ಮುಕ್ತ ವಿವಿ ಕುಲಪತಿ ವಿರುದ್ಧ ವರುಣಾ ಮಹೇಶ್ ವಾಗ್ದಾಳಿ

online-training-ksou-competitive-exam-training-center-mysore
Promotion

ಮೈಸೂರು, ಜನವರಿ 05, 2022: ಭ್ರಷ್ಟಾಚಾರ ಆರೋಪದಡಿ ಕ್ರಿಮಿನಲ್ ಕೇಸ್ ದಾಖಲಾಗಿರುವ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ವಿರುದ್ದ ಕಾಂಗ್ರೆಸ್ ಮುಖಂಡ ವರುಣಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆ ಅಧ್ಯಕ್ಷರೂ ಆಗಿರುವ ವರಣಾ ಮಹೇಶ್ ಅವರು ಕುಲಪತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ವಿದ್ಯಾಶಂಕರ್ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಆದರೂ ಯಾವುದೇ ಸಂಕೋಚವಿಲ್ಲದೇ ಕಳೆದ 3 ರಂದು ರಾಮನಗರದ ತಿಪ್ಪಸಂದ್ರದಲ್ಲಿ ನಡೆದ ಸಂಸ್ಕೃತ ಅಧ್ಯಯನ ಪೀಠ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗಣ್ಯರ ಜೊತೆ ವೇದಿಕೆ ಹಂಚಿಕೊಂಡಿರುವುದು ಖಂಡನೀಯ ಎಂದಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು, ಶಾಸಕರು, ಗಣ್ಯರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ವಿದ್ಯಾಶಂಕರ್ ಭಾಗಿಯಾಗಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಕುಲಪತಿಯನ್ನು ಸಮಾರಂಭಕ್ಕೆ ಆಹ್ವಾನಿಸಿರುವುದು ಮತ್ತು ಅವರನ್ನು ವೇದೀಕೆ ಮೇಲೆ ಕೂರಲು ಅವಕಾಶ ಮಾಡಿಕೊಟ್ಟಿರುವುದು ಶೋಭೆ ತರುವಂತಹದ್ದಲ್ಲ‌ ಎಂದು ಟೀಕಿಸಿದ್ದಾರೆ.

ವಿದ್ಯಾಶಂಕರ್ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿರುವುದನ್ನು ಅರಿತು ಸಮಾರಂಭದಿಂದ ದೂರವಿಟ್ಟಿದ್ದರೆ ಮುಖ್ಯಮಂತ್ರಿಗಳು ಹಾಗೂ ಗಣ್ಯರ ಘನತೆ ಹೆಚ್ಚುತ್ತಿತ್ತು.  ಗಂಭೀರ ಆರೋಪ ಎದುರಿಸುತ್ತಿರುವ ವಿದ್ಯಾಶಂಕರ್ ಅವರ ರಾಜೀನಾಮೆ ಪಡೆಯುವುದನ್ನು ಬಿಟ್ಟು ಅವರಿಗೆ ಶ್ರೀರಕ್ಷೆ ನೀಡುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ‌‌ ಎಂದು ವರುಣಾ ಮಹೇಶ್‌ ದೂರಿದ್ದಾರೆ.