ ಗೃಹದಲ್ಲಿ ಇರಿಸಲಾಗಿದೆ. ಪೊಲೀಸರು ಯಾರನ್ನೇ ಬಂಧಿಸಿದರೂ ಅವರನ್ನು ಪೊಲೀಸ್ ಠಾಣೆ ಅಥವಾ ಜೈಲಿನಲ್ಲಿ ಇರಿಸಬೇಕು. ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ಇರಿಸಿರುವ ಅತಿಥಿ ಗೃಹವನ್ನು ಉಪ ಜೈಲು ಎಂದು ಘೋ,ಣೆಯೂ ಮಾಡಿಲ್ಲ. ಇದು ಕೂಡ ಕಾನೂನು ಬಾಹಿರ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ

ಈ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಯಾವ ಮಟ್ಟದಲ್ಲಿದೆ? ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಬೆದರಿಕೆ ನೀತಿಯನ್ನು ಸರ್ಕಾರ ಅಳವಡಿಸಿಕೊಂಡಿದ್ದು ಇದು ದೇಶಕ್ಕೆ ಮಾರಕ ಎಂದು ಖರ್ಗೆ  ವಾಗ್ದಾಳಿ ನಡೆಸಿದರು.

ಖಟ್ಟರ್ ಹಾಗೂ ಮಿಶ್ರಾ ಅವರ ಹೇಳಿಕೆ ಆಧಾರದ ಮೇಲೆ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಬೇಕು. ಆದರೆ ಈ ದೇಶದಲ್ಲಿ ಪತ್ರಿಕೆ, ವಿರೋಧ ಪಕ್ಷಗಳ ನಾಯಕರು, ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಪ್ರಿಯಾಂಕಾ ಗಾಂಧಿ ಅವರ ಬಂಧನ ಖಂಡಿಸುತ್ತೇವೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು. ಸಾಂತ್ವನ ಹೇಳುವವರನ್ನು ಬಂಧಿಸುವವರು, ಕೇಂದ್ರ ಸಚಿವರ ಮಗನ ಬಂಧನ ಆಗಿಲ್ಲ ಯಾಕೆ? ರೈತರ ಮೇಲೆ ಹರಿದ ಕಾರಿನಲ್ಲಿ ಆತ ಇದ್ದ ಎಂಬ ಆರೋಪ ಇದೆ. ಆದರೂ ಅವರನ್ನು ಬಂಧಿಸಲಾಗಿಲ್ಲ ಯಾಕೆ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಲಖಿಂಪುರಕ್ಕೆ ಕೆಲವು ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಹೋಗಿ ಭೇಟಿ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ನೀಡಿರುವಾಗ ಕಾಂಗ್ರೆಸ್ ನಾಯಕರಿಗೆ ಆ ಪ್ರದೇಶಕ್ಕೆ ಹೋಗಲು ಅವಕಾಶ ಯಾಕಿಲ್ಲ? ಇದು ಕಾಂಗ್ರೆಸ್ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡುತ್ತಿರುವುದಕ್ಕೆ ಸಾಕ್ಷಿ.

ರೈತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ, ಸುಳ್ಳು, ಸತ್ಯ ತಿರುಚಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರೈತರ ಮೇಲೆ ಹರಿದ ಎಸ್ ಯುವಿ ಕಾರಿನ ಎಡಭಾಗದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಇದ್ದ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳೇ ಹೇಳುತ್ತಿದ್ದು, ಆತನನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲು ಅವರು ಮಾಡಿದ ತಪ್ಪೇನು? ಅವರನ್ನು ಯಾವ ಕಾರಣಕ್ಕೆ ಕಾನೂನು ಬಾಹಿರವಾಗಿ ಬಂಧಿಸಲಾಗಿದೆ? ಅವರನ್ನು ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಿಲ್ಲ ಯಾಕೆ? ಬಿಜೆಪಿ ಸರ್ಕಾರಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಹಾಗೂ ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಖರ್ಗೆ ಆಗ್ರಹಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಯಾವಾಗಲೂ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಾರೆ. ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಶವವನ್ನು ಅವರ ಪೋಷಕರಿಗೆ ತಿಳಿಸದಂತೆ ರಾತ್ರೋರಾತ್ರಿ ಸುಟ್ಟರು. ಆ ಮೂಲಕ ಇಂತಹ ಕೆಲಸಗಳಿಗೆ ಪ್ರಚೋದನೆ, ಪ್ರೋತ್ಸಾಹ ನೀಡುತ್ತಿದ್ದು, ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರು ಬಾಯಲ್ಲಿ ರಾಮ, ಮಗ್ಗುಲಲ್ಲಿ ಚೂರಿ ಎಂಬ ಮಾತಿನಂತೆ ಅವರು ನಡೆದುಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶ ಹಾಗೂ ಹರ್ಯಾಣ ರಾಜ್ಯಗಳಲ್ಲಿ ರೈತರ ಮೇಲಿನ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಇಂತಹ ದಬ್ಬಾಳಿಕೆತನ್ನ ನಾವು, ನೀವು ಪ್ರಶ್ನಿಸಬೇಕು, ಖಂಡಿಸಬೇಕು. ಪ್ರಿಯಾಂಕಾ ಗಾಂಧಿ ಅವರ ಬಂಧನ ವಿಚಾರವಾಗಿ ನಾವು ಜನತೆಯ ಮುಂದೆ ವಿಚಾರ ಮಂಡಿಸುತ್ತಿದ್ದೇವೆ. ನಮ್ಮ ಬಳಿ ಅಧಿಕಾರವಿಲ್ಲ, ನಾವು ವಿರೋಧ ಪಕ್ಷವಾಗಿ ನಮ್ಮ ಹೋರಾಟ ಮಾಡುತ್ತಿದ್ದೇವೆ. ನಮಗೆ ಅಧಿಕಾರ ಇದ್ದಿದ್ದರೆ, ಪ್ರಿಯಾಂಕಾ ಗಾಂಧಿ ಅವರನ್ನು ಬಡುಗಡೆ ಮಾಡಿಸಿ, ರೈತರನ್ನು ಹತ್ಯೆ ಮಾಡಿದವರನ್ನು ಬಂಧಿಸುತ್ತಿದ್ದೆವು.

ಬಿಜೆಪಿಯವರು ಏನೇ ಆದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತದೆ. ರೈತರನ್ನು ಹತ್ಯೆ ಮಾಡಲಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದೇನಿದೆ. ಪ್ರಿಯಾಂಕಾ ಗಾಂಧಿ ಅವರು ಗುಂಪು ಕಟ್ಟಿಕೊಂಡು ರಾಜಕೀಯ ಮಾಡಲು ಹೊರಟಿದ್ದರಾ? ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದರು. ಅದು ತಪ್ಪಾ? ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ನೆಪ ಹೇಳುತ್ತಾರೆ. ಈ ವಿಚಾರದಲ್ಲಿ ರಾಜಕೀಯ ಯಾರು ಮಾಡುತ್ತಿದ್ದಾರೆ ನೀವೇ ನೋಡಿ ಎಂದು ಹರಿಹಾಯ್ದರು.

