ಯಾವುದೇ ಅಮೀಷಕ್ಕೆ ಬಲಿಯಾಗಬೇಡಿ: ನನ್ನನ್ನ ವಿಧಾನ ಪರಿಷತ್ ಗೆ ಕಳುಹಿಸಿ- ವಾಟಾಳ್ ನಾಗರಾಜ್ ಮನವಿ

ಮೈಸೂರು,ಜೂನ್,6,2022(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಭ್ರಷ್ಟಾಚಾರ ನಿಲ್ಲಿಸುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಮೈಸೂರಿನಲ್ಲಿ ಧರಣಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ , ಪರಿಷತ್ ಚುನಾವಣೆಯಲ್ಲಿ ಹಣ, ಜಾತಿ ಬಹಳ ಪ್ರಾಮುಖ್ಯತೆ ಹೊಂದಿದೆ. ಹೀಗಾಗಿ ಪದವೀಧರ ಯಾವುದೇ ಅಮೀಷದ ಸೋಂಕಿಗೆ ಬಲಿ ಆಗಬಾರದು. ರಾಜ್ಯದ ಕಲ್ಯಾಣದ ಬಗ್ಗೆ ಚಿಂತನೆ ಮಾಡಬೇಕು. ವಕೀಲರ ಸಮಸ್ಯೆ ಕೂಡ ಕೇಳೋರಿಲ್ಲ‌ ಪದವೀಧರು ನಿರುದ್ಯೋಗಿಗಳಾಗಿದ್ದಾರೆ. ಪದವೀಧರ ಸಮಸ್ಯೆ ಪರಿಣಾಮಕಾರಿ ಚರ್ಚೆ ಆಗಬೇಕು.

ಪದವೀಧರ ಮತದಾರ ಜಾತಿ ಬಿಡಬೇಕು. ಸತ್ಯ, ಪ್ರಾಮಾಣಿಕತೆ ತತ್ವ ಸಿದ್ದಾಂತ ನಿಮ್ಮ ಮೂಲ ಧ್ಯೇಯ ಆಗಿರಲಿ. ನಾನು ಪ್ರಾಮಾಣಿಕನಾಗಿ ಚುನಾವಣೆ ಸ್ಪರ್ಧೆ ಮಾಡಿದ್ದಾನೆ. ನನ್ನ ತತ್ವ ಸಿದ್ದಾಂತ, ಪ್ರಾಮಾಣಿಕತೆ ಮೂಲೆ ಗುಂಪಾಗಿದೆ. ನಾನು ಅನೇಕ ಬಾರಿ ಸೋತಿದ್ದೇನೆ. ನಾನು ತತ್ವ ಸಿದ್ಧಾಂತ ಬಿಟ್ಟಿಲ್ಲ. ನನ್ನನ್ನು ದಯಮಾಡಿ ವಿಧಾನ ಪರಿಷತ್ ಗೆ ಕಳುಹಿಸಿ. ಪ್ರಾಮಾಣಿಕ , ಯೋಗ್ಯರು ಚಿಂತನೆ ಮಾಡುವವರು ಹೋಗಬೇಕು. ನೀವು ನನಗೆ ಓಟ್ ಕೊಡಿ ನಿಮ್ಮ ಓಟಿಗೆ ಬೆಲೆ ಬರುತ್ತೆ ಎಂದು ವಾಟಾಳ್ ನಾಗರಾಜ್  ಮನವಿ ಮಾಡಿದರು.

ಚಡ್ಡಿ ರಾಜಕಾರಣ ವಿಚಾರ: ಸಿದ್ದರಾಮಯ್ಯ ನಿರ್ಧಾರ ಬೆಂಬಲಿಸಿದ ವಾಟಾಳ್ ನಾಗರಾಜ್.

ಚಡ್ಡಿ ರಾಜಕಾರಣ ವಿಚಾರ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ  ನಿರ್ಧಾರ ಬೆಂಬಲಿಸಿದ ವಾಟಾಳ್ ನಾಗರಾಜ್, ರಾಜ್ಯದ ಪೊಲೀಸರಿಗೆ ಹಿಂದೆ ಚಡ್ಡಿ ಇತ್ತು. ಹಿಂದೆ ಪೊಲೀಸರಿಗೆ ಹೋರಾಟದ ಮೂಲಕ ಪ್ಯಾಂಟ್ ಕೊಡಿಸಿದ್ದು ವಾಟಾಳ್ ನಾಗರಾಜ್. ಈಗ ಆರ್ ಎಸ್ ಎಸ್ ಚಡ್ಡಿ ಬಿಟ್ಟು ಪ್ಯಾಂಟ್ ಹಾಕಿಕೊಳ್ಳುತ್ತಿದ್ದಾರೆ.ಇದು ಚಡ್ಡಿ ಸುಡುವವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಆರ್ ಎಸ್ ಎಸ್, ಬಿಜೆಪಿ ಬಗ್ಗೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಆದರೆ ಈಗ ಪ್ಯಾಂಟ್ ಇದೆ. ಅವರ ತತ್ವ ಸಿದ್ದಾಂತ ಸುಡುವುದು ಒಳ್ಳೆಯದು.

ಆರ್ ಎಸ್ ಎಸ್ ನವರಿಗೆ ಮಡಿವಂತಿಕೆ ಇದೆ. ಅವರಿಗೆ ಭಾಷೆ, ರಾಜ್ಯ ಯಾವುದೂ ಆರ್ ಎಸ್ ಎಸ್ ಗೆ ಬೇಕಿಲ್ಲ. ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟ ಎಂಬುದು ಆರ್ ಎಸ್ ಎಸ್ ಅವರಿಗೆ ನುಂಗಲಾರದ ತುತ್ತು. ಮುಸಲ್ಮಾನ, ಕ್ರೈಸ್ತ ಅನ್ನುವದನ್ನು ತೆಗೆಯುವುದು ಆರ್ ಎಸ್ ಎಸ್ ಅವರ ಉದ್ದೇಶ. ಏನಾದರೂ ಇದರಲ್ಲಿ ಒಂದು ಸೊನ್ನೆ ವ್ಯತ್ಯಾಸ ಆದರೂ ಕರ್ನಾಟಕದಲ್ಲಿ ಕ್ರಾಂತಿ ಆಗಲಿದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

Key words: Vatal Nagaraj-Protest-Against-Southern Graduate -Electoral -Corruption