ಪ್ರತಿಭಟನೆ ನಡೆಸುತ್ತಿರುವ ಕಿಸಾನ್ ಸೆಲ್ ಅಥವಾ ಯುನೈಟೆಡ್ ಕಿಸಾನ್ ಮೋರ್ಚಾ ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದಾಗ ಕೋರ್ಟ್ ಪ್ರತಿಭಟನೆ ಔಚಿತ್ಯ ಪ್ರಶ್ನಿಸಿದಾಗ ನಾವು ಅದನ್ನು ಒಪ್ಪಬಹುದಿತ್ತು. ಯಾರೋ ಮೂರನೇ ವ್ಯಕ್ತಿ ಪಿಐಎಲ್ ದಾಖಲಿಸಿದಾಗ ನ್ಯಾಯಾಲಯದ ಅಭಿಪ್ರಾಯವನ್ನು ಹಿಡಿದು ಅವರು ರೈತರ ಹತ್ಯೆ ಪ್ರಕರಣ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಈ ಸರ್ಕಾರ ದಪ್ಪ ಚರ್ಮದವರಂತೆ ವರ್ತಿಸುತ್ತಿದೆ.  ನಮಗೆ ನಮ್ಮದೇ ಆದ ಜವಾಬ್ದಾರಿ ನೀಡಿದ್ದು, ನಾವು ಅದರಂತೆ ಹೋರಾಟ ಮಾಡುತ್ತಿದ್ದೇವೆ. ನಾನು ನಿನ್ನೆ ಜಿಲ್ಲಾಮಟ್ಟದಲ್ಲಿ, ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನಲ್ಲಿ ಹೋರಾಟ ಮಾಡಿದೆ. ನಾವು ಹೋರಾಟ ಮಾಡಲು ಹಿಂಜರಿಯುವುದಿಲ್ಲ.

ಬಿಜೆಪಿ ಸರ್ಕಾರ ರೈತರ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು 45 ಲಕ್ಷ ಪರಿಹಾರ ಘೋಷಿಸಿದೆ. ಆದರೆ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಏನು ಹೇಳುತ್ತೀರಿ? ರೈತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳುವುದು ತಪ್ಪೇ? ಅವರ ಪರಿಹಾರ ಘೋಷಣೆ ಕೇವಲ ತೋರಿಕೆಯ ಪ್ರಯತ್ನವಾಗಿದೆ. ಕೊಲೆಗಡುಕರನ್ನು ಮೋದಲು ಬಂಧಿಸಿ ಎಂಬುದು ನಮ್ಮ ಆಗ್ರಹ.

ರೈತರ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಕತ್ವ ಎಂದು ಹೇಳಲು ಪ್ರತಿಭಟನೆ ಮಾಡುತ್ತಿರುವ ರೈತರು ಕಾಂಗ್ರೆಸ್ ಸದಸ್ಯರೇ? ಈ ಕರಾಳ ಕಾನೂನು ವಿರುದ್ಧ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹೋರಾಟ ಮಾಡಿದ್ದೇವೆ. ನಮ್ಮ ಅಭಿಪ್ರಾಯ ಕೇಳದೇ ಈ ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ ಎಂಧು ಬೇಸರ ವ್ಯಕ್ತಪಡಿಸಿದರು.

ಆರ್ ಎಸ್ ಎಸ್ ಎಂದಿಗೂ ಬಡವರ ಪರವಾಗಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಅವರು ಮನುಸ್ಮೃತಿಯನ್ನು ನಂಬುತ್ತಾರೆ. ಆರ್ ಎಸ್ಎಸ್ ಪುಸ್ತಕಗಳನ್ನು ಓದಿ ನಿಮಗೆ ಅರ್ಥವಾಗುತ್ತದೆ. ನಾನು 16ನೇ ವಯಸ್ಸಿನಿಂದಲೇ ಆರ್ ಎಸ್ಎಸ್ ವಿರುದ್ಧ ಹೋರಾಡುತ್ತಿದ್ದೇನೆ. ಮುಂದೆಯೂ ಹೋರಾಡುತ್ತೇನೆ. ಆರ್ ಎಸ್ ಎಸ್ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ನಾನು ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು ಎಂದರು.

ಈ  ಸುದ್ಧಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ,  ಈಶ್ವರ್ ಖಂಡ್ರೆ, ಧ್ರುವ ನಾರಾಯಣ್ , ಮಾಜಿ ಶಾಸಕರಾದ ಶರಣಬಸಪ್ಪ ದರ್ಶನಾಪುರ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ ವೆಂಕಟೇಶ್, ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷರಾದ ಎ.ಎಸ್ ಪೊನ್ನಣ್ಣ,  ಮಾಜಿ ಸಚಿವ ಹಾಗೂ ಶಾಸಕರಾದ ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು.

Key words: Violence -Farmers – Lakhimpur-congress-leader-Mallikarjuna kharge